ಕೊಯ್ಲು ಅವಧಿಯಲ್ಲಿ ಕಾಫಿ ಫಸಲಿಗೆ ಕಾಯಿಕೊರಕ ಕೀಟ ಭಾದೆ

| Published : Feb 10 2024, 01:49 AM IST

ಸಾರಾಂಶ

ಕೊಡಗಿನಲ್ಲಿ ಕಾಯಿಕೊರಕ (ಬರ‍್ರಿ ಬೋರರ್) ಕೀಟದ ಹಾವಳಿ ತೀವ್ರವಾಗಿದ್ದು ಕಾಫಿ ಬೀಜದ ಗುಣಮಟ್ಟದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಬೆಳೆಯ ಇಳುವರಿ ಕುಂಠಿತವಾಗಿದೆ. ಗೋಣಿಕೊಪ್ಪ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ವಿಭಾಗದ ವಿಜ್ಞಾನಿ ಡಾ.ವೀರೇಂದ್ರ ಕುಮಾರ್ ಕೆ.ವಿ ಈ ಕೀಟದ ಸಮಗ್ರ ಹತೋಟಿ ಮಾಹಿತಿ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ ಜಿಲ್ಲೆಯಲ್ಲಿ ಕಾಫಿ ಕೊಯ್ಲು ಕಾರ್ಯ ಭರದಿಂದ ಸಾಗಿದೆ. ಆದರೆ ಈ ಅವಧಿಯಲ್ಲೇ ಕಾಯಿಕೊರಕ (ಬರ‍್ರಿ ಬೋರರ್) ಕೀಟದ ಹಾವಳಿ ತೀವ್ರವಾಗಿದ್ದು ಕಾಫಿ ಬೀಜದ ಗುಣಮಟ್ಟದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಬೆಳೆಯ ಇಳುವರಿ ಕುಂಠಿತವಾಗಿದೆ. ಗೋಣಿಕೊಪ್ಪ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ವಿಭಾಗದ ವಿಜ್ಞಾನಿ ಡಾ.ವೀರೇಂದ್ರ ಕುಮಾರ್ ಕೆ.ವಿ ಈ ಕೀಟದ ಸಮಗ್ರ ಹತೋಟಿ ಮಾಹಿತಿ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಫಿ ಬೆಳೆಗೆ ಕಾಯಿಕೊರಕದ (ಬರ‍್ರಿ ಬೋರರ್) ಹಾವಳಿ ತೀವ್ರಗತಿಯಲ್ಲಿ ಹರಡಿದ್ದು ಮುಂದಿನ ಸಾಲಿನ ಫಸಲು ಮತ್ತು ಕಾಫಿಯ ಗುಣಮಟ್ಟಕ್ಕೆ ತೀವ್ರ ಹಾನಿಯಾಗುವ ಸಾಧ್ಯತೆ ಇರುವುದರಿಂದ ಈ ಕೀಟದ ಬಾಧೆ ತಡೆಗಟ್ಟಲು ಸೂಕ್ತ ನಿಯಂತ್ರಣ ಕ್ರಮಗಳನ್ನು ಸಕಾಲದಲ್ಲಿ ಅನುಸರಿಸಬೇಕಿದೆ.

ಕೀಟ ಬಾಧೆ ಲಕ್ಷಣ:

ಈ ಕೀಟದ ಬಾಧೆಗೆ ಬಲಿಯುವ ಹಾಗೂ ಬಲಿತ ಕಾಯಿಗಳು ಹಾನಿಗೆ ತುತ್ತಾಗುತ್ತವೆ. ಪ್ರಾರಂಭದಲ್ಲಿ ಕೀಟ ಬಲಿಯುವ ಹಾಗೂ ಬಲಿತ ಕಾಯಿಗಳ ಮೂಲಕ ಒಳಸೇರುತ್ತದೆ. ಇದರಿಂದ ಬಾಧೆಗೂಳಗಾದ ಕಾಫಿ ಕಾಯಿಗಳ ಮುಂಭಾಗದಲ್ಲಿ ಕೊರೆದಿರುವ ರಂಧ್ರ ಕಾಣಿಸುತ್ತದೆ. ನಂತರ ಕಾಯಿಯ ಒಳಭಾಗಕ್ಕೆ ಹೋಗಿ ಒಳಗಿನ ಸಾರ ತಿಂದು ಹಾಳುಮಾಡುತ್ತದೆ.

