ಲೋಕಸಭಾ ಚುನಾವಣೆಗೆ 12ರಂದು ಅಧಿಸೂಚನೆ: ನಲಿನ್ ಅತುಲ್

| Published : Apr 03 2024, 01:33 AM IST

ಸಾರಾಂಶ

ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಏ. 12ರಂದು ಅಧಿಸೂಚನೆ ಹೊರಡಿಸಲಾಗುವುದು.

ಚುನಾವಣೆ ಅಕ್ರಮಗಳ ಮಾಹಿತಿ ನೀಡುವಂತೆ ಜಿಲ್ಲಾ ಚುನಾವಣಾಧಿಕಾರಿ ಮನವಿಕನ್ನಡಪ್ರಭ ವಾರ್ತೆ ಕೊಪ್ಪಳ

ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಏ. 12ರಂದು ಅಧಿಸೂಚನೆ ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್ ತಿಳಿಸಿದರು.ಲೋಕಸಭಾ ಚುನಾವಣೆ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಭಾರತ ಚುನಾವಣಾ ಆಯೋಗವು ಈಗಾಗಲೇ 2024ರ ಲೋಕಸಭಾ ಚುನಾವಣಾ ವೇಳಾಪಟ್ಟಿ ನಿಗದಿಪಡಿಸಿದ್ದು, ಮಾ.16ರಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಅಧಿಸೂಚನೆ ಹೊರಡಿಸಿದ ಏ.12ರಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ. ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳಿಂದ ನಾಮಪತ್ರ ಸ್ವೀಕರಿಸಲಾಗುವುದು. ನಾಮಪತ್ರ ಸಲ್ಲಿಸಲು ಇಚ್ಛಿಸುವವರು ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ ಏ.12ರಿಂದ ಏ.19 ರವರೆಗೆ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯೊಳಗಾಗಿ ಸಲ್ಲಿಸಬಹುದಾಗಿರುತ್ತದೆ ಎಂದು ಹೇಳಿದರು.ನಾಮಪತ್ರ ಸಲ್ಲಿಸಲು ಅಭ್ಯರ್ಥಿಯೊಂದಿಗೆ 4 ಜನರಿಗೆ ಮಾತ್ರ ಚುನಾವಣಾಧಿಕಾರಿಗಳ ಕೊಠಡಿಯಲ್ಲಿ ಅವಕಾಶವಿರುತ್ತದೆ. ಚುನಾವಣಾಧಿಕಾರಿಗಳ ಕಾರ್ಯಾಲಯದ 100 ಮೀ. ಪರೀದಿಯೊಳಗೆ ಗರಿಷ್ಠ 3 ವಾಹನಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿರುತ್ತದೆ. ಏ.20ರಂದು ಬೆಳಗ್ಗೆ 11 ಗಂಟೆಗೆ ನಾಮಪತ್ರ ಪರಿಶೀಲನೆಗೆ ತೆಗೆದುಕೊಳ್ಳಲಾಗುವುದು. ಏ.22ರಂದು ಮಧ್ಯಾಹ್ನ 3 ಗಂಟೆಯವರೆಗೆ ನಾಮನಿರ್ದೇಶನ ವಾಪಸ್ ಪಡೆದುಕೊಳ್ಳಲು ಅವಕಾಶವಿದ್ದು, ನಂತರ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳಿಗೆ ಚುನಾವಣಾ ಚಿಹ್ನೆಯ ಹಂಚಿಕೆ ಕಾರ್ಯ ಕೈಗೊಳ್ಳಲಾಗುವುದು. ಮೇ 7ರಂದು ಮತದಾನ ಹಾಗೂ ಜೂ. 4ರಂದು ಮತ ಎಣಿಕೆ ನಡೆಯಲಿದೆ ಎಂದರು.ಮತದಾನ ಕೇಂದ್ರಕ್ಕೆ 6724 ಸಿಬ್ಬಂದಿ ನೇಮಕ:

1681 ಮತಗಟ್ಟೆ ಅಧ್ಯಕ್ಷಾಧಿಕಾರಿ (ಪಿ.ಆರ್.ಓ), 1681 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ (ಪಿಆರ್‌ಒ) ಮತ್ತು 3362 ಮತಗಟ್ಟೆ ಅಧಿಕಾರಿಗಳು (ಪಿಒ) ಸೇರಿದಂತೆ ಒಟ್ಟಾರೆಯಾಗಿ 6724 ಸಿಬ್ಬಂದಿ ನೇಮಕ ಮಾಡಲಾಗಿದ್ದು, ಏ.8 ರಂದು ಬೆಳಗ್ಗೆ 10:30ಕ್ಕೆ ಸಂಬಂಧಪಟ್ಟ ವಿಧಾನಸಭಾಕ್ಷೇತ್ರದ ಕೇಂದ್ರ ಸ್ಥಾನದಲ್ಲಿ ತರಬೇತಿ ಆಯೋಜಿಸಲಾಗಿದೆ ಎಂದರು.

