ಸಂಭ್ರಮದ ನುಂಕೆಮಲೆ ಶ್ರೀ ಸಿದ್ದೇಶ್ವರ ರಥೋತ್ಸವ

| Published : May 19 2024, 01:52 AM IST

ಸಾರಾಂಶ

ಮೊಳಕಾಲ್ಮುರು ತಾಲೂಕಿನ ನುಂಕೆಮಲೆ ಬೆಟ್ಟದಲ್ಲಿ ನುಂಕೆಮಲೆ ಸಿದ್ದೇಶ್ವರ ರಥೋತ್ಸವ ಸಂಭ್ರಮದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ/ ಮೊಳಕಾಲ್ಮುರು/ ಚಳ್ಳಕೆರೆ

ತಾಲೂಕಿನ ಹಾನಗಲ್ ಗ್ರಾಪಂ ವ್ಯಾಪ್ತಿಯ ನುಂಕೆಮಲೆ ಬೆಟ್ಟದಲ್ಲಿ ಶನಿವಾರ ನುಂಕೆಮಲೆ ಸಿದ್ದೇಶ್ವರ ರಥೋತ್ಸವ ಸಂಭ್ರಮದಿಂದ ಜರುಗಿತು. ಬೆಳಿಗ್ಗೆಯಿಂದಲೇ ನಾನಾ ಧಾರ್ಮಿಕ ಪೂಜಾ ಕಾರ್ಯಗಳೊಂದಿಗೆ ಬೃಹತ್ ಹೂವಿನ ಹಾರಗಳಿಂದ ಅಲಂಕೃತಗೊಳಿಸಿದ ರಥವನ್ನು ಹರಳಯ್ಯನಿಗೆ ಮೊದಲ ಪೂಜೆ ನೆರವೇರಿಸುವ ಮೂಲಕ ನುಂಕಪ್ಪನ ದೇವರನ್ನು ರಥದಲ್ಲಿ ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಬೆಟ್ಟದ ಮುಖ್ಯರಸ್ತೆಯಿಂದ ಮಲ್ಲಿಕಾರ್ಜುನ ದೇವಸ್ಥಾನದವರೆಗೆ ಎಳೆದೊಯ್ದು ಮೂಲ ಸ್ಥಾನಕ್ಕೆ ಕರೆತರಲಾಯಿತು. ರಥೋತ್ಸವದ ಉದ್ದಕ್ಕೂ ಭಕ್ತರು ಬಾಳೆ ಹಣ್ಣು, ಚೂರು ಬೆಲ್ಲ ಎರಚಿ ಭಕ್ತಿ ಸಮರ್ಪಿಸಿದರು.

ಸಮುದ್ರ ಮಟ್ಟದಿಂದ ಸಾವಿರಾರು ಅಡಿಗಳ ಎತ್ತರದಲ್ಲಿರುವ ನುಂಕೆಮಲೆ ಸುತ್ತಲೂ ಬೆಟ್ಟದ ಸಾಲಿನಿಂದ ಆವೃತವಾಗಿದೆ. ಇಲ್ಲಿನ ನೆಲೆಯೂರಿರುವ ನುಂಕಿಮಲೆ ಸಿದ್ದೇಶ್ವರ ದೇವರು ತಾಲೂಕು ಅಲ್ಲದೆ ಪಕ್ಕದ ಆಂದ್ರಪ್ರದೇಶ, ತೆಲಂಗಾಣ ಸೇರಿದಂತೆ ಉತ್ತರ ಭಾರತದ ರಾಜ್ಯಗಳ ಅಪಾರ ಭಕ್ತರಿಗೆ ಆರಾಧ್ಯ ದೈವವಾಗಿ ದ್ದಾನೆ. ಪ್ರತಿ ವರ್ಷ ವೈಶಾಕ ಶುದ್ಧ ಪಂಚಮಿಯ ದಿನದಂದು ಶ್ರೀ ಮಠದ ಮಂಗಲ್‌ನಾಥ್ ಸ್ವಾಮೀಜಿ ನೇತೃತ್ವದಲ್ಲಿ ನುಂಕೆಮಲೆ ಸಿದ್ದೇಶ್ವರ ಜಾತ್ರಾ ಮಹೋತ್ಸವ ನಡೆಯಲಿದೆ.ಕುಡಿಯುವ ನೀರಿಗೆ ಕ್ರಮ:

