ಈ ಕೂಲಿಕಾರ ಹಿರಿಯ ನಾಗರಿಕರಲ್ಲಿ ಬಹುತೇಕರು ಕೂಲಿ ಕಾರ್ಮಿಕರಾಗಿದ್ದು, ಕೆಲವರಿಗೆ ಅಲ್ಪ ಸ್ವಲ್ಪ ಕೃಷಿ ಜಮೀನುಗಳಿದ್ದರೆ, ಕೆಲವರು ಕೃಷಿಭೂಮಿ ಇಲ್ಲದೇ ಇರುವ ಗ್ರಾಮೀಣ ನಿವಾಸಿಗಳು.
ಮುಂಡರಗಿ: ತಾಲೂಕಿನ ಡಂಬಳ ಗ್ರಾಪಂ ವ್ಯಾಪ್ತಿಯ ಹೊಸ ಡಂಬಳ ಗ್ರಾಮದ 2026- 27ನೇ ಆರ್ಥಿಕ ಸಾಲಿನ ನರೇಗಾ ಸಮುದಾಯ ಬಾಂದಾರ ಹೂಳೆತ್ತುವ ಕಾಮಗಾರಿಯಲ್ಲಿ 12ಕ್ಕೂ ಹೆಚ್ಚು ಜನ 62 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಕೂಲಿ ಕೆಲಸ ಮಾಡುತ್ತಾ ಮಾದರಿಯಾಗಿದ್ದಾರೆ.ಕೆಲವರು ಕಳೆದ 10 ವರ್ಷಗಳಿಂದ ನರೇಗಾ ಯೋಜನೆಯಲ್ಲಿ ಭಾಗವಹಿಸುತ್ತಾ ಕಾಮಗಾರಿ ಮಾಡುತ್ತಾ ಬಂದಿದ್ದಾರೆ. ಬೇಸಿಗೆಯಲ್ಲಿ ಇವರಿಗೆ ನರೇಗಾ ಯೋಜನೆಯೇ ದುಡಿಮೆಯ ಮೂಲ. ಅಲ್ಲದೇ ನರೇಗಾ ಯೋಜನೆಯಲ್ಲಿರುವ ಹಿರಿಯ ನಾಗರಿಕರಿಗೆ ಅರ್ಧ ಕೆಲಸ ಪೂರ್ಣ ಕೂಲಿ ನಿಯಮವನ್ನು ಕೂಲಿಕಾರರಾದ ಒಂಟೆಲಪ್ಪ ತಳವಾರ(77), ಯಲ್ಲಪ್ಪ ಕವಲೂರು(68), ಮಹದೇವಪ್ಪ ತಳವಾರ(70), ನಿಂಗವ್ವ ತಳವಾರ(68), ಶಾರದಾ ಕವಲೂರು(64), ಕಮಲವ್ವ ಡೊಳ್ಳಿನ(63), ದೇವಕ್ಕ ತಳವಾರ(62), ಲಕ್ಷ್ಮವ್ವ ಪೂಜಾರ(62), ಹಾಲವ್ವ ಬೇವಿನಮರದ(65), ಸಂಗವ್ವ ಕಾತರಕಿ(64), ರೇಣಮ್ಮ ಪೂಜಾರ(64), ಯಮುನಾಬಿ ನದಾಫ(65) ಇವರೆಲ್ಲರೂ ಸದುಪಯೋಗ ಪಡಿಸಿಕೊಂಡು ಯೋಜನೆಯ ಮಹತ್ವವನ್ನು ಇಳಿವಯಸ್ಸಿನಲ್ಲೂ ಪೂರ್ಣ ಕೆಲಸದೊಂದಿಗೆ ದುಡಿಮೆಯ ಮೂಲಕ ಸಾರಿದ್ದಾರೆ.ಮೂರು ಪ್ರತ್ಯೇಕ ಜಾಗಗಳಲ್ಲಿ ಕೃಷಿ ಇಲಾಖೆ ಹಾಗೂ ಗ್ರಾಪಂ ಮೂಲಕ ಪ್ರಗತಿಯಲ್ಲಿರುವ ಕಾಮಗಾರಿಗಳಲ್ಲಿ ಈ ಹಿರಿಯ ನಾಗರಿಕರು ಭಾಗವಹಿಸಿದ್ದಾರೆ. ಈ ಕೂಲಿಕಾರ ಹಿರಿಯ ನಾಗರಿಕರಲ್ಲಿ ಬಹುತೇಕರು ಕೂಲಿ ಕಾರ್ಮಿಕರಾಗಿದ್ದು, ಕೆಲವರಿಗೆ ಅಲ್ಪ ಸ್ವಲ್ಪ ಕೃಷಿ ಜಮೀನುಗಳಿದ್ದರೆ, ಕೆಲವರು ಕೃಷಿಭೂಮಿ ಇಲ್ಲದೇ ಇರುವ ಗ್ರಾಮೀಣ ನಿವಾಸಿಗಳು.
ಹಾಗಾಗಿ ಜಮೀನಿಲ್ಲದವರು ನರೇಗಾ ಕೆಲಸ ಇಲ್ಲದಿದ್ದಾಗ ಬೇರೆಯವರ ಜಮೀನು ಸೇರಿದಂತೆ ಇತರೆಡೆ ಕಾರ್ಮಿಕರಾಗಿ ದುಡಿಯುತ್ತಾರೆ. ಬೇಸಿಗೆಯಲ್ಲಿ ಕೆಲಸದ ಕೊರತೆ ಸಹಜ. ಕೃಷಿ ಜಮೀನಿರುವ ರೈತರು ಸಹ ಹೊಟ್ಟೆಪಾಡಿಗೆ ಬೇರೆ ದುಡಿಮೆಯನ್ನೇ ಅವಲಂಬಿಸಬೇಕಾಗುತ್ತದೆ.ಇಂತಹ ಸಮಯದಲ್ಲಿ ನರೇಗಾ ಕೂಲಿ ಕೆಲಸವೇ ನಮಗೆ ವರದಾನ. ನರೇಗಾ ಯೋಜನೆಯಿಂದ ₹370 ದುಡಿಮೆ ಸಿಗುತ್ತಿರುವುದು ಹೊಟ್ಟೆಪಾಡಿಗೆ ಆಧಾರ ಎನ್ನುವುದು ಹಿರಿಯ ಕೂಲಿಕಾರ ಒಂಟೆಲಪ್ಪ ತಳವಾರ ಅವರ ಮಾತು.ಮಹತ್ವಕ್ಕೆ ಸಾಕ್ಷಿ: ಹೊಸ ಡಂಬಳ ಗ್ರಾಮದ ನರೇಗಾ ಸಮುದಾಯ ಕಾಮಗಾರಿಯಲ್ಲಿ 12ಕ್ಕೂ ಹೆಚ್ಚು ಜನ ಹಿರಿಯ ನಾಗರಿಕರು ಏಕಕಾಲಕ್ಕೆ ಭಾಗವಹಿಸಿರುವುದು ಗ್ರಾಮೀಣ ಭಾಗದಲ್ಲಿ ಯೋಜನೆಯ ಮಹತ್ವಕ್ಕೆ ಸಾಕ್ಷಿಯಾಗಿದೆ ಎಂದು ತಾಪಂ ಇಒ ವಿಜಯಕುಮಾರ ಬೆಣ್ಣೆ ತಿಳಿಸಿದರು.