ಅಂಚೆ ಮತದಾನದ ಸೌಲಭ್ಯ:

ಭಾರತ ಚುನಾವಣಾ ಆಯೋಗವು ಅಂಗವಿಕಲ ಮತದಾರರಿಗೆ ಮತ್ತು 85+ ವಯೋಮಾನದವರಿಗೆ ಮತ್ತು ಕೋವಿಡ್ ಶಂಕಿತ ಅಥವಾ ಬಾಧಿತರಿಗೆ ಮತಚಲಾಯಿಸಲು ಅನುಕೂಲವಾಗುವಂತೆ ಹೋಮ್ ವೋಟಿಂಗ್ ಸೌಲಭ್ಯ ಒದಗಿಸಿದ್ದು, ಮತದಾರರು ಈ ಸೌಲಭ್ಯ ಪಡೆಯಲು ಇಚ್ಛಿಸಿದಲ್ಲಿ ನಮೂನೆ-12ಡಿರಲ್ಲಿ ಮನವಿ ಸಲ್ಲಿಸುವ ಅರ್ಹ ಮತದಾರರ ಮನೆಗೆ ತೆರಳಿ ಮತದಾನ ಪಡೆಯುವ ಕಾರ್ಯ ಮಾಡಲಾಗುವುದು. ಸಿಂಧನೂರು, ಮಸ್ಕಿ, ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ, ಕೊಪ್ಪಳ ಹಾಗೂ ಸಿರಗುಪ್ಪ ಈ ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 38,294 ಮತದಾರರನ್ನು ಗುರುತಿಸಲಾಗಿದೆ. ಇದರಲ್ಲಿ 18,456 ಮತದಾರರಿಗೆ ನಮೂನೆ-12ಡಿ ಅನ್ನು ನೀಡಲಾಗಿದ್ದು, 19,838 ಮತದಾರರಿಗೆ ನಮೂನೆ-12ಡಿ ನ್ನು ಪಡೆದಿರುವುದಿಲ್ಲ. 2342 ಮತದಾರರನ್ನು ನಮೂನೆ-12ಡಿಗೆ ಆಯ್ಕೆ ಮಾಡಲಾಗಿದೆ. 15,885 ಮತದಾರರು ನಮೂನೆ-12ಡಿ ಆಯ್ಕೆ ಮಾಡಿಕೊಂಡಿಲ್ಲ ಎಂದರು.

₹82.92 ಲಕ್ಷ ಹಣ, 4011.68 ಲೀ. ಮದ್ಯ ಜಪ್ತಿ:

ಮಾದರಿ ನೀತಿ ಸಂಹಿತೆ ಜಾರಿಯಾದ ಅವಧಿಯಿಂದ ಜಿಲ್ಲೆಯಲ್ಲಿ ವಿವಿಧ ಮಾದರಿ ನೀತಿ ಸಂಹಿತೆ ತಂಡಗಳು, ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆಯಿಂದಾಗಿ ಏ. 1ರವರೆಗೆ ₹ 82,92,500 ಮತ್ತು ₹15,96,660 ಮೌಲ್ಯದ 4011.68 ಲೀಟರ್ ಮದ್ಯ ಜಪ್ತಿ ಮಾಡಲಾಗಿದ್ದು, ಈ ಕುರಿತು 6 ಎಫ್‌ಐಆರ್ ದಾಖಲಾಗಿರುತ್ತವೆ ಎಂದು ತಿಳಿಸಿದರು. ಚುನಾವಣೆ ಅಕ್ರಮದ ಕುರಿತು ಸಾರ್ವಜನಿಕರು ಮಾಹಿತಿಯನ್ನು ನೀಡುವಂತೆ ಮನವಿ ಮಾಡಿದರು.

