ಸಾರಾಂಶ
ಸ್ವಾತಂತ್ರ್ಯಪೂರ್ವದ ಕಟ್ಟಡಕ್ಕೆ ಅಭಿವೃದ್ಧಿ ಭಾಗ್ಯವಿಲ್ಲ । ಸ್ವಂತ ಕಟ್ಟಡವಿದ್ದರೂ ಬಳಸದೆ ಬಾಡಿಗೆಗೆ ಹಣ ಪೋಲು । ಜನಪ್ರತಿನಿಧಿಗಳ ನಿರ್ಲಕ್ಷ್ಯ
ನಂದನ್ಪುಟ್ಟಣ್ಣಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಸ್ವಾತಂತ್ರ್ಯಪೂರ್ವದಲ್ಲಿಯೇ ಪ್ರಾರಂಭವಾದ ನುಗ್ಗೇಹಳ್ಳಿಯ ಉಪ ನೋಂದಣಾಧಿಕಾರಿಗಳ ಕಚೇರಿರಿ ಇಂದು ಹಾಳು ಕೊಂಪೆಯಂತಾಗಿದೆ. ಇದಕ್ಕೆ ಅಧಿಕಾರಿಗಳು ಮತ್ತು ಇಲಾಖೆಯ ನಿರ್ಲಕ್ಷ್ಯ ಕಾರಣ ಎಂದು ದೂರಲಾಗಿದೆ. ಗಟ್ಟಿಮುಟ್ಟಾಗಿದ್ದ ಕಟ್ಟಡ ಹಾಳಾಗಿರುವುದಕ್ಕೆ ಇಲಾಖೆ ಹಾಗೂ ಜನಪ್ರತಿನಿಧಿಗಳೇ ನೇರ ಹೊಣೆ ಎಂದು ಸಾರ್ವಜನಿಕರು ಹೇಳಿದ್ದಾರೆ.ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಅಪ್ಪೇಗೌಡರು ಅಂದು ಸರ್ಕಾರಿ ಕಚೇರಿಗಾಗಿ ಭೂಮಿ ದಾನ ಮಾಡಿ ಕಟ್ಟಡ ನಿರ್ಮಾಣವಾಗಲು ಕಾರಣವಾಗಿದ್ದರು. ಆದರೆ ಅವರು ನೀಡಿದ ದಾನದ ಆಸ್ತಿ ಈಗ ಹಾಳಾಗಿ ಹೋಗುತ್ತಿದೆ.
ನುಗ್ಗೇಹಳ್ಳಿ ಹೋಬಳಿಯ ಕೇಂದ್ರಸ್ಥಾನವಾಗಿದ್ದು ಈ ಕಚೇರಿ ಹೃದಯಭಾಗದಲ್ಲಿ ಇದೆ. ಆದರೆ ಇಂತಹ ಕಟ್ಟಡವನ್ನು ಕಾಪಾಡಿಕೊಳ್ಳುವಲ್ಲಿ ಇಲಾಖೆ ಮೌನವಾಗಿರುವುದು ಖಂಡನೀಯ ಎಂದು ಹೇಳಲಾಗಿದೆ.ಚನ್ನರಾಯಪಟ್ಟಣ ತಾಲೂಕಿನಲ್ಲಿ ಎರಡು ಉಪ ನೋಂದಣಾಧಿಕಾರಿಗಳ ಕಚೇರಿ ಇದ್ದು ಚನ್ನರಾಯಪಟ್ಟಣ ಉಪ ನೋಂದಣಾಧಿಕಾರಿಗಳ ಕಚೇರಿಗೆ ಸ್ವಂತ ಕಟ್ಟಡವೇ ಇಲ್ಲ, ನುಗ್ಗೇಹಳ್ಳಿ ಹೋಬಳಿ, ಹಿರೀಸಾವೆ ಹೋಬಳಿ, ಬಾಗೂರು ಹೋಬಳಿಗೆ ಸೇರಿದಂತೆ ನುಗ್ಗೇಹಳ್ಳಿಯಲ್ಲಿ ಸ್ವಂತ ಕಟ್ಟಡವಿದ್ದರೂ ಸಹ ಆ ಕಟ್ಟಡವನ್ನು ಕಾಪಾಡಿಕೊಳ್ಳಲು ಹಿಂದೇಟು ಹಾಕುತ್ತಿರುವುದು ನಾಚಿಕೆಯ ವಿಷಯ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ಸ್ವಂತ ಜಾಗ, ಕಟ್ಟಡವಿದ್ದರೂ ಅದನ್ನು ದುರಸ್ತಿ ಮಾಡಿಕೊಳ್ಳದೇ ಖಾಸಗಿ ಕಟ್ಟಡವನ್ನು ಬಾಡಿಗೆಗೆ ಪಡೆದುಕೊಂಡು ಲಕ್ಷಾಂತರ ರುಪಾಯಿ ಬಾಡಿಗೆ ಕಟ್ಟಿರುವ ಸರ್ಕಾರ ಅದೇ ಬಾಡಿಗೆ ಹಣದಲ್ಲಿಯೇ ಕಟ್ಟಡ ನಿರ್ಮಾಣ ಮಾಡಬಹುದಾಗಿತ್ತು. ಆದರೆ ಇಲಾಖೆ ಮೌನವೇಕೆ ಎಂಬುದು ಸಾರ್ವಜನಿಕ ವಲಯದ ಪ್ರಶ್ನೆಯಾಗಿದೆ.ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಜನಪ್ರತಿನಿಧಿಗಳಿಗೆ ಈ ಕಟ್ಟಡ ಕಾಣುವುದಿಲ್ಲವೇ ಅಥವಾ ಈ ಹೋಬಳಿ ನೆನಪು ಇಲ್ಲವೇ, ಒಟ್ಟಾರೆ ಈ ಹೋಬಳಿ ಕಟ್ಟಡಗಳು ತಬ್ಬಲಿಯಾಗಿವೆ ಎಂದು ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ನುಗ್ಗೇಹಳ್ಳಿ ಭಾಗದಲ್ಲಿ ಹೆಚ್ಚು ಭೂಮಿ ಖರೀದಿಗಳು ಉಂಟಾಗುತ್ತಿವೆ. ಆದರೆ ನೋಂದಣಾಧಿಕಾರಿಗಳ ಕಚೇರಿ ಪ್ರತಿನಿತ್ಯ ಜನವಸತಿ ಕೇಂದ್ರ, ಸರ್ಕಾರಕ್ಕೆ ಹೆಚ್ಚು ಆದಾಯ ನೀಡುವ ಕಚೇರಿಯಾಗಿದ್ದರೂ ಸಹ ಏಕೆ ಸುಮ್ಮನಿದ್ದಾರೆ ಎಂಬುದು ಪ್ರಶ್ನೆಯಾಗೇ ಉಳಿದಿದೆ. ಸ್ವಂತ ಜಾಗ ಹಾಗೂ ಸ್ವಂತ ಕಟ್ಟಡ ಇದ್ದರೂ ಸಹ ಯಾವುದೋ ಕಾಣದ ಕೈಗಳಿಂದ ಬಾಡಿಗೆ ಕಟ್ಟಡದಲ್ಲಿ ಹಲವಾರು ವರ್ಷಗಳಿಂದ ಕಚೇರಿಯ ವ್ಯವಹಾರ ನಡೆಸಿಕೊಂಡು ಬರುತ್ತಿರುವುದು ಸರಿಯೇ ಎಂಬುದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.ಕೂಡಲೇ ಕಂದಾಯ ಸಚಿವರು, ಜಿಲ್ಲಾಧಿಕಾರಿ, ಜಿಲ್ಲಾ ನೋಂದಣಾಧಿಕಾರಿ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಡಿ ನೀಡಿ ಇದಕ್ಕೆ ಶಾಶ್ವತ ಪರಿಹಾರ ನೀಡಲಿ ಎಂದು ಒತ್ತಾಯಿಸಲಾಗಿದೆ.
ಕೋಟ್..ಕೊಟ್ಯಂತರ ರು. ವ್ಯವಹಾರ ನಡೆಯುವ ಕಚೇರಿ ಎಂದರೆ ಅದು ಉಪ ನೋಂದಣಾಧಿಕಾರಿಗಳ ಕಚೇರಿ. ಆದರೆ ಸರ್ಕಾರದ ಹಣವನ್ನು ಪೋಲು ಮಾಡಲು ಖಾಸಗಿಯವರ ಕಟ್ಟಡದಲ್ಲಿ ಕಚೇರಿಗೆ ಬಾಡಿಗೆ ಹಣ ನೀಡುತ್ತಿರುವುದು ಸರಿಯಲ್ಲ, ಕೂಡಲೇ ಸ್ವಂತ ಕಟ್ಟಡವನ್ನು ನವೀಕರಿಸಿ ಉದ್ಘಾಟಿಸಬೇಕು.ರಾಮಚಂದ್ರು, ನುಗ್ಗೇಹಳ್ಳಿ, ರೈತ ಸಂಘದ ತಾಲೂಕು ಅಧ್ಯಕ್ಷ.
ಹಾಳಾಗಿರುವ ನುಗ್ಗೇಹಳ್ಳಿ ಹೋಬಳಿಯ ಉಪ ನೋಂದಣಾಧಿಕಾರಿ ಕಚೇರಿ.