ಸಮಾಜ ಸೇವೆಗೆ ಎನ್‌ಎಸ್‌ಎಸ್‌ ಸಹಕಾರಿ

| Published : May 16 2024, 12:50 AM IST

ಸಾರಾಂಶ

ಎನ್‌ಎಸ್‌ಎಸ್ ಆಯೋಜಿಸುವ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಯುವಕರಲ್ಲಿ ಏಕತೆ ಮತ್ತು ಸಮಗ್ರತೆಯ ಭಾವನೆ ಮೂಡುತ್ತದೆ. ಹಾಗಾಗಿ ಇಂತಹ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ಭಾಷೆ ಬೇರೆಯಾದರೂ ಏಕತೆಯ ಸಂಸ್ಕೃತಿಯನ್ನು ಭಾರತೀಯ ಭಾವೈಕ್ಯತೆಯಲ್ಲಿ ಕಾಣಬಹುದು.

ಹುಬ್ಬಳ್ಳಿ:

ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಯುವಕರಿಗೆ ಸಮಾಜಸೇವೆ ಮಾಡಲು ಮತ್ತು ರಾಷ್ಟ್ರೀಯತೆಯ ಮನೋಭಾವ ಬೆಳೆಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ ಎಂದು ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ. ಬಸವರಾಜು ಹೇಳಿದರು.

ಇಲ್ಲಿನ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ರಾಜ್ಯ ಎನ್‌ಎಸ್‌ಎಸ್ ಘಟಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್ಎಸ್ಎಸ್‌ನ ಪ್ರಾದೇಶಿಕ ನಿರ್ದೇಶನಾಲಯ ಹಾಗೂ ಕಾನೂನು ವಿವಿ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಎನ್‌ಎಸ್‌ಎಸ್ ಆಯೋಜಿಸುವ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಯುವಕರಲ್ಲಿ ಏಕತೆ ಮತ್ತು ಸಮಗ್ರತೆಯ ಭಾವನೆ ಮೂಡುತ್ತದೆ. ಹಾಗಾಗಿ ಇಂತಹ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ಭಾಷೆ ಬೇರೆಯಾದರೂ ಏಕತೆಯ ಸಂಸ್ಕೃತಿಯನ್ನು ಭಾರತೀಯ ಭಾವೈಕ್ಯತೆಯಲ್ಲಿ ಕಾಣಬಹುದು ಎಂದರು.

ಬೆಂಗಳೂರು ಗಾಂಧಿಭವನದ ನಿರ್ದೇಶಕ ಜಿ.ಬಿ. ಶಿವರಾಜು ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯುತ ನಾಗರೀಕರಾಗಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು. ಸಮಾಜದ ಬಗ್ಗೆ ಜವಾಬ್ದಾರಿ ತೆಗೆದುಕೊಂಡಾಗ ಮಾತ್ರ ಸಮಾಜ ಸುಧಾರಣೆಯಾಗುತ್ತದೆ ಎಂದು ತಿಳಿಸಿದರು. ಬೆಂಗಳೂರು ಎನ್‌ಎಸ್‌ಎಸ್ ಪ್ರಾದೇಶಿಕ ನಿರ್ದೇಶಕ ಡಿ. ಕಾರ್ತಿಗೆಯನ್ ಮಾತನಾಡಿ, ರಾಷ್ಟ್ರೀಯ ಭಾವೈಕ್ಯತಾ ಶಿಬಿರವು ಯುವಕರಿಗೆ ಮಾತನಾಡುವ ಶೈಲಿ, ಹಿರಿಯರಿಗೆ ಗೌರವ ನೀಡುವ ಬಗ್ಗೆ ತಿಳಿಸಿಕೊಡಲಿದೆ. ಸಂಸ್ಕೃತಿ, ಭಾಷೆ, ಸಹೋದರ ಮನೋಭಾವ ಬೆಳೆಸಿಕೊಳ್ಳಲು ಸಹಾಯಕವಾಗಿದೆ. ಇವು ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಉಪಯೋಗಕಾರಿಯಾಗಲಿವೆ ಎಂದರು.

ವಿವಿಧ ವಿಶ್ವವಿದ್ಯಾಲಯಗಳಿಂದ ಆಗಮಿಸಿದ ಎನ್ಎಸ್ಎಸ್ ಸಂಯೋಜಕರಿಗೆ ಕಾನೂನು ವಿವಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾನೂನು ವಿವಿ ರಿಜಿಸ್ಟ್ರಾರ್ ಅನುರಾಧಾ ವಸ್ತ್ರದ, ಡೀನ್‌ ಮತ್ತು ಹಣಕಾಸು ಅಧಿಕಾರಿ ಡಾ. ಜಿ.ಬಿ. ಪಾಟೀಲ, ಮೌಲ್ಯಮಾಪನ ರಿಜಿಸ್ಟ್ರಾರ್ ಡಾ. ರತ್ನಾ ಆರ್. ಭರಮಗೌಡ್ರ, ವಿವಿಯ ಎನ್ಎಸ್ಎಸ್ ಸಂಯೋಜಕ ಐ.ಬಿ. ಬಿರಾದಾರ, ಸಿಂಡಿಕೇಟ್ ಸದಸ್ಯರಾದ ಎಚ್.ವಿ. ಬೆಳಗಲಿ, ವಸಂತ ಲದವಾ, ವಿವಿ ಪ್ರಾಧ್ಯಾಪಕರು ಹಾಗೂ ವಿವಿಧ ಶಿಬಿರಾರ್ಥಿಗಳು, ವಿದ್ಯಾರ್ಥಿಗಳು, ಇತರರು ಉಪಸ್ಥಿತರಿದ್ದರು.