ನ.೨೦ - ಡಿ೨೯: ಕೃಷ್ಣಮಠದಲ್ಲಿ ಬೃಹತ್ ಗೀತೋತ್ಸವ

| Published : Nov 19 2024, 12:47 AM IST

ಸಾರಾಂಶ

ನ. ೨೦ರಿಂದ ಡಿ. ೨೯ರ ವರೆಗೆ ಕೃಷ್ಣಮಠದಲ್ಲಿ ಬೃಹತ್ ಗೀತೋತ್ಸವ ನಡೆಸಲಾಗುವುದು. ಈ ಸಂದರ್ಭದಲ್ಲಿ ತ್ರಿಪಕ್ಷ ಶತವೈಭವ ಎಂಬ ಘೋಷವಾಕ್ಯದಡಿ ಭಗವದ್ಗೀತೆ ಬಗೆಗೆ ವಿವಿಧ ಕಾರ್‍ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪರ್‍ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ನ. ೨೦ರಿಂದ ಡಿ. ೨೯ರ ವರೆಗೆ ಕೃಷ್ಣಮಠದಲ್ಲಿ ಬೃಹತ್ ಗೀತೋತ್ಸವ ನಡೆಸಲಾಗುವುದು. ಈ ಸಂದರ್ಭದಲ್ಲಿ ತ್ರಿಪಕ್ಷ ಶತವೈಭವ ಎಂಬ ಘೋಷವಾಕ್ಯದಡಿ ಭಗವದ್ಗೀತೆ ಬಗೆಗೆ ವಿವಿಧ ಕಾರ್‍ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪರ್‍ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದರು. ಸೋಮವಾರ ಸುದ್ದಿಗೋಷ್ಟಿಯಲ್ಲಿ ಕಾರ್‍ಯಕ್ರಮದ ವಿವರ ನೀಡಿದ ಶ್ರೀಗಳು, ಶ್ರೀಕೃಷ್ಣನ ಸಂದೇಶವಾದ ಭಗವದ್ಗೀತೆ ಬಗ್ಗೆ ಜನಸಾಮಾನ್ಯರಿಗೆ ತಿಳಿಸುವ ಆಶಯದಿಂದ ಈ ಗೀತೋತ್ಸವ ಆಚರಿಸಲಾಗುತ್ತಿದೆ.

ಈ ದಿನಗಳಲ್ಲಿ ಗೀತೆಗೆ ಸಂಬಂಧಿಸಿದ ಪ್ರವಚನ, ಸಾಂಸ್ಕೃತಿಕ ಕಾರ್‍ಯಕ್ರಮ, ಗೀತಾ ಯಜ್ಞ ಇತ್ಯಾದಿ ಹಮ್ಮಿಕೊಳ್ಳಲಾಗುವುದು. ಜೊತೆಗೆ ಗೀತೆಯ ಪ್ರಚಾರ ಕಾರ್‍ಯದಲ್ಲಿ ತೊಡಗಿದವರನ್ನು ಗೌರವಿಸಲಾಗುವುದು ಎಂದರು.ವಿಶ್ವ ಗೀತಾ ಒಲಿಂಪಿಯಾಡ್: ಇದೇ ಸಂದರ್ಭದಲ್ಲಿ ಭಗವದ್ಗೀತೆ ಕುರಿತು ಒಲಿಂಪಿಯಾಡ್ ಮಾದರಿಯಲ್ಲಿ ಜಾಗತಿಕ ಮಟ್ಟದಲ್ಲಿ ಆನ್‌ಲೈನ್‌ನಲ್ಲಿ ವಿಶ್ವ ಗೀತಾ ಸ್ಪರ್ಧೆ ಆಯೋಜಿಸಲಾಗುತ್ತಿದೆ. ನ. ೨೦ರಂದು ಸ್ಪರ್ಧೆಗೆ ಚಾಲನೆ ನೀಡಲಾಗುತ್ತಿದ್ದು, ೧೦ - ೧೮ ವರ್ಷದೊಳಗಿನ ಮಕ್ಕಳ ಹಾಗೂ ೧೮ ವರ್ಷ ಮೇಲ್ಪಟ್ಟವರ ಗುಂಪು ವಿಭಾಗಗಳಲ್ಲಿ ಸ್ಪರ್ಧೆ ಮೂರು ಹಂತಗಳಲ್ಲಿ ನಡೆಸಲಾಗುತ್ತಿದೆ. ಸುಮಾರು ೨೫ ಸಾವಿರ ಮಂದಿ ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಪ್ರಥಮ ಬಹುಮಾನ ೧ ಲಕ್ಷ ಹಾಗೂ ದ್ವಿತೀಯ, ತೃತೀಯ ಹಾಗೂ ಚತುರ್ಥ ಬಹುಮಾನ ಅನುಕ್ರಮವಾಗಿ ೭೫ ಸಾವಿರ, ೫೦ ಸಾವಿರ ಮತ್ತು ೨೫ ಸಾವಿರ ರೂ. ನಗದು ಹಾಗೂ ಪ್ರಮಾಣಪತ್ರ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಆನ್‌ಲೈನ್‌ನಲ್ಲಿ ಪ್ರಮಾಣಪತ್ತ ನೀಡಲಾಗುವುದು ಎಂದು ಸ್ಪರ್ಧೆ ಸಂಯೋಜಕ ಪ್ರಮೋದ್ ಸಾಗರ್ ತಿಳಿಸಿದರು.ಸಹಸ್ರ ಕಂಠ ಗೀತೆ ಗಾಯನ

