ನರೇಗಾ ಕಾರ್ಮಿಕರೊಂದಿಗೆ ಕೆರೆ ಹೂಳೆತ್ತಿದ ಎನ್ನೆಸ್ಸೆಸ್ ಶಿಬಿರಾರ್ಥಿಗಳು

| Published : May 28 2024, 01:03 AM IST

ನರೇಗಾ ಕಾರ್ಮಿಕರೊಂದಿಗೆ ಕೆರೆ ಹೂಳೆತ್ತಿದ ಎನ್ನೆಸ್ಸೆಸ್ ಶಿಬಿರಾರ್ಥಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಅನ್ನದಾತರಾದ ಕೃಷಿ ಕಾರ್ಮಿಕರ ಶ್ರಮದ ಪ್ರತಿಫಲವೇ ನಮ್ಮ ಅನ್ನವಾಗಿದ್ದು, ಇದನ್ನು ಅರ್ಥಮಾಡಿಕೊಳ್ಳದಿದ್ದರೆ ಮನುಷ್ಯ ನಿಜಕ್ಕೂ ಕೃತಘ್ನನಾಗುತ್ತಾನಲ್ಲದೆ, ಶ್ರಮಿಕ ಸಮುದಾಯವನ್ನು ಗೌರವಿಸುವ ಕಾಲ ಬರಬೇಕು ಎಂದು ಎನ್‌ಎಸ್‌ಎಸ್ ಶಿಬಿರಾರ್ಥಿ ಸ್ಫೂರ್ತಿ ಕೇಶವ ನಾಯಕ ಅಂತರಂಗ ತೆರೆದಿಟ್ಟರು.