ಕೀಟಗಳು ಎಳೆಯ ಕಾಯಿಯೊಳಗೆ ಸಂತಾನಾಭಿವೃದ್ದಿ ಮಾಡಲಾಗದಿದ್ದರೂ ಸಹ ಇದರ ಬಾಧೆಗೆ ತುತ್ತಾದ ಕಾಯಿಗಳು ಗಾಯದ ಪರಿಣಾಮವಾಗಿ ಅಕಾಲದಲ್ಲಿ ಉದುರುತ್ತವೆ. ಬಲಿತ ಕಾಯಿಯೊಳಗಿನ ಗಟ್ಟಿಗೂಂಡ ಬೀಜದಳದಲ್ಲಿ ಮಾತ್ರ ಇದರ ಸಂತಾನೋತ್ಪತ್ತಿ ಕಾರ್ಯ ನಡೆಯುತ್ತದೆ. ಇದು ಗಿಡದಲ್ಲಿ ಅತಿಯಾಗಿ ಹಣ್ಣಾಗಿರುವ ಮತ್ತು ನೆಲಕ್ಕೆ ಉದುರಿದ ಹಣ್ಣುಗಳಲ್ಲಿಯೂ ಸಹ ವಂಶಾಭಿವೃದ್ದಿ ಮುಂದುವರಿಸುತ್ತದೆ.

ಕೆಲವು ಸಂದರ್ಭದಲ್ಲಿ ಈ ಕೀಟದ ಬಾಧೆ ತೀವ್ರವಾಗಿದ್ದರೆ ಶೇ. 30- 80 ರಷ್ಟು ಕಾಯಿಗಳು ಕೂಡ ಹಾನಿಗೆ ತುತ್ತಾಗುತ್ತವೆ. ಒಮ್ಮೆ ಕಾಫಿ ತೋಟಗಳಿಗೆ ಇದು ದಾಳಿ ಕೂಟ್ಟಿತು ಎಂದಾದರೆ ನಂತರ ಆ ತೋಟವನ್ನು ಸದಾ ಪೀಡಿಸುತ್ತಲೆ ಇರುತ್ತದೆ. ಈ ಕೀಟದ ಬಾಧೆಗೆ ತುತ್ತಾದ ಕಾಫಿ ತನ್ನ ಗುಣಮಟ್ಟ ಕಳೆದುಕೂಂಡು ಬೆಳೆಗಾರರಿಗೆ ಗಣನೀಯ ಪ್ರಮಾಣದಲ್ಲಿ ನಷ್ಟವನ್ನುಂಟು ಮಾಡುತ್ತದೆ.

ಕಾಯಿಕೊರಕ ಜೀವನಚರಿತ್ರೆ:

ಕಾಫಿ ಕಾಯಿಕೊರಕ ಕೀಟ ಕಪ್ಪು ಬಣ್ಣದ ಚಿಕ್ಕ ದುಂಬಿಯಾಗಿದ್ದು ಸುಮಾರು 1.5 ಮೀ.ಮೀ. ಉದ್ದವಿರುತ್ತದೆ. ಹೆಣ್ಣು ಕೀಟವು ಹಸಿರು ಕಾಯಿ ಮತ್ತು ಚೆನ್ನಾಗಿ ಬಲಿತ ಹಣ್ಣುಗಳ ನಾಭಿಯ (ಮುಂಭಾಗ) ಭಾಗದಿಂದ ರಂಧ್ರ ಕೊರೆಯುತ್ತದೆ. ನಂತರ ಕಾಫಿಯ ಬೀಜದೊಳಗೆ ಸುರಂಗ ಕೊರೆದು ಸರಾಸರಿ 40-50 ಮೊಟ್ಟೆಗಳನ್ನೀಡುತ್ತದೆ. 5-9 ದಿನಗಳಲ್ಲಿ ಮೊಟ್ಟೆಯೊಡೆದು ಮರಿ ಹುಳುಗಳು ಹೊರಬರುತ್ತವೆ. ಹೊರಬಂದ ಮರಿಗಳು ಬೀಜವನ್ನು ತಿನ್ನುತ್ತಾ ಸುರಂಗವನ್ನು ಕೊರೆಯುತ್ತಿರುತ್ತವೆ. ಮೊಟ್ಟೆಯಿಂದ ಪ್ರೌಢ ಕೀಟಾವಸ್ಥೆ ತಲುಪಲು ಸುಮಾರು 25-35 ದಿನಗಳು ಬೇಕಾಗುತ್ತದೆ.