ಈ ಬಾರಿ ಎದುರಾಗಿರುವ ತೀವ್ರ ಬರಗಾಲದಿಂದಾಗಿ ಬೆಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಶಾಸಕ ಎನ್.ವೈ. ಗೋಪಾಲಕೃಷ್ಣ ಅವರ ಮುತುವರ್ಜಿಯಿಂದಾಗಿ ಸ್ಥಳೀಯ ಗ್ರಾಮ ಪಂಚಾಯಿತಿಯವರು ಕಳೆದೊಂದು ವಾರದಿಂದ ಬೋರ್‌ವೆಲ್ ಕೊರೆಸಿ ಕುಡಿಯುವ ನೀರಿಗೆ ಕ್ರಮ ವಹಿಸಿದ್ದರು. ಜತೆಗೆ ಭಕ್ತರಿಗೆ ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ.

ಸಿಹಿನೀರಿನ ಹೊಂಡದ ಸುತ್ತ ಮೆಸ್:

ರಾಕ್ಷಸರ ಸಂಹಾರಕ್ಕಾಗಿ ಅವತರಿಸಿದ ಕಾಲ ಬೈರವನು ತನ್ನ ಕಾರ್ಯ ಮುಗಿದ ನಂತರ ಬೆಟ್ಟದಲ್ಲಿ ಎಲ್ಲಾ ವರ್ಗಕ್ಕೂ ಕುಡಿಯುವ ನೀರಿಗಾಗಿ ಸಿಹಿ ನೀರಿನ ಹೊಂಡವೊಂದನ್ನು ನಿರ್ಮಿಸಿದ್ದ ಎನ್ನಲಾಗುತ್ತಿದೆ. ಇಂತಹ ಐತಿಹಾಸಿಕ ಹಿನ್ನೆಲೆ ಇರುವ ಹೊಂಡದಲ್ಲಿ ಕಳೆದ ಬಾರಿ ಜಾತ್ರೆಯಲ್ಲಿ ಅಕ್ಕ, ತಂಗಿಯರಿಬ್ಬರು ಆಕಸ್ಮಿಕ ವಾಗಿ ಕಾಲು ಜಾರಿ ಬಿದ್ದು ನೀರು ಪಾಲಾಗಿದ್ದರು. ಘಟನೆಯಿಂದ ಎಚ್ಚೆತ್ತ ತಾಲೂಕು ಆಡಳಿತ ಮತ್ತು ಗ್ರಾಮ ಪಂಚಾಯಿತಿ ಈ ಬಾರಿ ಹೊಂಡದ ಸುತ್ತಲೂ ಮೆಸ್ ಅಳವಡಿಕೆ ಮಾಡಿ ಜನರು ಹೊಂಡದ ಸಮೀಪಕ್ಕೆ ಬಾರದಂತೆ ಸೂಕ್ತ ಪೋಲೀಸ್ ಬಂದೋಬಸ್ತು ಕೈಗೊಂಡಿದ್ದಾರೆ.ಸೂಕ್ತ ಬಂದೋಬಸ್ತು: ಜಾತ್ರೆಗೆ ಆಗಮಿಸುವ ಭಕ್ತರಿಗೆ ನೆರವಾಗಲು ಪೋಲೀಸ್ ಇಲಾಖೆ ಬಾರಿ ಬಂದೋಬಸ್ತು ಕೈಗೊಂಡಿದೆ. ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿಯಿಂದ ಬೆಟ್ಟಕ್ಕೆ ತೆರಳುವ 5 ಕಿ ಮೀ ಉದ್ದದ ಡಾಂಬರು ರಸ್ತೆಯನ್ನು ದುರಸ್ತಿ ಗೊಳಿಸಲಾಗಿದೆ.ಅಲ್ಲಲ್ಲಿ ರಸ್ತೆ ಸುರಕ್ಷತಾ ಫಲಕ ಗಳನ್ನು ಅಳವಡಿಸಲಾಗಿತ್ತು. ಜಾತ್ರಾ ಸಮಯದಲ್ಲಿ ಅಹಿತಕರ ಘಟನೆಗಳು ಜರುಗದಂತೆ ಇಬ್ಬರು ಡಿವೈಎಸ್‌ಪಿ 3 ಸಿಪಿಐ, 11 ಪಿಎಸ್ಐ, 130ಕ್ಕೂ ಹೆಚ್ಚಿನ ಪೋಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಹರಳಯ್ಯನ ದೇವಸ್ಥಾನ ಸಮೀಪದ ಆವರಣದಲ್ಲಿ ದ್ವಿ ಚಕ್ರ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿದ್ದು, ರಸ ಸಿದ್ಧರ ಬಂಡೆ ಸಮೀಪದಲ್ಲಿ ಕಾರು, ಬಸ್ಸು, ಲಾರಿ, ಆಟೋ ಸೇರಿದಂತೆ ಬೃಹತ್ ವಾಹನಗಳಿಗೆ ಪಾರ್ಕಿಂಗ್ ಮಾಡಲು ಸ್ಥಳವಾಕಾಶ ಕಲ್ಪಿಸಲಾಗಿತ್ತು. ಇನ್ನು, ಸಂಜೆ 6 ರಿಂದ ರಾತ್ರಿ 8 ವರೆಗೆ ಬೆಟ್ಟಕ್ಕೆ ತೆರಳುವಂಥ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಅಸುರರಿಗೆ ಹರಳಯ್ಯನ ‘ಲಗಾಮು’

