ಸಾರಾಂಶ
ಮುಡಾ, ವಾಲ್ಮೀಕಿ ಹಗರಣವನ್ನು ವಿಷಯಾಂತರ ಮಾಡಲು ರಾಜ್ಯ ಸರ್ಕಾರವೇ ನಟ ದರ್ಶನ ಫೋಟೋ ವೈರಲ್ ಮಾಡಿದೆ ಎಂದು ಹೇಳಿದ ವಿಚಾರಕ್ಕೆ ಸಿದ್ದರಾಮಯ್ಯ ಕ್ಯಾಬಿನೆಟ್‌ನ ಎಲ್ಲ ಮಂತ್ರಿಗಳು ಪ್ರತಿಕ್ರಿಯಿಸುತ್ತಿದ್ದಾರೆ. ಅವರಿಗೆಲ್ಲ ಬಿಸಿ ಹತ್ತಿದ್ದರಿಂದಲೇ ಏನೇನೋ ಮಾತನಾಡುತ್ತಿದ್ದಾರೆ ಎಂದು ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿ: ನಟ ದರ್ಶನ ಪ್ರಕರಣದ ಫೋಟೋ ಬಹಿರಂಗ ವಿಚಾರದಲ್ಲಿ ಕಾಂಗ್ರೆಸ್ ಗೊತ್ತಿದ್ದೂ ತಪ್ಪು ಮಾಡಿದೆ. ಹೀಗಾಗಿ, ಅವರಿಗೆ ಈಗ ಚುರುಕು ಮುಟ್ಟಿದ್ದು, ಹೆದರಿಕೆ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾ, ವಾಲ್ಮೀಕಿ ಹಗರಣವನ್ನು ವಿಷಯಾಂತರ ಮಾಡಲು ರಾಜ್ಯ ಸರ್ಕಾರವೇ ಫೋಟೋ ವೈರಲ್ ಮಾಡಿದೆ ಎಂದು ಹೇಳಿದ ವಿಚಾರಕ್ಕೆ ಸಿದ್ದರಾಮಯ್ಯ ಕ್ಯಾಬಿನೆಟ್‌ನ ಎಲ್ಲ ಮಂತ್ರಿಗಳು ಪ್ರತಿಕ್ರಿಯಿಸುತ್ತಿದ್ದಾರೆ. ಅವರಿಗೆಲ್ಲ ಬಿಸಿ ಹತ್ತಿದ್ದರಿಂದಲೇ ಏನೇನೋ ಮಾತನಾಡುತ್ತಿದ್ದಾರೆ. ಆದರೆ ನಾನೂ ಕೇಳಿರುವ ಪ್ರಶ್ನೆಗಳಿಗೆ ಮಾತ್ರ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.ಮಹದಾಯಿ ಯೋಜನೆಗೆ 2 ಲಕ್ಷ ಮರ ಕತ್ತರಿಸಬೇಕಾಗುವ ಕಾರಣದಿಂದ ಅನುಮತಿಗೆ ವಿಳಂಬವಾಗಿದೆ. ಅಲ್ಲದೇ, ವನ್ಯಜೀವಿ ಮಂಡಳಿ ಈ ಯೋಜನೆ ಮರು ಪರಿಶೀಲನೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದೆ. ರಾಜ್ಯದ ಹಿತದೃಷ್ಟಿಯಿಂದ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆದರೀಗ ಟ್ರಿಬ್ಯುನಲ್‌ಗೆ ಕೊಟ್ಟವರು, ಗೋಡೆ ಕಟ್ಟಿದವರು ಈಗ ಮಹದಾಯಿ ಯೋಜನೆ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ಮಹದಾಯಿ ಯೋಜನೆ ಗೆಜೆಟ್ ನೋಟಿಫಿಕೇಶನ್ ವರೆಗೂ ಅನುಮೋದನೆ ಕೊಡಿಸಲಾಗಿದೆ. ಪ್ರಧಾನಿ ಮೋದಿ ಅವರು ಬಂದ ನಂತರದಲ್ಲಿ ಡಿಪಿಆರ್ ಕೂಡಾ ಆಗಿದೆ ಎಂದರು.
