ಸಾರಾಂಶ
ಶ್ರಮ, ಸಂಸ್ಕೃತಿಯ ಮಹತ್ವ ಅರಿಯಲು ಎನ್‌ಎಸ್‌ಎಸ್ ಉತ್ತಮ ವೇದಿಕೆ ಎಂದು ಕೊಡಗು ವಿವಿ ಕುಲಸಚಿವ ಡಾ. ಸೀನಪ್ಪ ತಿಳಿಸಿದರು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಪ್ರತಿಯೊಬ್ಬ ವಿದ್ಯಾರ್ಥಿಯು ಶಿಸ್ತು ಬದ್ಧ ಜೀವನವನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ಶ್ರಮ, ಸಂಸ್ಕೃತಿಯ ಮಹತ್ವವನ್ನು ಅರಿತುಕೊಳ್ಳಲು ಎನ್ಎಸ್ಎಸ್ ಒಂದು ಉತ್ತಮ ವೇದಿಕೆಯಾಗಿದೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಸಚಿವ ಡಾ. ಸೀನಪ್ಪ ಅಭಿಪ್ರಾಯಪಟ್ಟರು.ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಆವರಣ ಚಿಕ್ಕ ಅಳುವಾರದ ರಾಷ್ಟ್ರೀಯ ಸೇವಾ ಯೋಜನಾ ಕೋಶ, ಕೊಡಗು ವಿಶ್ವವಿದ್ಯಾಲಯ, ಎನ್.ಎಸ್.ಎಸ್. ಪ್ರಾಂತೀಯ ಕೇಂದ್ರ, ಬೆಂಗಳೂರು ಎನ್.ಎಸ್.ಎಸ್. ರಾಜ್ಯ ಕೋಶ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಜರುಗಿದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎನ್ಎಸ್ಎಸ್‌ನಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಸಮಾಜ ಸೇವೆಯಂತಹ ಮಾನವೀಯ ಮೌಲ್ಯಗಳ ಪ್ರಜ್ಞೆ ಜಾಗೃತಗೊಳ್ಳುತ್ತದೆ. ಸೇವೆ ಎನ್ನುವ ಪದ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಅತ್ಯಂತ ಮಹತ್ವವನ್ನು ಪಡೆದಿದೆ. ನಮ್ಮಲ್ಲಿರುವ ಶ್ರಮ, ವಿದ್ಯೆ, ಬುದ್ಧಿ, ಜ್ಞಾನ, ಕೌಶಲ್ಯ, ಆರ್ಥಿಕ ಸೌಲಭ್ಯ ಇತ್ಯಾದಿಗಳನ್ನು ಸಮಾಜದ, ದೇಶದ ಒಳಿತಿಗಾಗಿ ಫಲಾಪೇಕ್ಷೆ ಇಲ್ಲದೆ ಅರ್ಪಣಾಮನೋಭಾವದಿಂದ ನೀಡುವ ಸಹಾಯವೇ ಸೇವೆ. ಹಾಗಾಗಿ ಶೈಕ್ಷಣಿಕ ಕಲಿಕೆಯ ಜೊತೆಗೆ ಸಾಮಾಜಿಕ ಜವಾಬ್ದಾರಿ ಬೆಳೆಸಿಕೊಂಡು ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ತಿಳಿಸಿದರು.ಕೊಡಗು ವಿಶ್ವವಿದ್ಯಾಲಯದ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ ಕೋಶದ ಸಂಯೋಜಕರಾದ ಡಾ. ಗುಣಶ್ರೀ ಬಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ಯುವ ಸಮುದಾಯದ ಸಬಲೀಕರಣ ಮತ್ತು ಸರ್ವತೋಮುಖ ಬೆಳವಣಿಗೆಗೆ ಎನ್‌ಎಸ್ಎಸ್ ಪೂರಕವಾಗಿದೆ. ಸಮಾಜಸೇವೆಯ ಪರಿಕಲ್ಪನೆಗೂ ಒತ್ತುಕೊಟ್ಟು ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಅನುವು ಮಾಡಿಕೊಡುವುದು ಎನ್‌ಎಸ್‌ಎಸ್ ಧ್ಯೇಯ. ವೈಯಕ್ತಿಕ-ಸಾಮಾಜಿಕ ಬೆಳವಣಿಗೆಗೆ ಹಾಗೂ ರಾಷ್ಟ್ರಾಭಿವೃದ್ಧಿಗೆ ಕಾರಣರಾಗಬೇಕು ಎಂಬುದು ಎನ್‌ಎಸ್‌ಎಸ್ ಆಶಯ ಎಂದು ತಿಳಿಸಿದರು.
ವಿವಿಧ ವಿಭಾಗಗಳ ಉಪನ್ಯಾಸಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಜ್ಞಾನ ಕಾವೇರಿ ಆವರಣದಲ್ಲಿ ಸ್ವಚ್ಛತಾ ಶಿಬಿರದಲ್ಲಿ ಭಾಗವಹಿಸಿದರು.