ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯಲ್ಲಿ ಮಾ. 25 ರಿಂದ ಏ.6 ವರೆಗೆ ಜರುಗುವ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳನ್ನು ನಕಲು ಮುಕ್ತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಡಳಿತ ಭವನದಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 90 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಯಾವುದೇ ಅನಾನುಕೂಲ ಆಗದಂತೆ ನೋಡಿಕೊಳ್ಳಬೇಕು. ಎಲ್ಲ ರೀತಿಯ ಸಿದ್ದತೆಗಳೊಂದಿಗೆ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಕ್ರಮಕೈಗೊಳ್ಳಲು ತಿಳಿಸಿದರು.
ವಿದ್ಯಾರ್ಥಿಗಳ ಭವಿಷ್ಯಕ್ಕೆ ಪರೀಕ್ಷೆಗಳು ಬಹುಮುಖ್ಯ ಪಾತ್ರವಹಿಸಲಿವೆ. ಆದ್ದರಿಂದ ನಕಲು ಮುಕ್ತ ಪರೀಕ್ಷೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮುವಂತೆ ಮಾಡಬೇಕು. ಸಮಯಕ್ಕೆ ಮಹತ್ವ ಕೊಟ್ಟು ಸುಸೂತ್ರವಾಗಿ ಪರೀಕ್ಷೆಗಳು ನಡೆಸಬೇಕು. ಸಮಯಕ್ಕೆ ಸರಿಯಾಗಿ ಪ್ರಶ್ನೆ ಪತ್ರಿಕೆಗಳು ಪರೀಕ್ಷಾ ಕೇಂದ್ರಕ್ಕೆ ತಲುಪಿಸಬೇಕು. ಪರೀಕ್ಷಾ ಕಾರ್ಯಕ್ಕೆ ನೀಡಲಾದ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಕಾನೂನು ಬಾಹಿರ ಚಟುವಟಿಕೆ, ಅವ್ಯವಹಾರ ನಡೆಯದಂತೆ ಪರೀಕ್ಷಾ ಕೇಂದ್ರಗಳಿಂದ 200 ಮೀಟರ್ ವ್ಯಾಪ್ತಿಯಲ್ಲಿ ಕಲಂ 144 ಜಾರಿಗೊಳಿಸಲಾಗುತ್ತಿದೆ ಎಂದರು.ಜಿಲ್ಲಾ ಪಂಚಾಯತ ಸಿಇಒ ಶಶಿಧರ ಕುರೇರ ಮಾತನಾಡಿ, ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಉತ್ತಮ ಡೆಸ್ಕ್, ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಮಾಡಬೇಕು. ಪರೀಕ್ಷೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪಾರದರ್ಶಕ ಹಾಗೂ ನಕಲು ಮುಕ್ತವಾಗಿ ಪರೀಕ್ಷೆ ನಡೆಸಲು ಸೂಚಿಸಿದ ಅವರು, ವಿದ್ಯಾರ್ಥಿಗಳಿಗೆ ಈ ಹಂತದ ಪರೀಕ್ಷೆಗಳು ಮಹತ್ವವಾಗಿದೆ. ಪರೀಕ್ಷೆ ಬರೆಯಲು ಉತ್ತಮ ವಾತಾವರಣ ನಿರ್ಮಿಸಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 90 ಪರೀಕ್ಷಾ ಕೇಂದ್ರಗಳಿಗೆ 90 ಮುಖ್ಯ ಅಧೀಕ್ಷಕರು, 48 ಹೆಚ್ಚುವರಿ ಅಧೀಕ್ಷಕರು, 90 ಅಭಿರಕ್ಷಕರು, 90 ಮೊಬೈಲ್ ಸ್ವಾಧೀನಾಧಿಕಾರಿಗಳು, 90 ಸ್ಥಾನಿಕ ಜಾಗೃತ ದಳ, 1390 ಕೊಠಡಿ ಮೇಲ್ವಿಚಾರಕರು ಹಾಗೂ 33 ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ. ಈ ಬಾರಿ ಜಿಲ್ಲೆಯಲ್ಲಿ ಒಟ್ಟು 33193 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅದರಲ್ಲಿ 31307 ರೆಗ್ಯೂಲರ ಫ್ರೆಶ್ , 195 ರೆಗ್ಯೂಲರ್ ಪುನರಾವರ್ತಿತ, 403 ಖಾಸಗಿ ಫ್ರೆಶ್, 1288 ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು ಇದ್ದಾರೆ ಎಂದು ತಿಳಿಸಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಸೀಲ್ದಾರರು, ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಇದ್ದರು.