ಮತದಾರರ ಸಹಾಯವಾಣಿ:

ಮತದಾರರರಿಗೆ ಅಗತ್ಯವಿರುವ ಮಾಹಿತಿ ಒದಗಿಸಲು, ಯಾವುದೇ ಚುನಾವಣಾ ಸಂಬಂಧಿತ ದೂರು ಸಲ್ಲಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಟೋಲ್ ಫ್ರೀ ಸಂಖ್ಯೆ 1950ರೊಂದಿಗೆ ಜಿಲ್ಲಾ ಸಂಪರ್ಕ ಕೇಂದ್ರ (ಡಿಸಿಸಿ)ವನ್ನು ತೆರೆಯಲಾಗಿದೆ. ಮತದಾರರಿಗೆ ಅನುಕೂಲವಾಗಲು ಭಾರತ ಚುನಾವಣಾ ಆಯೋಗವು ವೋಟರ್ ಹೆಲ್ಪ್‌ಲೈನ್‌ ಆ್ಯಪ್ ಮತ್ತು ಕೆವೈಸಿ ಆ್ಯಪ್‌ಗಳನ್ನು ಪರಿಚಯಿಸಿರುತ್ತದೆ. ಇದರ ಮೂಲಕ ಮತದಾರರು ತಮ್ಮ ಮತದಾರರ ಗುರುತಿನ ಚೀಟಿ, ಸಂಖ್ಯೆ ಅಥವಾ ವಿವರಗಳನ್ನು ದಾಖಲಿಸಿ, ಮತಗಟ್ಟೆ ಹೆಸರು, ವಿಳಾಸ ತಿಳಿದುಕೊಳ್ಳಬಹುದು. ಸೇರ್ಪಡೆ, ತಿದ್ದುಪಡಿ ಅಥವಾ ತೆಗೆದುಹಾಕಲು ಅರ್ಜಿ ಸಲ್ಲಿಸಬಹುದು. ಇ-ಎಪಿಕ್‌ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಬೂತ್ ಮಟ್ಟದ ಅಧಿಕಾರಿಗಳ ಹಾಗೂ ಮತದಾರರ ನೊಂದಣಾಧಿಕಾರಿಗಳ ವಿವರ ತಿಳಿದುಕೊಳ್ಳಬಹುದು. ಕೆವೈಸಿ ಆ್ಯಪ್ ಮೂಲಕ ಅಭ್ಯರ್ಥಿಗಳ ವಿವರ, ಅಫಿಡವಿಟ್‌ಗಳನ್ನು ಸಹ ತಿಳಿದುಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿ ಚುನಾವಣಾ ವಿಭಾಗದ ರವಿಕುಮಾರ ವಸ್ತ್ರದ್, ನಾಗರಾಜ, ಪ್ರಸನ್ನ ಸೇರಿದಂತೆ ಮತ್ತಿತರರಿದ್ದರು.

ಮತದಾನ ಪ್ರಮಾಣ ಹೆಚ್ಚಳಕ್ಕೆ ಕ್ರಮ:

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಜಿಲ್ಲಾ ಸ್ವೀಪ್ ಸಮಿತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಈಗಾಗಲೇ ಸ್ವೀಪ್ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಹಿಂದೆ ಜಿಲ್ಲೆಯಲ್ಲಿ ಕಡಿಮೆ ಮತದಾನವಾಗಿರುವ ಪ್ರದೇಶಗಳನ್ನು ಗುರುತಿಸಲಾಗಿದ್ದು, ಕಡಿಮೆ ಮತದಾನವಾದ ಮತಗಟ್ಟೆ ವ್ಯಾಪ್ತಿಗೆ ತೆರಳಿ ಅಲ್ಲಿನ ಮತದಾರರಿಗೆ ವಿಶೇಷ ಜಾಗೃತಿ ಮೂಡಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ರಾಹುಲ್ ರತ್ನಂ ಪಾಂಡೆ ತಿಳಿಸಿದರು.

ಮತಗಟ್ಟೆಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥೆಯನ್ನು ಸಹ ಕಲ್ಪಿಸಲಾಗುತ್ತಿದ್ದು, ಪ್ರಸ್ತುತ ಬಿಸಿಲಿನ ತಾಪಮಾನ ಹೆಚ್ಚಿರುವುದರಿಂದ ಮತಗಟ್ಟೆಗಳಲ್ಲಿ ತಂಪಾದ ಕುಡಿಯುವ ನೀರಿನ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಮಜ್ಜಿಗೆ ವ್ಯವಸ್ಥೆ ಮಾಡಲು ಚಿಂತಿಸಲಾಗುತ್ತಿದೆ ಎಂದರು.