ಸಾರಾಂಶ
ಬೇಸಿಗೆಯಲ್ಲಿ ದುಡಿಯುವ ಕೈಗೆ ಕೆಲಸ ಇಲ್ಲವಲ್ಲ ಎಂಬ ಚಿಂತೆಬೇಡ. ನರೇಗಾ ಕಾರ್ಮಿಕರಿಗೆ ಇದ್ದೂರಲ್ಲೇ ಕೆಲಸ ನೀಡಿ ದಿನವೊಂದಕ್ಕೆ ೩೭೦ ರುಪಾಯಿ ಹಣ ಜಮಾವಣೆ ಮಾಡಲಾಗುವುದು ಎಂದು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಮಂಜುಳಾ ಹಕಾರಿ ಹೇಳಿದರು.
ಗಜೇಂದ್ರಗಡ: ಬೇಸಿಗೆಯಲ್ಲಿ ದುಡಿಯುವ ಕೈಗೆ ಕೆಲಸ ಇಲ್ಲವಲ್ಲ ಎಂಬ ಚಿಂತೆಬೇಡ. ನರೇಗಾ ಕಾರ್ಮಿಕರಿಗೆ ಇದ್ದೂರಲ್ಲೇ ಕೆಲಸ ನೀಡಿ ದಿನವೊಂದಕ್ಕೆ ೩೭೦ ರುಪಾಯಿ ಹಣ ಜಮಾವಣೆ ಮಾಡಲಾಗುವುದು ಎಂದು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಮಂಜುಳಾ ಹಕಾರಿ ಹೇಳಿದರು.
ತಾಲೂಕಿನ ಮುಶಿಗೇರಿ ಗ್ರಾಪಂ ವ್ಯಾಪ್ತಿಯ ಚಿಕ್ಕಅಳಗುಂಡಿ ಗ್ರಾಮದಲ್ಲಿ ನರೇಗಾ ಸಮುದಾಯ ಕಾಮಗಾರಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಬಳಿಕ ನರೇಗಾ ಕಾರ್ಮಿಕರ ಜೊತೆ ಸಮಾಲೋಚನೆ ನಡೆಸಿ ಮಾತನಾಡಿದರು.ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಬೇಸಿಗೆ ಅವಧಿಯಲ್ಲಿ ತಾಲೂಕಿನ ಗ್ರಾಪಂಗಳಲ್ಲಿ ಹಲವು ಕಾಮಗಾರಿಗಳಲ್ಲಿ ಕೆಲಸ ನೀಡುತ್ತವೆ. ಕೂಲಿ ಕಾರ್ಮಿಕರು ನರೇಗಾ ಯೋಜನೆಯಡಿ ಕೂಲಿಕೆಲಸ ಪಡೆದುಕೊಂಡು ತಮ್ಮ ಆರ್ಥಿಕ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕು. ಯೋಜನೆ ಅಡಿ ಪಡೆಯುವ ಹಣ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ಬೀಜ, ಗೊಬ್ಬರ ಖರೀದಿಗೆ ಸಹಾಯಕವಾಗುತ್ತದೆ. ಮಳೆ ಬಿದ್ದು ಕೃಷಿ ಚಟುವಟಿಕೆ ಕೆಲಸ ಆರಂಭವಾಗುವವರೆಗೂ ನರೇಗಾ ಯೋಜನೆಯಡಿ ಕೆಲಸ ಕೊಡಲಾಗುವುದು. ಹೀಗಾಗಿ ಪರಸ್ಥಳಕ್ಕೆ ಯಾರು ವಲಸೆ ಹೋಗದೇ ಬೇಸಿಗೆ ಅವಧಿಯಲ್ಲಿ ಇದ್ದೂರಲ್ಲೇ ಕೆಲಸ ಮಾಡಿ ಎಂದ ಅವರು, ನರೇಗಾ ಸಮುದಾಯ ಕಾಮಗಾರಿ ಅಡಿ ಕೈಗೊಳ್ಳುತ್ತಿರುವ ಬದು ನರ್ಮಾಣ ಅಳತೆ ೧೦*೧೦*೨ ಇದೆ. ಅಳತೆಗೆ ತಕ್ಕಂತೆ ಕೆಲಸ ಮಾಡಿದರೆ ದಿನಕ್ಕೆ ೩೭೦ ರುಪಾಯಿ ಕೂಲಿ ಕಾರ್ಮಿಕರ ವೈಯಕ್ತಿಕ ಖಾತೆಗೆ ಜಮಾವಣೆಯಾಗುತ್ತದೆ. ಜೊತೆಗೆ ಕೂಲಿ ಕಾರ್ಮಿಕರ ಹಾಜರಾತಿಗೆ ದಿನವೊಂದಕ್ಕೆ ಎರಡು ಪೋಟೋಗಳನ್ನು ತೆಗೆಯಲಾಗುವುದು. ಎರಡು ಪೋಟೋಗಳಲ್ಲಿ ಕೂಲಿ ಕಾರ್ಮಿಕರು ಇದ್ದರೆ ಮಾತ್ರ ದಿನದ ಕೂಲಿ ಮೊತ್ತ ಕಾರ್ಮಿಕರ ಖಾತೆಗೆ ಜಮಾವಣೆಯಾಗಲಿದೆ. ಇದನ್ನು ಕೂಲಿ ಕಾರ್ಮಿಕರು ಅರ್ಥೈಸಿಕೊಂಡು ಸರಿಯಾಗಿ ಹಾಜರಾತಿ ನಿರ್ವಹಣೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದರು. ಇಲ್ಲವೇ ಕೇವಲ ಒಂದು ಪೋಟೋದಲ್ಲಿದ್ದು, ಇನ್ನೊಂದು ಪೋಟೋ ತಗೆಯುವ ವೇಳೆ ಗೈರಾಗುವ ಕೂಲಿ ಕಾ ರ್ಮಿಕರ ಖಾತೆಗೆ ಹಣ ಪಾವತಿಯಾಗುವುದಿಲ್ಲ ಎಂದರು. "ನರೇಗಾ ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದ ಮಂಜುಳಾ ಹಕಾರಿ ಅವರು, ಬೇಸಿಗೆ ಅವಧಿಯಲ್ಲಿ ನರೇಗಾ ಸಮುದಾಯ ಕಾಮಗಾರಿ ನಡೆಯುವ ಸ್ಥಳದಲ್ಲಿ ಕೂಲಿಕರ್ಮಿಕರ ಸಂಖ್ಯೆಗೆ ಅನುಗೂಣವಾಗಿ ನೆರಳಿನ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುವಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗೆ ಸೂಚಿಸಿದರು "ಈ ವೇಳೆ ಮುಶಿಗೇರಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಪ್ಪ ಹುಲ್ಲೂರು, ಕವಿತಾ ಸಂಗಪ್ಪ ಲಗುಬಗಿ, ಪಿಡಿಒ ಮಂಜುನಾಥ ಮೇಟಿ, ತಾಪಂ ನರೇಗಾ ವಿಭಾಗದ ತಾಂತ್ರಿಕ ಸಂಯೋಜಕ ಪ್ರಕಾಶ್ ಮ್ಯಾಕಲ್, ಗ್ರಾಮ ಕಾಯಕ ಮಿತ್ರ ಪ್ರೇಮಾ ಹಿರೇಮಠ, ಬಿಎಫ್ ಟಿ ಶಂಕರಗೌಡ ಪಾಟೀಲ್, ಕಾಯಕಬಂಧುಗಳು ಮತ್ತು ಗ್ರಾಪಂ ಸಿಬ್ಬಂದಿ ವರ್ಗ ಹಾಜರಿದ್ದರು.