ಹೆಣ್ಣು ಮತ್ತು ಗಂಡು ಕೀಟಗಳ ಸಮಾಗಮ ಬೀಜದ ಒಳಗೆ ನಡೆಯುತ್ತದೆ. ಗರ್ಭಧರಿಸಿದ ಹೆಣ್ಣು ಕೀಟವು ತನ್ನ ಮೂಲ ಸುರಂಗವನ್ನು ತೊರೆದು ಹೊಸ ಕಾಫಿ ಹಣ್ಣಿನೊಳಗೆ ಸೇರಿ ಮೊಟ್ಟೆಗಳನ್ನಿಡುತ್ತದೆ. ಗಂಡು ಕೀಟಕ್ಕೆ ಹಾರುವ ಶಕ್ತಿ ಇಲ್ಲದ ಕಾರಣ ತಾನು ವಾಸಿಸುತ್ತೀರುವ ಸುರಂಗ ಬದಲಿಸುವುದಿಲ್ಲ. ಹೆಣ್ಣು ಕೀಟದ ಸರಾಸರಿ ಆಯಸ್ಸು 156 ದಿನಗಳು ಇರುವುದರಿಂದ ನಮ್ಮ ದೇಶದ ಹವಾಮಾನ ಗುಣಗಳನ್ನಾದರಿಸಿ ಒಂದು ಸಾಲಿನ ಫಸಲಿನಿಂದ ಮುಂದಿನ ಫಸಲನ್ನು ತಲುಪಲು ಸಾಧ್ಯವಾಗುತ್ತದೆ.

ಸಮಗ್ರ ಹತೋಟಿ ಕ್ರಮಗಳು

ಸೂಕ್ತ ಬೇಸಾಯ ಪದ್ಧತಿಗಳು, ಜೈವಿಕ ಮತ್ತು ರಾಸಾಯನಿಕ ಹತೋಟಿ ಕ್ರಮಗಳು ಸೇರಿದಂತೆ ಸಮಗ್ರ ನಿರ್ವಹಣಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಅಳವಡಿಸುವಿಕೆಯಿಂದ ಈ ಕೀಟದ ಬಾಧೆ ಕಡಿಮೆಗೊಳಿಸಲು ಸಾಧ್ಯ.-ಗಿಡಗಳಲ್ಲಿರುವ ಅಕಾಲಿಕ ಕಾಯಿ ಮತ್ತು ಹಿಂದಿನ ವರ್ಷ ಕೊಯ್ಯದೆ ಉಳಿದುಕೂಂಡಿರುವ ಹಣ್ಣುಗಳನ್ನು ಪೂರ್ತಿಯಾಗಿ ಕಿತ್ತು ನಾಶಪಡಿಸಬೇಕು, ಏಕೆಂದರೆ ಇವುಗಳಲ್ಲಿರುವ ಕೀಟದ ಸಂತತಿ ಮುಂದಿನ ಫಸಲಿಗೆ ಹರಡಲು ಕಾರಣವಾಗುತ್ತದೆ.-ಕಾಫಿ ಕೊಯ್ಲು ಮುಗಿದ ನಂತರ ಗಿಡಗಳಲ್ಲಿ ಉಳಿದಿರುವ ಮತ್ತು ನೆಲದಲ್ಲಿ ಬಿದ್ದ ಹಣ್ಣುಗಳನ್ನು ಸಂಪೂರ್ಣವಾಗಿ ಆಯ್ದು ಶೇಖರಿಸಬೇಕು.

-ಹಣ್ಣುಗಳನ್ನು ಕೊಯ್ಲು ಮಾಡುವಾಗ ನೆಲದ ಮೇಲೆ ಕೊಯ್ಲಿನ ಚಾಫೆ (ಪಿಕ್ಕಿಂಗ್ ಮ್ಯಾಟ್) ಅಥವಾ ಪಾಲಿಥೀನ್ ಹಾಳೆಗಳನ್ನು ಹರಡಿ ಹಣ್ಣುಗಳು ನೆಲಕ್ಕೆ ಬೀಳದಂತೆ ತಡೆಯುವುದು ಮತ್ತು ಗಿಡಗಳಲ್ಲಿ ಯಾವುದೇ ಹಣ್ಣುನ್ನು ಉಳಿಸದೆ ಪೂರ್ತಿಯಾಗಿ ಕೊಯ್ಲು ಮಾಡಬೇಕು.

-ಹಾನಿಗೊಳಗಾದ ಕಾಫಿ ಹಣ್ಣುಗಳನ್ನು ಕುದಿಯುವ ನೀರಿನಲ್ಲಿ ಒಂದರಿಂದ ಎರಡು ನಿಮಿಷಗಳವರೆಗೆ ಅದ್ದಿ ತೆಗೆದು ಒಣಗಿಸುವುದು ಅವಶ್ಯಕ.

-ಹೆಚ್ಚು ಹಾನಿಗೊಳಗಾದ ಹಣ್ಣುಗಳನ್ನು ಶೇಖರಿಸಿ ಬೆಂಕಿಯಲ್ಲಿ ಸುಟ್ಟು ನಾಶಗೊಳಿಸುವುದು ಅಥವಾ 20 ಇಂಚು ಆಳದ ಗುಂಡಿಯನ್ನು ತೆಗೆದು ಅದರಲ್ಲಿ ಬಾಧೆಗೊಳಗಾದ ಹಣ್ಣುಗಳನ್ನು ಹೂಳುವುದು ಸೂಕ್ತ.

