ರೈತರ ಮನೆ ಗೋಡೆಗೆ ಸಾಲದ ನೋಟೀಸ್‌: ರೈತ ಸಂಘ ಪ್ರತಿಭಟನೆ

| Published : Feb 19 2025, 12:47 AM IST

ಸಾರಾಂಶ

ಮನೆ ಕಟ್ಟಲು ಸಾಲ ನೀಡಿದ್ದ ಹೌಸಿಂಗ್ ಫೈನಾನ್ಸ್‌ನವರು ಸಾಲ ಮರುಪಾವತಿ ನೋಟೀಸ್‌ ಮನೆ ಗೋಡೆಗೆ ಅಂಟಿಸಿದ್ದನ್ನು ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ, ಜಿಲ್ಲಾ ಸಮಿತಿಯಿಂದ ತಾಲೂಕಿನ ಮಾಯಕೊಂಡ ಗ್ರಾಮದಿಂದ ದಾವಣಗೆರೆ ಜಿಲ್ಲಾ ಕೇಂದ್ರದವರೆಗೂ ಬೃಹತ್ ಬೈಕ್ ರ್ಯಾಲಿ ಮೂಲಕ ಪ್ರತಿಭಟಿಸಲಾಯಿತು.

- ಮಾಯಕೊಂಡದಿಂದ ದಾವಣಗೆರೆ ಹೌಸಿಂಗ್ ಫೈನಾನ್ಸ್‌ವರೆಗೆ ಬೈಕ್ ರ್ಯಾಲಿ- ಒನ್ ಟೈಮ್‌ ಸೆಟ್ಲ್‌ಮೆಂಟ್ ಅಂತಾ ಬಾಯಿ ತೆಗೆದ ಸಂಸ್ಥೆ ಸಿಬ್ಬಂದಿ ವಿರುದ್ಧ ಗರಂ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಮನೆ ಕಟ್ಟಲು ಸಾಲ ನೀಡಿದ್ದ ಹೌಸಿಂಗ್ ಫೈನಾನ್ಸ್‌ನವರು ಸಾಲ ಮರುಪಾವತಿ ನೋಟೀಸ್‌ ಮನೆ ಗೋಡೆಗೆ ಅಂಟಿಸಿದ್ದನ್ನು ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ, ಜಿಲ್ಲಾ ಸಮಿತಿಯಿಂದ ತಾಲೂಕಿನ ಮಾಯಕೊಂಡ ಗ್ರಾಮದಿಂದ ದಾವಣಗೆರೆ ಜಿಲ್ಲಾ ಕೇಂದ್ರದವರೆಗೂ ಬೃಹತ್ ಬೈಕ್ ರ್ಯಾಲಿ ಮೂಲಕ ಪ್ರತಿಭಟಿಸಲಾಯಿತು.

ಮಾಕೊಂಡ ಗ್ರಾಮದ ರೈತ ಮಾಳಜ್ಜರ ಗುಡ್ಡಪ್ಪ ಸೇರಿದಂತೆ ಅನೇಕ ಗ್ರಾಮಗಳ ರೈತರ ಮನೆಗಳಿಗೆ ಹೌಸಿಂಗ್ ಫೈನಾನ್ಸ್‌ನವರು ಸಾಲ ಮರುಪಾವತಿ ನೋಟೀಸ್ ಅಂಟಿಸಿದ್ದಾರೆ. ಈ ಹಿನ್ನೆಲೆ ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಇತರರ ನೇತೃತ್ವದಲ್ಲಿ ಖಂಡನೆ ವ್ಯಕ್ತಪಡಿಸಿ, ಜಿಲ್ಲಾ ಕೇಂದ್ರದವರೆಗೂ ಬೈಕ್ ರ್ಯಾಲಿ ನಡೆಸಿ, ನಗರದ ಕುವೆಂಪು ರಸ್ತೆಯ ಹೋಂ ಫೈನಾನ್ಸ್ ಎದುರು ಧರಣಿ ನಡೆಸಲಾಯಿತು.

ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿ, ಮಾಯಕೊಂಡದ ರೈತ ಮಾಳಜ್ಜರ ಗುಡ್ಡಪ್ಪ ಗೃಹಂ ಹೌಸಿಂಗ್ ಫೈನಾನ್ಸ್‌ನಲ್ಲಿ ಮನೆ ಕಟ್ಟಲು ₹18 ಲಕ್ಷ ಸಾಲ ಪಡೆದಿದ್ದರು. ಈಗಾಗಲೇ 9 ಲಕ್ಷ ಸಾಲ ಮರುಪಾವತಿಸಿದ್ದಾರೆ. ಆದರೆ, ಫೈನಾನ್ಸ್‌ನವರು ಮೊದಲು ಕಟ್ಟಿದ ಎಲ್ಲ ಸಾಲದ ಕಂತುಗಳನ್ನು ಬಡ್ಡಿಗೆ ಜಮಾ ಮಾಡಿ, ಇನ್ನೂ ₹18 ಲಕ್ಷ ಸಾಲ ಬಾಕಿ ಇದೆ ಎಂಬುದಾಗಿ ಮನೆ ಗೋಡೆಗೆ ನೋಟಿಸ್ ಅಂಟಿಸಿ, ಹರಾಜು ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಳಜ್ಜರ ಗುಡ್ಡಪ್ಪ ಕೇವಲ 2 ಕಂತು ಬಾಕಿ ಉಳಿಸಿಕೊಂಡಿದ್ದರು. ಆದರೂ, ಇನ್ನೂ ₹18 ಲಕ್ಷ ಬಾಕಿ ಇದೆಯೆಂದು ಫೈನಾನ್ಸ್‌ನವರ ಬೆದರಿಕೆಯಿಂದ ಗುಡ್ಡಪ್ಪ ನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಕುಟುಂಬ ಸದಸ್ಯರು ಧೈರ್ಯ ನೀಡಿದ ನಂತರ ವಿಷಯ ತಿಳಿದು, ರೈತ ಸಂಘ ಈ ಹೋರಾಟಕ್ಕಿಳಿಯಿತು. ರೈತ ಗುಡ್ಡಪ್ಪನಿಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

2 ಕಂತು ಬಾಕಿ ಉಳಿಸಿಕೊಂಡರೆ ಆಸ್ತಿ ಹರಾಜಿಗೆ ಕಾನೂನಿನಲ್ಲಿ ಅವಕಾಶವೇ ಇಲ್ಲ. ಆದರೂ, ಹರಾಜು ಸಂಬಂಧ ನೋಟಿಸ್ ಅಂಟಿಸಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಹಾಗಾಗಿ, ಫೈನಾನ್ಸ್ ಸಿಬ್ಬಂದಿ ಹರಾಜು ಆದೇಶ ಪ್ರತಿ ತೋರಿಸಬೇಕು. ಸೆಟ್ಲ್‌ಮೆಂಟ್‌ ವಿಷಯ ನಂತರ. ಆದರೆ ಪ್ರಾಮಾಣಿಕವಾಗಿ ರೈತ ಗುಡ್ಡಪ್ಪ ಸಾಲ ತೀರಿಸುತ್ತಾರೆ. ಗೌರವಯುತವಾಗಿ ಸಾಲ ವಸೂಲಾತಿ ಮಾಡಿ. ಇದನ್ನು ಬಿಟ್ಟು, ಮನೆ ಬಾಗಿಲಿಗೆ ನೋಟಿಸ್ ಅಂಟಿಸಿ ಬಂದರೆ ಪ್ರಾಮಾಣಿಕ ರೈತನಿಗೆ ಅವಮಾನಿಸಿದಂತೆ ಎಂದು ತರಾಟೆಗೆ ತೆಗೆದುಕೊಂಡರು.

ರಾಜ್ಯ ಸರ್ಕಾರ ಈಚೆಗೆ ಜಾರಿಗೆ ತಂದ ಸುಗ್ರೀವಾಜ್ಞೆ ಅನ್ವಯ ಫೈನಾನ್ಸ್ ವಿರುದ್ಧ ದೂರು ನೀಡುತ್ತೇವೆ. ಗುಡ್ಡಪ್ಪ ಸೇರಿದಂತೆ ಸಾಲ ಪಡೆದ ಯಾವುದೇ ರೈತನ ಮನೆ ಬಾಗಿಲಿಗೂ ನೋಟಿಸ್ ಅಂಟಿಸದೇ ಸಾಲ ವಸೂಲಾತಿ ಮಾಡಬೇಕು. ಬಿ.ಕಲ್ಪನಹಳ್ಳಿಯಲ್ಲಿ 5 ಮನೆ, ಸಿರಗಾನಹಳ್ಳಿ, ಚಿನ್ನಸಮುದ್ರ ಸೇರಿದಂತೆ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಇದೇ ರೀತಿ ಸಾಲ ಪಡೆದ ರೈತರ ಮನೆ ಗೋಡೆಗೆ ನೋಟಿಸ್ ಹಚ್ಚಿದ್ದು. ಇದು ಅಕ್ಷಮ್ಯ ಅಪರಾಧ. ತಕ್ಷಣ ಅಂತಹ ಹೀನಕೃತ್ಯ ನಿಲ್ಲಿಸಬೇಕು ಎಂದು ಹುಚ್ಚವ್ವನಹಳ್ಳಿ ಮಂಜುನಾಥ ತಾಕೀತು ಮಾಡಿದರು.