ರಾಷ್ಟ್ರೀಯ ಹುಲಿ ಪ್ರಾಧಿಕಾರ ವರದಿ ಕೊಡದೇ ಇರುವುದರಿಂದ ಗೋವಾಕ್ಕೆ ಬೇಕಾದ ವಿದ್ಯುತ್ ಯೋಜನೆ ಬಗ್ಗೆ ವನ್ಯಜೀವಿ ಮಂಡಳಿ ಯಾವುದೇ ಕ್ರಮಕೈಗೊಂಡಿಲ್ಲ. ಇದು ಗೋವಾಕಷ್ಟೇಯಲ್ಲ, ದಾಬೋಲ್‌ನಿಂದ ಬರುವ ಮಾರ್ಗಗಳಲ್ಲಿನ ಪ್ರದೇಶಗಳಿಗೆ ಈ ಯೋಜನೆ ನೆರವಾಗಲಿದೆ. ರೈತರಿಗೆ, ಸಾಮಾನ್ಯ ಜನರಿಗೆ ನಿರಂತರ ವಿದ್ಯುತ್ ಪೂರೈಸುವ ಯೋಜನೆ ಇದಾಗಿದೆ. ವಿದ್ಯುತ್ ಯೋಜನೆ ಹಾದು ಹೋಗುವ ಮಾರ್ಗದಲ್ಲಿ ಹುಲಿ ಕಾರಿಡಾರ್ ಇಲ್ಲ. ಆನೆ, ಹುಲಿ ಕಾರಿಡಾರ್ ಇರುವ ಕಾರಣಕ್ಕಾಗಿಯೇ ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ನಿಂತಿವೆ ಎಂದು ಹೇಳಿದರು.ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಡ ತರುವ ಯತ್ನ: ಸಿಎಂ ಸಿದ್ದರಾಮಯ್ಯ ಹಿಂದೆ ಕಲ್ಲು ಬಂಡೆಯಂತೆ ನಿಂತಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಲೇ ಒಳಗೊಳಗೆ ಸಿಎಂ ಕುರ್ಚಿಗಾಗಿ ಮಸಲತ್ತು ನಡೆಸಿದ್ದಾರೆ. ಸಿಎಂ ರೇಸ್‌ನಲ್ಲಿ ಪಟ್ಟಿ ಬೆಳೆಯುತ್ತಲೇ ಇದೆ. ಆರ್.ವಿ. ದೇಶಪಾಂಡೆ, ಡಾ.ಜಿ. ಪರಮೇಶ್ವರ, ಡಿ.ಕೆ. ಶಿವಕುಮಾರ, ಎಂ.ಬಿ. ಪಾಟೀಲ, ಸತೀಶ ಜಾರಕಿಹೊಳಿ ರೇಸ್‌ನಲ್ಲಿದ್ದಾರೆ. ಈಗಾಗಲೇ ಜಾರಕಿಹೊಳಿ ಪರ ಅಭಿಯಾನವೂ ಆರಂಭಗೊಂಡಿದೆ. ಆ ಮೂಲಕ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಡ ತರುವ ಪ್ರಯತ್ನಗಳು ಒಳಗಿನಿಂದ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ರೈತರ ಆಕ್ರೋಶ: ಮಹದಾಯಿ ಯೋಜನೆಗೆ ವನ್ಯಜೀವಿ ಮಂಡಳಿ ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಿವಾಸದ ಬಳಿಕ ರೈತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಗೋವಾ ರಾಜ್ಯಕ್ಕೆ ವಿದ್ಯುತ್ ಯೋಜನೆಗೆ ಅನುಮತಿ ನೀಡಲಾಗಿದೆ. ಆದರೆ ಮಹದಾಯಿ ಯೋಜನೆಗೆ ಅನುಮತಿ ನಿರಾಕರಿಸಲಾಗಿದೆ. ಯೋಜನೆ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸುವಂತೆ ಸುಭಾಶ್ಚಂದ್ರ ಪಾಟೀಲ ಸೇರಿದಂತೆ ರೈತರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಜೋಶಿ, ವನ್ಯಜೀವಿ ಮಂಡಳಿ ಅನುಮತಿಗೆ ನಿರಾಕರಿಸಿಲ್ಲ. ಬದಲಾಗಿ ಮುಂದೂಡಿದೆ ಎಂದು ಹೇಳಿದರು.