ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ವೈದ್ಯರು ರೋಗಿಗಳ ಕಾಯಿಲೆಗಳನ್ನು ಸೂಚಿಸಿ ಚಿಕಿತ್ಸೆಗೆ ಸೂಚಿಸಿದರೇ ದಾದಿಯರು ಅವರ ಆರೋಗ್ಯವನ್ನು ರಕ್ಷಣೆಯನ್ನು ಮಾಡುವ ನಿಟ್ಟಿನಲ್ಲಿ ಉತ್ತಮವಾಗಿ ಶ್ರಮಿಸುತ್ತಾರೆ. ಇವರ ಸೇವಾ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಭಾರತಿ ಹೇಳಿದರು.ನಗರದ ಅನಂತ ಸದ್ವಿದ್ಯ ನರ್ಸಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಹಳೇ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಮತ್ತು ತಂಬಾಕು ನಿರ್ಮೂಲನಾ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನರ್ಸಿಂಗ್ ವಿದ್ಯಾಭ್ಯಾಸವು ಒಂದು ಸೇವಾ ಕಾರ್ಯವಾಗಿದ್ದು ಇಲ್ಲಿ ಶ್ರಮಿಸುವ ಪ್ರತಿಯೊಬ್ಬರೂ ತಾಯಿಯ ಹೃದಯವನ್ನು ಹೊಂದಿರುತ್ತಾರೆ. ಅಂತಹವರು ಮಾತ್ರ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಪ್ರತಿ ಹಂತದಲ್ಲೂ ಧೈರ್ಯ ತುಂಬಿ ರೋಗಿಗಳು ಆರೋಗ್ಯವನ್ನು ಹೊಂದಲು ಸರಿಯಾದ ಸಮಯಕ್ಕೆ ಔಷಧೋಪಚಾರ ಮಾಡುವಲ್ಲಿ ಗಮನಹರಿಸುವವರು ದಾದಿಯರು ಎಂದರು.
ನರ್ಸಿಂಗ್ ಮಾಡುವ ಜತೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಮುಖ್ಯವಾಗಿ ರೋಗಿಗಳಿಗೆ ಸಾಂತ್ವನ ಹೇಳುವ, ಭರವಸೆ ಮತ್ತು ದುರ್ಬಲರಿಗೆ ಧೈರ್ಯ ಹೇಳುವ ಕಾರ್ಯವನ್ನು ಮಾಡಿದರೇ ರೋಗಿಯು ಬೇಗ ಗುಣಮುಖರಾಗಲಿದ್ದಾರೆ ಎಂದರು.ಜನಸಂಖ್ಯೆ ಹೆಚ್ಚಿರುವ ನಮ್ಮ ದೇಶದಲ್ಲಿ ನರ್ಸಿಂಗ್ ವಿದ್ಯಾಭ್ಯಾಸದೆಡೆ ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯದಲ್ಲಿ ಆಸಕ್ತಿ ಹೆಚ್ಚುತ್ತಿದೆ. ಕೊರೋನಾ ಸಂದರ್ಭದಲ್ಲಿ ದಾದಿಯರ ಸೇವೆಯನ್ನು ಇಡೀ ವಿಶ್ವವೇ ಮೆಚ್ಚುವಂತ ಕಾರ್ಯವನ್ನು ಮಾಡಿದ್ದಾರೆ ಎಂದರು.ಜಿಲ್ಲಾ ತಂಬಾಕು ನಿಯಂತ್ರಣಾ ಕೋಶಾಧಿಕಾರಿ ವಿಮಲ ಪಿ. ಮಾತನಾಡಿ, ಯುವ ಸಮುದಾಯ ಇತ್ತೀಚಿನ ದಿನಗಳಲ್ಲಿ ತಂಬಾಕು ಸೇವನೆಯತ್ತ ಆಕರ್ಷಣೆಯಾಗಿರುವುದು ಅಪಾಯಕಾರಿ. ಇದರಿಂದ ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ಬಲಿಯಾಗುವ ಮೂಲಕ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೇ ತಂಬಾಕು ಹೃದಯ, ಯಕೃತ್ ಮತ್ತು ಶ್ವಾಸಕೋಶಗಳ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದರು.ಅನಂತ ನರ್ಸಿಂಗ್ ಕಾಲೇಜಿನ ಛೇರ‍್ಮನ್ ಆರ್. ಅನಂತ್‌ಕುಮಾರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಾಷ, ಶಾಲಾ ಸಿಬ್ಬಂದಿಯಾದ ಶಾರದ ಎಸ್. ಬನ್ಯಾಳ್, ರವಿಶಂಕರ್, ಶೀಲಾ, ವಾಣಿಶ್ರೀ ಸೇರಿದಂತೆ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.ಫೊಟೋ ಶೀರ್ಷಿಕೆ: ಅರಸೀಕೆರೆ: ಅನಂತ ಸದ್ವಿದ್ಯ ನರ್ಸಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಹಳೇ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.