ಉದ್ಯೋಗದ ಭರವಸೆ ಖಾತ್ರಿಗೊಳಿಸಿದ ನರೇಗಾ: ಜಿ.ಜಿ. ನಾಯಕ್

| Published : Feb 07 2024, 01:48 AM IST

ಸಾರಾಂಶ

ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬಕ್ಕೆ ಕೆಲಸ ನೀಡಿದ ದೇಶದ ಮೊದಲ ಯೋಜನೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯಾಗಿದೆ.

ನರೇಗಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿದ ಸಹಾಯಕ ನಿರ್ದೇಶಕ

ಕನ್ನಡಪ್ರಭ ವಾರ್ತೆ ರಟ್ಟೀಹಳ್ಳಿ

ಉದ್ಯೋಗದ ಭರವಸೆಯನ್ನು ಖಾತ್ರಿಯಾಗಿ ಸಾಕಾರಗೊಳಿಸಿದ ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬಕ್ಕೆ ಕೆಲಸ ನೀಡಿದ ದೇಶದ ಮೊದಲ ಯೋಜನೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯಾಗಿದೆ ಎಂದು ಸಹಾಯಕ ನಿರ್ದೇಶಕ ಜಿ.ಜಿ. ನಾಯಕ್ ಹೇಳಿದರು.

ತಾಲೂಕಿನ ನೇಶ್ವಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಹಾವೇರಿ, ತಾಲೂಕು ಪಂಚಾಯಿತಿ ರಟ್ಟೀಹಳ್ಳಿ, ಗ್ರಾಪಂ ನೇಶ್ವಿ ಇವುಗಳ ಸಹಯೋಗದಲ್ಲಿ ನರೇಗಾ ದಿನಾಚರಣೆ ಪ್ರಯುಕ್ತ ಕಾಮಗಾರಿ ಸ್ಥಳದಲ್ಲಿ ಆಯೋಜಿಸಲಾದ ನರೇಗಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶಗಳು ಇಂದು ಮೂಲಭೂತ ಸೌಲಭ್ಯಗಳನ್ನು ಒಳಗೊಂಡು, ಸ್ವಚ್ಛ ಸುಂದರವಾಗಿ ಕಾಣಲು, ಜನರು ವಲಸೆ ಹೋಗದಂತೆ ಉದ್ಯೋಗದ ಭರವಸೆಯೊಂದಿಗೆ ಗ್ರಾಮದಲ್ಲಿಯೇ ಸ್ವಾಲಂಬಿ ಬದುಕು ಸಾಗಿಸಲು ಜಲ ಮೂಲಗಳಿಗೆ ಜೀವ ಕಳೆಯನ್ನು ನೀಡಲು ನರೇಗಾ ಯೋಜನೆ ಪ್ರಮುಖ ಪಾತ್ರ ವಹಿಸಿದೆ. ದೈಹಿಕ ಕೆಲಸ ಮಾಡಲು ಇಚ್ಛಿಸುವ ಗ್ರಾಮೀಣ ಪ್ರದೇಶದ ವಯಸ್ಕರಿಗೆ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ ನೂರು ದಿನಗಳ ಉದ್ಯೋಗಾವಕಾಶವನ್ನು ಸ್ಥಳೀಯವಾಗಿ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಬಡಜನರನ್ನು ತೊಡಗಿಸಿಕೊಂಡು ಕೃಷಿ ಕಾರ್ಮಿಕರಿಗೆ ಕೂಲಿ ನೀಡುವ ಉದ್ಯೋಗ, ಆಹಾರ ಭದ್ರತೆ, ದೀರ್ಘಕಾಲ ಬಾಳಿಕೆ ಬರುವಂತಹ ಸ್ವತ್ತುಗಳ ನಿರ್ಮಾಣ ಮುಂತಾದ ಕಾರ್ಯಕ್ರಮಗಳನ್ನು ಉದ್ಯೋಗ ಖಾತರಿ ಯೋಜನೆಯಡಿ ಕೈಗೊಳ್ಳಲಾಗುತ್ತಿದೆ. ಇಂತಹ ಮಹತ್ತರ ಯೋಜನೆಯ ಸದುಪಯೋಗವನ್ನು ಪ್ರತಿ ಆರ್ಥಿಕ ವರ್ಷದಲ್ಲಿ ನೂರುದಿನ ಪೂರೈಸುವ ಮೂಲಕ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಐಇಸಿ ಸಂಯೋಜಕ ಚನ್ನವೀರಸ್ವಾಮಿ ಹಿರೇಮಠ ಮಾತನಾಡಿ, ಕಾಯ್ದೆಯ ರೂಪದಲ್ಲಿ ಅನುಷ್ಠಾನಗೊಂಡ ನರೇಗಾ ಯೋಜನೆಯ ಜಾಬ್ ಕಾರ್ಡ್ ಪ್ರತಿ ಕುಟುಂಬದ ಹಕ್ಕಾಗಿದೆ. ಕಾಯ್ದೆಯ ನಿಯಮದಂತೆ ಸಣ್ಣ ಹಿಡುವಳಿದಾರ ರೈತರು ವೈಯಕ್ತಿಕ ಕಾಮಗಾರಿ ಮಾಡಿಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ ಸಾವಿರಾರು ರೈತರು ಕೃಷಿಹೊಂಡ, ಬದುವು, ಎರೆಹುಳು ತೊಟ್ಟಿ, ದನದ ಕೊಟ್ಟಿಗೆ ನಿರ್ಮಾಣದ ಮೂಲಕ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ಸಾವಿರಾರು ಮಹಿಳಾ ಕೂಲಿಕಾರರು ನರೇಗಾ ಯೋಜನೆಯಡಿ ಕೆಲಸ ಮಾಡಿ, ಕೂಲಿ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಇದೀಗ ನರೇಗಾ ಯೋಜನೆಯಡಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕೂಸಿನ ಮನೆ ಪ್ರಾರಂಭಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರು ತಮ್ಮ ಮೂರು ವರ್ಷದೊಳಗಿನ ಮಕ್ಕಳನ್ನು ಈ ಕೂಸಿನ ಮನೆಯಲ್ಲಿ ಬಿಟ್ಟು, ನೆಮ್ಮದಿಯಾಗಿ ಕೂಲಿ ಕೆಲಸಕ್ಕೆ ಹೋಗಬಹುದಾಗಿದೆ ಎಂದರು.