ಸಾವಿರಾರು ವರ್ಷಗಳ ಹಿಂದೆ ನುಂಕೆಮಲೆ ಬೆಟ್ಟದಲ್ಲಿ ಮಲಿಯಮ್ಮ, ನುಂಕಮ್ಮ ಎಂಬ ಇಬ್ಬರು ರಾಕ್ಷಸರು ವಾಸವಾಗಿ ಜನತೆಗೆ ತೀವ್ರ ತೊಂದರೆ ಕೊಡುತ್ತಿದ್ದರು. ರಾಕ್ಷಸರ ಕಾಟ ತಡೆಯಲಾರದೆ ಅಲ್ಲಿನ ಜನತೆ ಕಾಲಭೈರವನ ಮೊರೆ ಹೋದಾಗ ರಾಕ್ಷಸರ ಸಂಹಾರಕ್ಕೆಂದು ಕುದುರೆ ಏರಿ ಬರುವಾಗ ಬೆಟ್ಟದ ಮೇಲೆ ಕುದುರೆಯ ಲಗಾಮು ಹರಿದು ಅಸಹಾಯಕನಾಗಿ ನಿಂತದ್ದನ್ನು ಕಂಡ ದಲಿತ ಸಮುದಾಯದ ಹರಳಯ್ಯ ರಾಕ್ಷಸರ ಸಂಹಾರಕ್ಕೆಂದು ಬರುವಂತ ಕಾಲ ಭೈರವನಿಗೆ ತನ್ನ ಕಾಲಿನ ಹೆಬ್ಬರೆಳಿನ ನರ ಕಿತ್ತು ಕುದುರೆಗೆ ಲಗಾಮು ಮಾಡಿಕೊಟ್ಟನಂತೆ ಪ್ರತಿಯಾಗಿ ಕಾಲಭೈರವನು ನುಂಕೆಮಲೆ ಬೆಟ್ಟದಲ್ಲಿ ನನ್ನ ಪೂಜೆಗೂ ಮುನ್ನಾ ನಿನ್ನ ಪೂಜೆ ನೆರವೇರಲಿ ಎಂದು ವರ ನೀಡಿದ್ದ ಎನ್ನುವ ಐತಿಹ್ಯವಿದೆ. ಇದಕ್ಕೆ ಇಂಬು ನೀಡುವಂತೆ ನುಂಕೆಮಲೆ ಬೆಟ್ಟಕ್ಕೆ ಬರುವ ಭಕ್ತರು ಮೊದಲು ಹರಳಯ್ಯನಿಗೆ ಪೂಜೆ ಸಲ್ಲಿಸಿದ ನಂತರ ಕಾಲ ಭೈರವನಿಗೆ ಪೂಜೆ ಸಲ್ಲಿಸುವುದು ಪ್ರತೀತಿ.ಚಳ್ಳಕೆರೆಯಲ್ಲಿ ವೀರಭದ್ರಸ್ವಾಮಿ ಭವ್ಯ ರಥೋತ್ಸವ

