ನಾಯಕತ್ವಗುಣ ಬೆಳೆಸುವ ಎನ್‌ಎಸ್‌ಎಸ್‌: ಡಾ.ಬಿ.ಆರ್.ಪಾಟೀಲ

| Published : Jul 01 2024, 01:55 AM IST

ಸಾರಾಂಶ

ಸಮುದಾಯದಿಂದ ಬಂದ ನಾವು ಸಮುದಾಯಕ್ಕೆ ಏನು ಕೊಟ್ಟಿದ್ದೇವೆಂದು ಆತ್ಮಾವಲೋಕನ ಮಾಡಿಕೊಳ್ಳಲು ಎನ್‌ಎಸ್‌ಎಸ್ ಉತ್ತಮ ವೇದಿಕೆಯಾಗಿದ್ದು, ಇಲ್ಲಿ ನಾಯಕತ್ವಗುಣ, ಮಾತುಗಾರಿಕೆ, ಕಾರ್ಯಕ್ರಮ ನಿರ್ವಹಣೆ ಕೌಶಲ ಮತ್ತು ನಿರ್ಭಯತೆ ಬೆಳಸಿಕೊಳ್ಳಲು ಸಹಾಯಕ ಎಂದು ನಿವೃತ್ತ ಪ್ರಾಚಾರ್ಯ ಡಾ.ಬಿ.ಆರ್.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಮುದಾಯದಿಂದ ಬಂದ ನಾವು ಸಮುದಾಯಕ್ಕೆ ಏನು ಕೊಟ್ಟಿದ್ದೇವೆಂದು ಆತ್ಮಾವಲೋಕನ ಮಾಡಿಕೊಳ್ಳಲು ಎನ್‌ಎಸ್‌ಎಸ್ ಉತ್ತಮ ವೇದಿಕೆಯಾಗಿದ್ದು, ಇಲ್ಲಿ ನಾಯಕತ್ವಗುಣ, ಮಾತುಗಾರಿಕೆ, ಕಾರ್ಯಕ್ರಮ ನಿರ್ವಹಣೆ ಕೌಶಲ ಮತ್ತು ನಿರ್ಭಯತೆ ಬೆಳಸಿಕೊಳ್ಳಲು ಸಹಾಯಕ ಎಂದು ನಿವೃತ್ತ ಪ್ರಾಚಾರ್ಯ ಡಾ.ಬಿ.ಆರ್.ಪಾಟೀಲ ಹೇಳಿದರು.

ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ 1 ಮತ್ತು 2ನೇ ಘಟಕದಿಂದ ಮುಚಖಂಡಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಗಳ ಅಭಿವೃದ್ಧಿ ಇಲ್ಲದೇ ದೇಶದ ಅಭಿವೃದ್ಧಿ ಇಲ್ಲ ಎಂಬ ಉದ್ದೇಶಕ್ಕಾಗಿ ಶಿಕ್ಷಣದಿಂದ ಸಮಾಜಸೇವೆ ಎಂಬ ಧ್ಯೇಯೋದ್ದೇಶದಿಂದ ರಾಷ್ಟ್ರೀಯ ಸೇವಾ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಸಮವಸ್ತ್ರರಹಿತ ಸಮಾಜ ಸೇವೆಯ ಸಂಘಟನೆಯಾಗಿದೆ ಎಂದು ತಿಳಿಸಿದರು.ಯಶಸ್ಸು ಎಂದರೇ ಶ್ರೀಮಂತಿಕೆಯಲ್ಲ, ಅದು ಮನಸ್ಸಿನ ಸಂತೃಪ್ತಿಯ ಸಂಕೇತ. ಅದನ್ನು ಅರಿಯಲು, ಸಮುದಾಯ ಮತ್ತು ಸಮಾಜವನ್ನು ಮರಳಿ ನೆನಪಿಸುವ ಕಾರ್ಯವನ್ನುಎನ್‌ಎಸ್‌ಎಸ್‌ ಮಾಡುತ್ತದೆ. ವಿದ್ಯಾರ್ಥಿಗಳು ನಿಮ್ಮ ಪಠ್ಯಕ್ರಮದ ಜೊತೆಗೆ ಒಂದು ವಿಶೇಷ ಕೌಶಲ್ಯ ಬೆಳಸಿಕೊಳ್ಳಿ, ಪದವಿಗಳು ಕೈಬಿಟ್ಟರು ಕೌಶಲ್ಯಗಳು ಯಶಸ್ಸು ನೀಡುತ್ತವೆ. ಕೃಷಿ ವೈಪಲ್ಯತೆಯ ಕಾರ್ಯ ಎನ್ನುವಂತೆ ಬಿಂಬಿಸಲಾಗುತ್ತಿದೆ. ಆದರೆ, ವೈಜ್ಞಾನಿಕ ಕೃಷಿಯಿಂದ ಯಶಸ್ಸು ಸಾಧ್ಯ. ಅದನ್ನು ಯುವಕರು ಕಲಿಯಬೇಕಿದೆ. ಇನ್ನೊಬ್ಬರಿಗೆ ಹೋಲಿಸಿಕೊಳ್ಳದೇ ನಮ್ಮ ಬದುಕನ್ನು ನಾವು ಹೇಗೆ ಕಟ್ಟಿಕೊಳ್ಳಬೇಕೆಂದು ಶಿಬಿರಗಳು ಕಲಿಸುತ್ತವೆ. ವಿದ್ಯಾರ್ಥಿಗಳು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಪ್ರಾಚಾರ್ಯ ಎಸ್.ಆರ್.ಮುಗನೂರಮಠ ಮಾತನಾಡಿ, ಕೌಶಲ್ಯಕ್ಕೆ ಇಂದು ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದ್ದು, ನಮ್ಮ ಕಲಾ ಮಹಾವಿದ್ಯಾಲಯದಲ್ಲಿಯೂ ಕೌಶಲ್ಯ ಅಭಿವೃದ್ಧಿ ಆಧಾರಿತ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳ ಯಶಸ್ಸು ಶಿಕ್ಷಣ ಕಲಿಸಿದ ಗುರುಗಳಿಗೆ ಅಂತೃಪ್ತಿ ನೀಡುತ್ತದೆ. ಶಿಬಿರದಲ್ಲಿ ವಿದ್ಯಾರ್ಥಿಗಳು ಗುಂಪು ಚಟುವಟಿಕೆಯಲ್ಲಿ ಭಾಗವಹಿಸುವ ಗುಣ ಬೆಳಸಿಕೊಳ್ಳಿ, ಜ್ಞಾನ ಮತ್ತು ಕೌಶಲ್ಯಗಳು ದೊಡ್ಡ ಶಕ್ತಿಗಳಾಗಿವೆ ಅವುಗಳನ್ನು ಬೆಳಸಿಕೊಳ್ಳುವ ಮತ್ತು ಉಪಯೋಗಿಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಘಟಕಾಧಿಕಾರಿಗಳಾದ ಎಂ.ಎಚ್ ವಡ್ಡರ, ಡಾ.ವೀರುಪಾಕ್ಷಎನ್.ಬಿ, ಐಕ್ಯೂಎಸಿ ಸಂಯೋಜಕ ಡಾ.ಎ.ಯುರಾಠೋಡ ಸೇರಿದಂತೆ ವಿವಿಧ ವಿಭಾಗದ ಪ್ರಾಧ್ಯಾಪಕರು ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.