ಸಾರಾಂಶ
ಸಮಾರೋಪ ಸಮಾರಂಭ । ಮೈಸೂರು ವಿವಿಯ ಕಾರ್ಯಕ್ರಮ ಸಂಯೋಜನಾಧಿಕಾರಿ । ಶೈಕ್ಷಣಿಕ ಪ್ರಗತಿಗೆ ಪೂರಕ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರಪರಸ್ಪರ ವಿಚಾರಗಳ ವಿನಿಮಯ, ವ್ಯಕ್ತಿತ್ವ ವಿಕಸನ, ಗ್ರಾಮೀಣ ಪ್ರದೇಶದ ಜನರೊಂದಿಗೆ ಒಡನಾಟ, ಮೌಢ್ಯ ಮತ್ತು ಕಂದಾಚಾರ ಹಾಗೂ ಸರ್ಕಾರಿ ಯೋಜನೆಗಳ ಕುರಿತು ಹೆಚ್ಚಿನ ಅರಿವು ಮೂಡಿಸುವ ಜತೆಗೆ ಎಲ್ಲರಲ್ಲಿ ಅಡಕವಾಗಿರುವ ಹಾಡುಗಾರಿಕೆ ಅಥವಾ ಕಲೆಯ ಅನಾವರಣಕ್ಕೆ ಉತ್ತಮ ವೇದಿಕೆ ಒದಗಿಸುವ ಮತ್ತು ಸಕಲ ರೀತಿಯಲ್ಲೂ ಶ್ರೇಯಸ್ಸಿಗೆ ಉತ್ತಮ ಬುನಾದಿಯನ್ನು ಎನ್‌ಎಸ್‌ಎಸ್‌ನಿಂದ ಪಡೆಯಬಹುದು ಎಂದು ಮೈಸೂರು ವಿವಿಯ ರಾ.ಸೇ.ಯೋ. ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಎಂ.ಬಿ. ಸುರೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜಿನಲ್ಲಿ ೨೦೨೩-೨೪ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ರಾ.ಸೇ.ಯೋ., ರೇಂಜರ್ಸ್ ಹಾಗೂ ರೆಡ್‌ಕ್ರಾಸ್ ಘಟಕಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಎರಡು ವರ್ಷಗಳ ಎನ್‌ಎಸ್‌ಎಸ್‌ನಲ್ಲಿ ದಾಖಲು ಮಾಡಿಸಿಕೊಂಡು ಒಂದು ಕ್ಯಾಂಪ್‌ಗಳಲ್ಲಿ ಭಾಗವಹಿಸಿದ್ದಲ್ಲಿ ೨೫ ಅಂಕ ನೀಡಲಾಗುತ್ತದೆ, ಈ ಅವಕಾಶವು ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದೆ. ೧೯,೨೦೦ ಮಕ್ಕಳು ಎನ್‌ಎಸ್‌ಎಸ್ ನೋಂದಣಿಯೊಂದಿಗೆ ಸೇವಾ ನಿರತರಾಗಿದ್ದು, ಯೋಧರ ರೀತಿಯಲ್ಲಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳು, ಪಠ್ಯಕ್ಕೆ ಪೂರಕವಾಗಿ ನ್ಯಾಷನಲ್ ಇಂಟಿಗ್ರೇಶನ್ ಕ್ಯಾಂಪ್ ಹಾಗೂ ಯೂತ್ ಫೆಸ್ಟಿವಲ್, ರಿಪಬ್ಲಿಕ್ ಡೇ ಕಾರ್ಯಕ್ರಮದಲ್ಲಿ ಭಾಗವಹಿಸಿ, ಉಪನ್ಯಾಸಕರ ಜತೆಗೆ ನಿರಂತರ ಸಂಪರ್ಕವು ಪ್ರಶಸ್ತಿಗಳ ಪಡೆಯುವ ಜತೆಗೆ ಮಾನಸ ಗಂಗೋತ್ರಿಯಲ್ಲಿ ಪಿಜಿ ಸೀಟ್ ಪಡೆಯಲು ಅವಕಾಶವಿರುತ್ತದೆ ಎಂದು ಹೇಳಿದರು.ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ. ಸುರೇಶ್ ಕುಮಾರ್ ಹಣಕಾಸಿನ ತೊಂದರೆಯಿಂದ ಡಿಗ್ರಿ ವ್ಯಾಸಂಗ ಮಾಡಲು ತೊಂದರೆಯಾಗಿದೆ ಎಂದು ಕಾಲೇಜು ಬಿಟ್ಟ ಹತ್ತು ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡುತ್ತೇನೆ, ಅಂತಹ ವಿದ್ಯಾರ್ಥಿಗಳು ಇದ್ದಲ್ಲಿ ಸಂಪರ್ಕಿಸಲು ತಿಳಿಸಬೇಕು ಎಂದು ಹೇಳಿದರು.
ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಡಾ.ಆಶಾಜ್ಯೋತಿ ಯು.ಎಚ್., ಅರಕಲಗೂಡು ಬಾ.ಸ.ಪ.ಪ.ಕಾಲೇಜು ಪ್ರಾಂಶುಪಾಲೆ ಪದ್ಮಾ ಟಿ. ಮಾತನಾಡಿದರು.ಬಿಎ, ಬಿಎಸ್ಸಿ ಹಾಗೂ ಬಿಸಿಎ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು ಹಾಗೂ ಸಾಂಸ್ಕೃತಿಕ, ಕ್ರೀಡೆ, ರಾ.ಸೇ.ಯೋ., ರೇಂಜರ್ಸ್ ಹಾಗೂ ರೆಡ್‌ಕ್ರಾಸ್ ಘಟಕ ಆಯೋಜನೆ ಮಾಡಿದ್ದ ಸ್ಪರ್ಧೆಗಳ ವಿಜೇತರು ಮತ್ತು ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.
ಸಹನಾ ಹಾಗೂ ತಂಡ ನಾಡಗೀತೆ ಹಾಡಿದರು, ಅಕ್ಷತಾ ಹಾಗೂ ತಂಡ ಪ್ರಾರ್ಥಿಸಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಸಂಚಾಲಕಿ ಶ್ವೇತಾ ನಾಯಕ್ ಸ್ವಾಗತಿಸಿದರು. ಪರಿಸರ ಸಂರಕ್ಷಣೆ ಘಟಕದ ಸಂಚಾಲಕ ಅಶೋಕ್ ಎಚ್.ಕೆ. ನಿರೂಪಿಸಿದರು.ಕಾಲೇಜಿನ ಸಾಂಸ್ಕೃತಿಕ ವೇದಿಯ ಸಂಚಾಲಕ ಡಾ. ಗಣೇಶ್, ಐಕ್ಯೂಎಸಿ ಘಟಕದ ಸಂಚಾಲಕ ಡಾ.ಕೃಷ್ಣಮೂರ್ತಿ, ದೈಹಿಕ ಶಿಕ್ಷಣ ನಿರ್ದೇಶಕ ಜಯಚಂದ್ರ ಎಂ.ಎಸ್., ರಾ.ಸೇ.ಯೋ. ಕಾರ್ಯಕ್ರಮಾಧಿಕಾರಿ ಫಕೀರಮ್ಮ ಪಿ. ಮುರಗೋಡ, ಉಪನ್ಯಾಸಕಿ ಮಾಲಾ, ಇತರರು ಇದ್ದರು.