ಚಳ್ಳಕೆರೆ: ಕಳೆದ ನೂರಾರು ವರ್ಷಗಳಿಂದ ನಗರದ ಜನತೆಯ ಯೋಗಕ್ಷೇಮವನ್ನು ಬಯಸಿ ಗ್ರಾಮದೇವರಾದ ಶ್ರೀ ವೀರಭದ್ರಸ್ವಾಮಿಯ ಭವ್ಯ ರಥೋತ್ಸವವನ್ನು ಪ್ರತಿವರ್ಷ ನಡೆಸುತ್ತಾ ಬಂದಿದ್ದು, ಪ್ರಸ್ತುತ ೨೦೨೪ರ ರಥೋತ್ಸವಕ್ಕೆ ಶ್ರೀಸ್ವಾಮಿಯ ಕಂಕಣಧಾರಣೆ ಮಾಡುವ ಮೂಲಕ ಚಾಲನೆ ನೀಡಲಾಯಿತು.

ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ಧರ್ಮದರ್ಶಿಗಳಾದ ಗೌಡ್ರ ರಾಮಣ್ಣ, ಗ್ರಾಮದ ಶಾನಭೋಗರಾದ ಪಿ.ವಿ.ಸುಬ್ಬಣ್ಣ, ಕುಮಾರಸ್ವಾಮಿ ದೇವಸ್ಥಾನದ ಆಯಗಾರರಾದ ಗೌಡ್ರ ನಾಗಣ್ಣ, ಗೌಡ್ರ ಚಿಕ್ಕಣ್ಣ, ಪಿ.ತಿಪ್ಪೇಸ್ವಾಮಿ, ದಳವಾಯಿ ಮೂರ್ತಿ, ಸೂರಯ್ಯ, ಮಂಜು, ಟೈಲರ್‌ ವೀರೇಶ್, ದೇವಿ ಪ್ರಸಾದ್, ನಾಗರಾಜು, ಶಾಂತಕುಮಾರ್, ಸುರೇಶ್‌ಕುಮಾರ್, ಕುಮಾರಸ್ವಾಮಿ ಹಾಗೂ ಭಕ್ತರು ಕಂಕಣಧಾರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಜಾತ್ರೋತ್ಸವದ ಬಗ್ಗೆ ಮಾಹಿತಿ ನೀಡಿದ ಧರ್ಮದರ್ಶಿ ಗೌಡ್ರರಾಮಣ್ಣ, ಮೇ ೧೯ರ ಭಾನುವಾರ, ಮೇ ೨೦ರ ಸೋಮವಾರ ಶ್ರೀ ವೀರಭದ್ರಸ್ವಾಮಿ ವಿಶೇಷ ಪೂಜೆ, ಅಲಂಕಾರಗಳನ್ನು ನೆರವೇರಿಸಲಾಗುವುದು. ಮೇ ೨೧ರ ಮಂಗಳವಾರ ಬೆಳಗಿನ ಜಾವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಪುರಂತರ ವೀರನಾಟ್ಯದೊಂದಿಗೆ ಅಗ್ನಿಕುಂಡ ಕಾರ್ಯಕ್ರಮವಿರುತ್ತದೆ. ಮೇ ೨೨ರ ಬುಧವಾರ ಶ್ರೀ ವೀರಭದ್ರಸ್ವಾಮಿ ದೊಡ್ಡ ರಥೋತ್ಸವ ಜರುಗಲಿದೆ, ಅಂದು ಶ್ರೀಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ದೇವಸ್ಥಾನದ ಆವರಣದಲ್ಲಿ ಮಂಗಳವಾದ್ಯಗಳೊಂದಿಗೆ ಪ್ರದಕ್ಷಣೆ ಹಾಕಿ ದೊಡ್ಡ ರಥೋತ್ಸವದಲ್ಲಿ ಸ್ವಾಮಿಯ ಮೂರ್ತಿ ಪ್ರತಿಷ್ಠಾಪಿಸಲಾಗುವುದು. ನಂತರ ಮುಕ್ತಿಬಾವುಟವನ್ನು ಹರಾಜು ಮಾಡಲಾಗುವುದು. ಮೇ ೨೩ರ ಗುರುವಾರ ಕಡುಬಿನ ಕಾಳಗ ನಡೆಯಲಿದ್ದು, ಮೇ ೨೪ ಶುಕ್ರವಾರ ಕಂಕಣವಿಸರ್ಜನೆಯೊಂದಿಗೆ ಜಾತ್ರಾ ಮಹೋತ್ಸವ ಮುಕ್ತಾಯಗೊಳ್ಳುವುದು ಎಂದು ತಿಳಿಸಿದ್ದಾರೆ.ಒಂದು ವಾರಗಳ ಕಾಲ ನಡೆಯಲಿರುವ ಉಚ್ಚಂಗಿಯಲ್ಲಮ್ಮ ಜಾತ್ರಾ ಮಹೋತ್ಸವ