ಕಾರ್ಮಿಕರ ಆರೋಗ್ಯ ತಪಾಸಣೆ:

ನರೇಗಾ ಕಾಮಗಾರಿ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳಾ ಮತ್ತು ಪುರುಷ ಕೂಲಿಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಯಿತು. ಬಿಪಿ, ಶುಗರ್ ಕಾಯಿಲೆಗಳ ತಪಾಸಣೆ ಮಾಡಿ ಅಗತ್ಯ ಸಲಹೆಗಳನ್ನು ಸಮುದಾಯ ಆರೋಗ್ಯ ಅಧಿಕಾರಿಗಳು ನೀಡಿದರು.

ಮಣ್ಣಲ್ಲಿ ಅರಳಿದ ಭಾರತಾಂಬೆಯ ಕಲಾಕೃತಿ:

ನರೇಗಾ ಕೂಲಿಕಾರ್ಮಿಕರು ತಾವು ಕೆಲಸ ನಿರ್ವಹಿಸುವ ಕೆರೆ ಕಾಮಗಾರಿ ಸ್ಥಳದಲ್ಲಿ ಭಾರತಾಂಬೆಯ ನಕ್ಷೆ ಬಿಡಿಸಿ, ಮಣ್ಣಲ್ಲಿಯೆ ಕಲಾಕೃತಿ ನಿರ್ಮಿಸಿ ಕೆಸರಿ, ಬಿಳಿ, ಹಸಿರು ಬಣ್ಣಗಳಿಂದ ಶೃಂಗಾರಗೊಳಿಸಿ, ಬಗೆ ಬಗೆಯ ಹೂವುಗಳಿಂದ ಅಲಂಕಾರಗೊಳಿಸಿದ್ದರು. ಅಲ್ಲದೆ ನರೇಗಾ ಯೋಜನೆ ಧೇಯ ಘೋಷ ಒಳಗೊಂಡ ಲೋಗೋವನ್ನು ರಂಗೋಲಿಯ ಚಿತ್ತಾರದಲ್ಲಿ ಅನಾವರಣಗೊಳಿಸಿದ್ದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ದೊಡ್ಡಮನಿ, ಉಪಾಧ್ಯಕ್ಷೆ ಸವಿತಾ ಕುಂಬಾರ, ಸದಸ್ಯ ಮಹೇಶಪ್ಪ ಚಳಗೇರಿ, ತಾಂತ್ರಿಕ ಸಂಯೋಜಕ ಬಸನಗೌಡ ಎಸ್.ಪಿ., ತಾಲೂಕು ಐಇಸಿ ಸಂಯೋಜಕ ಕುಮಾರಯ್ಯ ಚಿಕ್ಕಮಠ, ಟಿಎಇ ಪ್ರವೀಣ್, ಶಂಕರ್ ಕಾಯಕದ, ಉಮಾ ಗುಬ್ಬೇರ, ಮೇಘರಾಜ್, ಜಯಮ್ಮ ಚಕ್ರಸಾಲಿ, ಬಸವರಾಜ್, ಕವಿತಾ ಅನೇಕರು ಉಪಸ್ಥಿತರಿದ್ದರು.