ಡಿ. ೧೧ರಂದು ಸಾವಿರ ಮಂದಿಯಿಂದ ಭಗವದ್ಗೀತೆ ಶ್ಲೋಕ ಪಠಣ ಹಾಗೂ ಅದಕ್ಕೆ ಪೂರಕವಾಗಿ ದಾಸರ ಪದಗಳ ಸಹಸ್ರ ಕಂಠ ಗೀತ ಗಾಯನ ಕಾರ್‍ಯಕ್ರಮ ರಾಜಾಂಗಣದಲ್ಲಿ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವ ಅಂಗವಾಗಿ ವಿಶೇಷ ಅಂಚೆ ಲಕೋಟೆ ಬಿಡುಗಡೆ ನಡೆಯಲಿದೆ ಎಂದು ಕಾರ್‍ಯಕ್ರಮ ಸಂಯೋಜಕ ಅನಂತಕೃಷ್ಣಪ್ರಸಾದ್ ತಿಳಿಸಿದರು.

ಬೃಹತ್ ಗೀತೋತ್ಸವ ಸಂದರ್ಭದಲ್ಲಿ ಮಂಗಳೂರಿನ ಕಥಾಬಿಂದು ಸಂಸ್ಥೆಯವರಿಂದ ಗೀತಾ ಸಾಹಿತ್ಯೋತ್ಸವ, ಗೀತಾ ನೃತ್ಯೋತ್ಸವ, ಗೀತಾ ಯಕ್ಷಗಾನ ಇತ್ಯಾದಿ ಕಾರ್‍ಯಕ್ರಮ ಆಯೋಜಿಸಿರುವುದಾಗಿ ಸಾಂಸ್ಕೃತಿಕ ಕಾರ್‍ಯದರ್ಶಿ ರಮೇಶ ಭಟ್ ವಿವರಿಸಿದರು.ಕಾಂಚಿ ಶ್ರೀಗಳಿಂದ ಚಾಲನೆ

ಈ ಬೃಹತ್ ಗೀತೋತ್ಸವವನ್ನು ನ. ೨೦ರಂದು ಕಾಂಚಿ ಕಾಮಕೋಟಿ ಮಠಾಧೀಶ ಶಂಕರಾಚಾರ್‍ಯ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕರಾದ ಯಶಪಾಲ್ ಸುವರ್ಣ ಮತ್ತು ಗುರುರಾಜ್ ಗಂಟಿಹೊಳಿ, ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಹೊರನಾಡು ಕ್ಷೇತ್ರದ ಡಾ. ಜಿ. ಭೀಮೇಶ್ವರ ಜೋಶಿ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ. ವಿಜಯ ಬಲ್ಲಾಳ್, ವಿಹಿಂಪ ಪ್ರಾಂತೀಯ ಅಧ್ಯಕ್ಷ ಡಾ. ಎಂ.ಬಿ ಪುರಾಣಿಕ್, ಚಿಂತಕ ರೋಹಿತ್ ಚಕ್ರತೀರ್ಥ ಆಗಮಿಸುವರು ಎಂದು ಮಠದ ಕಾರ್‍ಯದರ್ಶಿ ಪ್ರಸನ್ನಾಚಾರ್‍ಯ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ವಾದಿರಾಜ ಸಂಶೋಧನ ಪ್ರತಿಷ್ಠಾನದ ನಿರ್ದೇಶಕ ಡಾ.ಬಿ. ಗೋಪಾಲಾಚಾರ್ ನಿರ್ವಹಿಸಿದರು.