ಪ್ರತಿಭಟನಾನಿರತ ಮುಖಂಡರು, ರೈತರು ಪಟ್ಟು ಹಿಡಿದು ಕುಳಿತಿದ್ದರಿಂದ ಹೋರಾಟಕ್ಕೆ ಏನೂ ಮಾಡಬೇಕೆಂಬುದೇ ತೋಚದಂತಾಗ ಫೈನಾನ್ಸ್ ಸಿಬ್ಬಂದಿ ಒನ್ ಟೈಮ್ ಸೆಟಲ್‌ ಮೆಂಟ್ ಮಾಡಿಕೊಳ್ಳುವುದಾಗಿ ಹೇಳಿದರು. ರೈತ ಸಂಘ ಮಾತ್ರ ತನ್ನ ಪಟ್ಟುಸಡಿಸಲಿಲ್ಲ. ಅನಂತರ ತಾಲೂಕು ಕಚೇರಿಗೆ ತೆರಳಿ, ತಹಸೀಲ್ದಾರ್ ಅಶ್ವಥ್ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.

ಸಂಘಟನೆ ಮುಖಂಡರಾದ ಚಿನ್ನಸಮುದ್ರ ಭೀಮಾನಾಯ್ಕ, ಹೂವಿನಮಡು ನಾಗರಾಜ, ಗಂಡುಗಲಿ, ರಾಜನಹಟ್ಟಿ ರಾಜು, ಸಿರಗಾನಹಳ್ಳಿ ರಾಜಣ್ಣ, ಹುಚ್ಚವ್ವನಹಳ್ಳಿ ಪ್ರಕಾಶ, ಕೋಗಲೂರು ಕುಮಾರ, ಆನಗೋಡು ಭೀಮಣ್ಣ, ಮಾಯಕೊಂಡ ಸಂತೋಷ ಕೋಟಿ, ಮುಂಡರಗಿ ರಾಮಣ್ಣ, ಹೊನ್ನಮರಡಿ ಶಿವಕುಮಾರ, ಗಿರಿಯಾಪುರ ಗಂಗಾಧರ ಸ್ವಾಮಿ ಸೇರಿದಂತೆ ರೈತ ಕುಟುಂಬದವರು ಇದ್ದರು. ಇದೇ ವೇಳೆ ಮಾಯಕೊಂಡದ 50ಕ್ಕೂ ಅಧಿಕ ರೈತರು ಹಸಿರು ಶಾಲು ದೀಕ್ಷೆ ಪಡೆಯುವ ಮೂಲಕ ರೈತ ಸಂಘಕ್ಕೆ ಸೇರ್ಪಡೆಗೊಂಡರು.

- - - (** ಒಂದು ಪೋಟೋ ಸುದ್ದಿಗೆ ಬಳಸಿ, ಇನ್ನೊಂದು 3ನೇ ಪುಟದ ಪ್ಯಾನೆಲ್‌ ಕ್ಯಾಪ್ಷನ್‌ಗೆ ಬಳಸಿ)-18ಕೆಡಿವಿಜಿ5.ಜೆಪಿಜಿ:

ಮಾಯಕೊಂಡ ಗ್ರಾಮದ ರೈತ ಮನೆಯ ಕಂತು ಕಟ್ಟಿದ್ದರೂ ಬಾಕಿ ಹಣ ಕಟ್ಟದಿದ್ದರೆ ಮನೆ ಹರಾಜು ಮಾಡುವುದಾಗಿ ನೋಟೀಸ್ ಹಾಕಿದ್ದನ್ನು ಖಂಡಿಸಿ ಮುತ್ತಿಗೆ ಹಾಕಲು ಬೈಕ್ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ಮಾಯಕೊಂಡದಿಂದ ದಾವಣಗೆರೆ ನಗರದ ಹಣಕಾಸು ಸಂಸ್ಥೆಗೆ ಬೈಕ್‌ ರ್ಯಾಲಿಯಲ್ಲಿ ತೆರಳಿದರು.

- - - -18ಕೆಡಿವಿಜಿ6:

ಮಾಯಕೊಂಡ ಗ್ರಾಮದ ರೈತ ಮನೆಯ ಕಂತು ಕಟ್ಟಿದ್ದರೂ ಬಾಕಿ ಹಣ ಕಟ್ಟದಿದ್ದರೆ ಮನೆ ಹರಾಜು ಮಾಡುವುದಾಗಿ ನೋಟೀಸ್ ಹಾಕಿದ್ದ ಮನೆ ಬಳಿ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಇತರರು ಸೇರಿರುವುದು.

- - - 18ಕೆಡಿವಿಜಿ7-ಮಾಯಕೊಂಡ ಗ್ರಾಮದ ರೈತ ಮನೆಯ ಕಂತು ಕಟ್ಟಿದ್ದರೂ ಬಾಕಿ ಹಣ ಕಟ್ಟದಿದ್ದರೆ ಮನೆ ಹರಾಜು ಮಾಡುವುದಾಗಿ ನೋಟಿಸ್ ಅಂಟಿಸಿರುವುದು.

- - -