ಹಾನಗಲ್ಲ: ಅನ್ನದಾತರಾದ ಕೃಷಿ ಕಾರ್ಮಿಕರ ಶ್ರಮದ ಪ್ರತಿಫಲವೇ ನಮ್ಮ ಅನ್ನವಾಗಿದ್ದು, ಇದನ್ನು ಅರ್ಥಮಾಡಿಕೊಳ್ಳದಿದ್ದರೆ ಮನುಷ್ಯ ನಿಜಕ್ಕೂ ಕೃತಘ್ನನಾಗುತ್ತಾನಲ್ಲದೆ, ಶ್ರಮಿಕ ಸಮುದಾಯವನ್ನು ಗೌರವಿಸುವ ಕಾಲ ಬರಬೇಕು ಎಂದು ಎನ್‌ಎಸ್‌ಎಸ್ ಶಿಬಿರಾರ್ಥಿ ಸ್ಫೂರ್ತಿ ಕೇಶವ ನಾಯಕ ಅಂತರಂಗ ತೆರೆದಿಟ್ಟರು.ಹಾನಗಲ್ಲ ತಾಲೂಕಿನ ಹಾವಣಗಿಯಲ್ಲಿ ಹಾನಗಲ್ಲಿನ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯ ಆಯೋಜಿಸಿದ ಎನ್‌ಎಸ್‌ಎಸ್ ವಿಶೇಷ ಶಿಬಿರದ ಭಾಗವಾಗಿ ಹಾವಣಗಿಯ ನೀರಾವರಿಗಾಗಿರುವ ಹೀರೆಕೆರೆಯಲ್ಲಿ ನರೇಗಾ ಕಾರ್ಮಿಕರೊಂದಿಗೆ ಹೂಳು ತೆಗೆಯುವ ಕೆಲಸದಲ್ಲಿ ಪಾಲ್ಗೊಂಡು, ನಾಲ್ಕು ಗಂಟೆಗಳ ಕಾಲ ಕಾರ್ಮಿಕರೊಂದಿಗೆ ಗುದ್ದಲಿ ಗ್ಯಾರಿ ಹಿಡಿದು ಮಣ್ಣು ಕಡಿದು, ತುಂಬಿ ಬುಟ್ಟಿ ಹೊತ್ತು ಕಾರ್ಮಿಕರ ಜೊತೆಗೆ ಕೆಲಸ ಮಾಡಿದರು. ಕಾರ್ಮಿಕರೊಂದಿಗೆ ಮಾತನಾಡಿ ಅವರ ಕಷ್ಟ ಸುಖ ಕೇಳಿದರು.ಇಲ್ಲಿನ ಕೂಲಿ ಕಾರ್ಮಿಕರಾದ ಕಲಾವತಿ ಸಾಳಂಕಿ, ಶಿವಯೋಗಿ ಷಣ್ಮುಖಿ, ಪಾಂಡುರಂಗ ತೊಂಡೂರ, ಸುಭಾಸ ಕರಡಿ ಅವರನ್ನು ಸಂದರ್ಶಿಸಿದ ಶಿಬಿರಾರ್ಥಿ ಸ್ವಾತಿ ಬೈಲಣ್ಣನವರ, ಈ ನರೇಗಾ ಕೆಲಸದಿಂದ ಆಯಾ ಊರಿನ ಕಾರ್ಮಿಕರು ತಮ್ಮ ಊರಿನಲ್ಲಿಯೇ ಕೆಲಸ ಮಾಡಲು ಸಾಧ್ಯವಾಗಿದೆ. ವಲಸೆ ಹೋಗುವ ಸಂದರ್ಭಕ್ಕೆ ತೆರೆ ಬಿದ್ದಂತಾಗಿದೆ. ಅಲ್ಲದೆ ನರೇಗಾ ಕೆಲಸ ೪ ಗಂಟೆಗಳು ಮಾತ್ರ. ಉಳಿದ ಸಮಯದಲ್ಲಿಯೂ ಈ ಕಾರ್ಮಿಕರು ರೈತರ ಭೂಮಿಯಲ್ಲಿ ಕೆಲಸ ಮಾಡುತ್ತಾರೆ. ಅದಕ್ಕೂ ಕೂಲಿ ಸಿಗುತ್ತದೆ. ಇಂದಿನ ಬೆಲೆ ಏರಿಕೆಯಲ್ಲಿ ಇದು ಇನ್ನೊಂದು ಅನುಕೂಲ. ಚಿಕ್ಕ ಮಕ್ಕಳನ್ನು ಬಿಟ್ಟು ಕೆಲಸಕ್ಕಾಗಿ ವಲಸೆ ಹೋಗುವ ಕಷ್ಟದಿಂದ ಕೃಷಿ ಕಾರ್ಮಿಕರು ಪಾರಾಗಿದ್ದಾರೆ ಎಂದರು.ಇನ್ನೊಬ್ಬ ಶಿಬಿರಾರ್ಥಿ ಶಾದಿಯಾಖಾನ, ಕೃಷಿ ಕಾರ್ಮಿಕರ ಬೆವರಿಗೆ ಸರಿಯಾದ ಬೆಲೆ ಸಿಗಬೇಕು. ಇವರು ಕೂಡ ಆರ್ಥಿಕ ಸಬಲರಾಗಬೇಕು. ಅವರ ಕಠಿಣ ಪರಿಶ್ರಮವನ್ನು ಪರಿಗಣಿಸಿ ಸರಕಾರ ಅವರ ಕೂಲಿ ದರ ಹೆಚ್ಚಿಸಬೇಕು. ಸರಕಾರಿ ಉದ್ಯೋಗಿಗಳಿಗೆ ಸಿಗುವ ಅರೋಗ್ಯ ಕನಿಷ್ಠ ಸಂಬಳ ಇವರಿಗೂ ಸಿಗಬೇಕು ಎನ್ನುತ್ತಾರೆ.ಶಿಬಿರಾಧಿಕಾರಿ ಡಾ. ವಿಶ್ವನಾಥ ಬೋಂದಾಡೆ ಈ ಸಂದರ್ಭದಲ್ಲಿ ಮಾತನಾಡಿ, ಕೃಷಿ ಕೂಲಿ ಕಾರ್ಮಿಕರಿಗೆ ಆರ್ಥಿಕ ಸಬಲತೆ ಬೇಕಾಗಿದೆ. ಅದಕ್ಕಾಗಿ ಸರಕಾರ ವರ್ಷದ ನೂರು ದಿನ ಕೆಲಸ ನೀಡಿ ಉಪಕರಿಸಿದೆ. ಮಹಿಳಾ ಕಾರ್ಮಿಕರಿಗೂ ಪುರುಷರಷ್ಟೇ ಒಂದು ದಿನಕ್ಕೆ ೩೪೯ ರು. ಕೂಲಿ ನೀಡುತ್ತಿರುವುದು ಗಮನಾರ್ಹ. ಇವರಿಗೆ ವಿಮಾ ಸೌಲಭ್ಯ ಕಲ್ಪಿಸಿರುವುದು ಕೂಡ ಒಳ್ಳೆಯ ಬೆಳವಣಿಗೆ. ಅಲ್ಲದೆ ಸರಕಾರ ವಿಶೇಷಚೇತನರು ಹಾಗೂ ವಯೋವೃದ್ಧರು ಕೂಲಿಗಾಗಿ ಬಂದವರಿಗೆ ಅರ್ಧ ಕೆಲಸ ಮಾಡಿದರೂ ಪೂರ್ಣ ಕೂಲಿ ನೀಡುವ ಕ್ರಮ ನಿಜಕ್ಕೂ ಸ್ವಾಗತಾರ್ಹ ಹಾಗೂ ಮೆಚ್ಚುವಂತಹದ್ದು ಎಂದರು.ಗ್ರಾಪಂ ಮಾಜಿ ಅಧ್ಯಕ್ಷ ಅನಂತರಾಜು ಹವಳಣ್ಣನವರ ಶಿಬಿರಾರ್ಥಿಗಳೊಂದಿಗೆ ಹಾವಣಗಿ ಗ್ರಾಮದ ಹಿರಿಕೆರೆ ಕಾಮಗಾರಿ ಸಂದರ್ಭದಲ್ಲಿ ಇದ್ದರು. ೪೮ ಶಿಬಿರಾರ್ಥಿಗಳಲ್ಲಿ ೪೧ ವಿದ್ಯಾರ್ಥಿನಿಯರೇ ಇದ್ದಾರೆ. ೭ ವಿದ್ಯಾರ್ಥಿಗಳಿದ್ದಾರೆ. ನಾಳೆ ಶಿಕ್ಷಕರಾಗಲು ತರಬೇತಿಗೆ ಬಂದ ಈ ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ನರೇಗಾ ಕಾರ್ಮಿಕರ ಜೊತೆಗೆ ಕೂಲಿ ಕೆಲಸದಲ್ಲಿ ಭಾಗಿಯಾಗರುವುದು ಒಂದು ಕಡೆ ಖುಷಿಯಾದರೂ ಕೂಡ, ಇದು ಅತ್ಯಂತ ಶ್ರಮದ ಕೆಲಸ ಎಂಬ ಅರಿವು ಶಿಬಿರಾರ್ಥಿಗಳಿಗಾಗಿದೆ.