ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಷ್ಟ್ರೀಯ ಸೇವಾ ಯೋಜನೆಯು ರಸ್ತೆ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳಲ್ಲಿ ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸುತ್ತಿದೆ. ಅದರ ನಿರ್ಮಾತೃಗಳಾಗಿ ಕಾರ್ಯಕ್ರಮ ಅಧಿಕಾರಿಗಳ ಪಾತ್ರ ಬಹುದೊಡ್ಡದಾಗಿದೆ. ಹೀಗಾಗಿ ಕಾರ್ಯಕ್ರಮ ಅಧಿಕಾರಿಗಳು ಸತ್ಪ್ರಜೆಗಳನ್ನು ರಾಷ್ಟ್ರಕ್ಕೆ ನೀಡುವ ಸೇನಾನಿಗಳಿದ್ದಂತೆ ಎಂದು ಭಾರತ ಸರ್ಕಾರದ ಯುವಜನ ಸೇವಾ ಅಧಿಕಾರಿಗಳಾದ ವೈ.ಎಮ್.ಉಪ್ಪಿನ ಹೇಳಿದರು.ವಿದ್ಯಾಗಿರಿಯ ಬಿ.ವ್ಹಿ.ವ್ಹಿ.ಎಸ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಅಡಿಯಲ್ಲಿ ಎಂಟು ಜಿಲ್ಲೆಗಳ ಕಾರ್ಯಕ್ರಮ ಅಧಿಕಾರಿಗಳಿಗೆ ವಿಭಾಗೀಯ ಮಟ್ಟದ ಪುನಶ್ಚೇತನ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ರಾಜ್ಯ ಸಂಯೋಜನಾಧಿಕಾರಿ ರಮೇಶ ಗುಬ್ಬಿಗೂಡು ಮಾತನಾಡಿ, ಎನ್.ಎಸ್.ಎಸ್ ನ ಅಡಿಯಲ್ಲಿ ನಡೆಯುತ್ತಿರುವ ಕಾರ್ಯಗಳು ಬಹಳ ಪ್ರಮುಖವಾದವುಗಳಾಗಿವೆ. ಒಳ್ಳೆಯ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಬಲ ಸದೃಢ ರಾಷ್ಟ್ರಕಟ್ಟುವಲ್ಲಿ ಯುವಕರು ಸಮಾಜಮುಖಿಯಾಗಿ ಬೆಳೆಯುವಲ್ಲಿ ಅದರ ಕೊಡುಗೆ ಬಹಳ ಅಪಾರವಾಗಿದೆ ಎಂದರು.ಬದಲಾದ ಕಾಲದೊಂದಿಗೆ ಎಲ್ಲ ಕಾರ್ಯಕ್ರಮ ಅಧಿಕಾರಿಗಳು ಬದಲಾಗಬೇಕಿದೆ. ಇನ್ನಷ್ಟು ನಿಸ್ವಾರ್ಥ ಮನೋಭಾವನೆಯಿಂದ ಕ್ರಿಯಾಶೀಲರಾಗಿ ತಮ್ಮನ್ನು ತೊಡಗಿಸಿಕೊಂಡು ಸಮಾಜದಲ್ಲಿ ನಿಮ್ಮ ಸ್ಥಾನವನ್ನು ಉತ್ತಮವಾಗಿಸಿಕೊಳ್ಳುವುದರ ಜೊತೆಗೆ ಸಮಾಜಕ್ಕೆ ತಮ್ಮದೇ ಆದ ಸೇವೆಯನ್ನು ಸಲ್ಲಿಸಿ ಜೀವನದ ಸಾರ್ಥಕತೆ ಪಡೆಯುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪನಿರ್ದೇಶಕ ರಾಜಶೇಖರ ಪಟ್ಟಣಶೆಟ್ಟಿ ಅವರು ಮಾತನಾಡಿ, ಬಾಗಲಕೋಟೆ ಜಿಲ್ಲೆಯಲ್ಲಿ ವಿಭಾಗೀಯ ಮಟ್ಟದ ಪುನಃಚೇತನ ಕಾರ್ಯಕ್ರಮ ಆಯೋಜನೆ ಮಾಡಿದ್ದು ತುಂಬಾ ಸಂತೋಷದಾಯಕ ವಿಷಯವಾಗಿದೆ. ಕರ್ನಾಟಕ ರಾಜ್ಯದ ಎನ್.ಎಸ್.ಎಸ್ ನ ಕಾರ್ಯವು ದೇಶದಲ್ಲಿ ಮೆಚ್ಚುಗೆಯನ್ನು ಪಡೆದುಕೊಂಡಿದೆ. ರಾಷ್ಟ್ರ ಹಾಗೂ ರಾಜ್ಯಮಟ್ಟದ ಅಧಿಕಾರಿಗಳು ಜೊತೆಗೆ ಪಿ.ಎಫ್.ಎಮ್.ಎಸ್ ತರಬೇತಿದಾರರು ವಿಶೇಷ ಉಪನ್ಯಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತರಬೇತಿ ನೀಡುತ್ತಿರುವುದು ವಿಶೇಷವಾಗಿದೆ. ಮಾತ್ರವಲ್ಲ, ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ.ಟಿ.ಬಿ.ಕೋರಿಶೆಟ್ಟಿ, ಎನ್.ಎಸ್.ಎಸ್ ಬೆಳೆದು ಬಂದ ದಾರಿ ಹಾಗೂ ಅದರ ಉದ್ದೇಶಗಳನ್ನು ತಿಳಿಸಿಕೊಟ್ಟರು. ಕುಮಾರಿ.ಮಹಾಲಕ್ಷ್ಮೀ ಬಡಿಗೇರ ಪ್ರಾರ್ಥನೆ ಗೈದರು, ಕಾಲೇಜಿನ ಪ್ರಾಚಾರ್ಯ ಪ್ರೊ.ಎಸ್.ಹೆಚ್.ವಟವಟಿ ಅವರು ಸ್ವಾಗತಿಸಿದರು. ವಿಜಯಪುರ ವಿಭಾಗಿಯ ಅಧಿಕಾರಿಗಳಾದ ಎಂ.ಎಸ್.ಮುಲ್ಲಾ ವಂದಿಸಿದರು. ಎ.ಎಂ. ಪಾಟೀಲ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬೆಳಗಾವಿಯ ವಿಭಾಗೀಯ ಅಧಿಕಾರಿ ರವಿಕುಮಾರ್ ಅಂಬೋರೆ, ಬಾಗಲಕೋಟೆ ಜಿಲ್ಲೆಯ ನೋಡಲ್ ಅಧಿಕಾರಿ ಡಾ.ಎಂ.ಎ.ಪಾಟೋಳಿ, ಕಾರ್ಯಕ್ರಮಾಧಿಕಾರಿ ಎಮ್ ಹೆಚ್ ಕಟಗೇರಿ, ವಿ.ಎಮ್.ಬಡಿಗೇರ್ ಮತ್ತು .ಡಾ.ಎಸ್..ಆರ್.ಕುಲಕರ್ಣಿ ಉಪಸ್ಥಿತರಿದ್ದರು.