ಕಸ ತುಂಬಿಕೊಂಡಿರುವ ಖಾಸಗಿ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಿ ತೆರವುಗೊಳಿಸುವಂತೆ ಸೂಚಿಸುವ ನೋಟಿಸ್‌ಗಳನ್ನು ಎಲ್ಲಾ ಖಾಲಿ ನಿವೇಶನಗಳಿಗೆ ಅಂಟಿಸಲಾಗುತ್ತದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರುಕಸ ತುಂಬಿಕೊಂಡಿರುವ ಖಾಸಗಿ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಿ ತೆರವುಗೊಳಿಸುವಂತೆ ಸೂಚಿಸುವ ನೋಟಿಸ್‌ಗಳನ್ನು ಎಲ್ಲಾ ಖಾಲಿ ನಿವೇಶನಗಳಿಗೆ ಅಂಟಿಸಲಾಗುತ್ತದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಸೋಮವಾರ ಅಧಿಕಾರಿಗಳೊಂದಿಗೆ ವರ್ಚ್ಯುಯಲ್ ಸಭೆ ನಡೆಸಿ ಮಾಹಿತಿ ಹಂಚಿಕೊಂಡಿರುವ ಸಚಿವರು, ಕಸ ತೆರವುಗೊಳಿಸುವಂತೆ ನೀಡಲಾಗಿದ್ದ ಆ. 22 ರ ಗಡುವು ಮುಗಿದಿದೆ. ಆದರೆ, ಕೆಲವು ಪ್ರದೇಶಗಳಲ್ಲಿ ಮಾತ್ರ ಶೇ.20ರಷ್ಟು ಮಾಲೀಕರು ಸ್ವಚ್ಛಗೊಳಿಸಿದ್ದಾರೆ. ಸ್ವಚ್ಛತಾ ಕಾರ್ಯಕ್ಕೆ ವೇಗ ನೀಡಲು ನೋಟಿಸ್ ನೀಡಲಾಗುತ್ತದೆ. ಅದಾದ ನಂತರವೂ ತೆರವುಗೊಳಿಸದಿದ್ದರೆ ಪಾಲಿಕೆಯಿಂದ ತೆರವುಗೊಳಿಸಿ, ಅದಕ್ಕೆ ತಗಲುವ ವೆಚ್ಚವನ್ನು ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಆ.27ರಂದು ತೆರವು ಕಾರ್ಯ: ಆ.27ರಿಂದಖಾಲಿ ನಿವೇಶನಗಳ ಸ್ವಚ್ಛತಾ ಕಾರ್ಯವನ್ನು ಆರಂಭಿಸಬೇಕು. ಆ.31ರಿಂದ ಈ ಕಾರ್ಯಕ್ಕೆ ಮತ್ತಷ್ಟು ವೇಗ ನೀಡಬೇಕು. ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೊದಲು ಮತ್ತು ನಂತರದ ಸ್ಥಿತಿಯನ್ನು ಜಿಯೋ-ಲೊಕೇಷನ್ ಸಹಿತ ವಿಡಿಯೋ ರೆಕಾರ್ಡ್ ಮಾಡಬೇಕು. ಈ ದಾಖಲೆಗಳ ಆಧಾರದ ಮೇಲೆ ಗುತ್ತಿಗೆದಾರರಿಗೆ ಹಣ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ನಿರ್ದೇಶನ ನೀಡಿದರು.ಅಧಿಕೃತ ಸ್ಥಳದಲ್ಲಿ ವಿಲೇವಾರಿ: ಸ್ವಚ್ಛತಾ ಕಾರ್ಯ ಕೈಗೊಂಡ ಬಳಿಕ ಸಂಗ್ರಹವಾಗುವ ತ್ಯಾಜ್ಯ ಹಾಗೂ ಭಗ್ನಾವಶೇಷಗಳನ್ನು ರಸ್ತೆ ಬದಿ ಅಥವಾ ಇತರೆ ಖಾಲಿ ಜಾಗಗಳಲ್ಲಿ ವಿಲೇವಾರಿ ಮಾಡದೇ, ಪಾಲಿಕೆ ಗುರುತಿಸಿರುವ ಅಧಿಕೃತ ಸ್ಥಳಗಳಲ್ಲಿಯೇ ಹಾಕಬೇಕು. ಸ್ವಚ್ಛತಾ ಕಾರ್ಯಕ್ಕಾಗಿ ಅಭಿವೃದ್ಧಿಪಡಿಸಿರುವ ‘clear it’ ಆ್ಯಪ್ ಬಳಸಿಕೊಳ್ಳಬೇಕು ಎಂದು ಸಚಿವರು ಸೂಚಿಸಿದರು.

ಆ್ಯಪ್‌ನಲ್ಲಿ ದೂರು ಸಲ್ಲಿಸಲು ಅವಕಾಶಕ್ಕೆ ಸೂಚನೆ: ಕಸ ತುಂಬಿರುವ ಖಾಲಿ ನಿವೇಶನಗಳ ಮಾಹಿತಿಯನ್ನು ನಾಗರಿಕರು ಕೂಡ ‘clear it’ ಆ್ಯಪ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಈ ಸಂಬಂಧ ಅಗತ್ಯ ವ್ಯವಸ್ಥೆಯನ್ನು ಕೂಡಲೇ ಅಭಿವೃದ್ಧಿಪಡಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.