ಚಿತ್ರದುರ್ಗ: ನಗರದ ಶಕ್ತಿ ದೇವತೆ, ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಿಯವರ ಜಾತ್ರಾ ಮಹೋತ್ಸವಕ್ಕೆ ದೇವಿಗೆ ಕಂಕಣಧಾರಣೆಯೊಂದಿಗೆ ಶನಿವಾರ ಚಾಲನೆ ದೊರೆಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಗಿನಜಾವ ದೇವಿಯ ಮೂರ್ತಿಗೆ ನಾನಾ ಅಭಿಷೇಕ ನೆರವೇರಿಸಿದ ಬಳಿಕ ಕಂಕಣಧಾರಣೆ, ಮದುವಣಗಿತ್ತಿ ಶಾಸ್ತ್ರ ಸೇರಿದಂತೆ ಮತ್ತಿತರ ಧಾರ್ಮಿಕ ಕಾರ್ಯಗಳನ್ನು ನಡೆಸಲಾಯಿತು.

ಈ ವೇಳೆ ನೆರೆದಿದ್ದ ಭಕ್ತರು ಉದೋ ಉದೋ ಎಂಬ ಉದ್ಘಾರ ಘೋಷಗಳನ್ನು ಮೊಳಗಿಸಿದರು. ಗರ್ಭಗುಡಿ ಮೂರ್ತಿಯ ಮೇಲೆ ನೂತನ ಚಿನ್ನ ಲೇಪಿತ ಬೆಳ್ಳಿಯ ಮುಖಪದ್ಮ ಪ್ರತಿಷ್ಠಾಪಿಸಿ, ಅಲ್ಲದೇ ದೇವಿಯ ತಲೆಯ ಮೇಲಿನ ಕಿರೀಟ, ಕೈಯಲ್ಲಿ ಬೆಳ್ಳಿ ಕತ್ತಿ, ಢಮರುಘ ಮತ್ತಿತರ ನೂತನ ಬೆಳ್ಳಿಯ ಆಭರಣಗಳನ್ನು ತೊಡಿಸಲಾಗಿದ್ದು ವಿಶೇಷ ಆಕರ್ಷಣೆಯಾಗಿತ್ತು.ನಿಂಬೆಹಣ್ಣಿನ ಹಾರ, ದ್ರಾಕ್ಷಿ ಸೇರಿದಂತೆ ಮತ್ತಿತರ ಹಣ್ಣುಗಳಿಂದ ಸಿಂಗಾರ ಮಾಡಲಾಗಿತ್ತು. ಮಹಾಮಂಗಳಾರತಿ ನೆರವೇರಿಸಿದ ಬಳಿಕ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.

ಕೆಲ ಭಕ್ತರು ಮನೆಯಿಂದಲೇ ಕೋಸಂಬರಿ, ಪಾನಕ ತಯಾರಿಸಿಕೊಂಡು ಬಂದಿದ್ದು ಮಹಾಮಂಗಳಾರತಿ ಬಳಿಕ ಭಕ್ತರಿಗೆ ವಿತರಿಸಲಾಯಿತು. ರಾತ್ರಿ ಸುಮಾರು 8 ಗಂಟೆಗೆ ದೇವಿಯ ಉತ್ಸವ ಮೂರ್ತಿಯನ್ನು ಬುರುಜಿನಹಟ್ಟಿ ಭಕ್ತರು ವಿಶೇಷ ಪುಷ್ಪಾಲಂಕಾರದೊಂದಿಗೆ ಸಿಂಹವಾಹಿನಿ ಮೂಲಕ ಸುಸಜ್ಜಿತ ಉಚ್ಛಾಯದಲ್ಲಿ ಪ್ರತಿಷ್ಠಾಪಿಸಿ, ನಗರದ ಬುರುಜನಹಟ್ಟಿ ಸೇರಿದಂತೆ ಮತ್ತಿತರ ಬಡಾವಣೆಗಳ ಕೆಲ ಭಕ್ತರ ಮನೆಗಳಲ್ಲಿ ದೇವಿಗೆ ಪೂಜೆ ಸಲ್ಲಿಸಲಾಯಿತು.