-ಬಾಧೆಗೊಳಗಾದ ಕಾಫಿಯನ್ನು ಪ್ರತ್ಯೇಕವಾಗಿ ಶೇಖರಿಸಬೇಕು ಮತ್ತು ಆರೋಗ್ಯವಂತ ಕಾಯಿಗಳ ಜೂತೆ ಮಿಶ್ರಣ ಮಾಡಬಾರದು.

-ಕಾಫಿ ತೋಟದಲ್ಲಿ ಸೂಕ್ತವಾದ ನೆರಳನ್ನು ಒದಗಿಸಬೇಕು ಮತ್ತು ಸೂಕ್ತ ರೀತಿಯಲ್ಲಿ ಶಿಫಾರಸ್ಸು ಮಾಡಿದ ಪ್ರಕಾರ ಗಿಡಗಳ ಗೆಲ್ಲುಗಳನ್ನು ಕತ್ತರಿಸಬೇಕು. ಇದರಿಂದ ಕಾಯಿಕೊರಕದ ಬಾಧೆಗೊಳಗಾದ ಗೆಲ್ಲುಗಳಲ್ಲಿರುವ ಕಾಯಿಗಳು ನಾಶವಾಗುವುದರ ಜೊತೆಗೆ ಗಿಡಗಳ ಆರೋಗ್ಯವನ್ನು ಕಾಪಾಡಬಹುದು.

-ಕೊಯ್ದ ಕಾಫಿಯನ್ನು ಒಣಗಿಸುವಾಗ ಸೂಕ್ತ ತೇವಾಂಶವಿರುವ ಹಾಗೆ ನೋಡಿಕೊಳ್ಳುವುದು.

ಅರೇಬಿಕಾ/ರೋಬಸ್ಟ ಪಾರ್ಚ್ಂಟ್ಶೇ. 10 ರಷ್ಟು ತೇವಾಂಶ, ಅರೇಬಿಕಾ ಶೇ. 10.5 ರಷ್ಟು ತೇವಾಂಶ, ರೊಬಸ್ಟಾ ಶೇ.11ರಷ್ಟು ತೇವಾಶ ಇರಬೇಕು.

-ಕಾಫಿ ಕೊಯ್ಲಿನ ಸಮಯದಲ್ಲಿ ಮತ್ತು ನಂತರದ ದಿನಗಳಲ್ಲಿ ಕಾಯಿಕೊರಕ ಆಕರ್ಷಿಸಲು ಎಕರೆಗೆ 20 ಬ್ರೋಕ ಎಂಬ ಲಿಂಗಾಕರ್ಷಕ ಬಲೆಗಳನ್ನು ಅಳವಡಿಸಬೇಕು. -ಬೆವೇರಿಯಾ ಬಾಸ್ಸಿಯಾನ ಎಂಬ ರೋಗಕಾರಕ ಶಿಲೀಂಧ್ರವನ್ನು ಜುಲೈ- ಅಕ್ಟೋಬರ್ ತಿಂಗಳ ಅವಧಿಯಲ್ಲಿ ಕಾಯಿಕೊರಕದ ಹತೋಟಿಗೆ 1.5 ಕೆ.ಜಿಯನ್ನು 200 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಕಾಯಿಗಳ ಮೇಲೆ ಸಿಂಪಡಿಸಬೇಕು.

-ಹಾನಿಗೊಳಗಾದ ತೋಟದಿಂದ ಬೇರೆಡೆಗೆ ಕಾಫಿ ಸಾಗಿಸಬೇಕಾದ ಸಂಧರ್ಭದಲ್ಲಿ ಕೀಟದಿಂದ ಸಂಪೂರ್ಣ ಮುಕ್ತಗೊಳಿಸಿದ ನಂತರ ಮಾತ್ರ ಸಾಗಿಸಬೇಕು. ಇದು ಅತ್ಯಂತ ಅವಶ್ಯಕವಾಗಿದೆ.

-ಕಾಫಿಯನ್ನು ಶೇಖರಣೆ ಮಾಡಲು ಸಾಧ್ಯವಾದಷ್ಟು ಮಟ್ಟಿಗೆ ಹೊಸ ಗೋಣಿ ಚೀಲಗಳನ್ನು ಉಪಯೋಗಿಸುವುದು ಸೂಕ್ತ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ದೂರವಾಣಿ: 08274-247274 ಅನ್ನು ಸಂಪರ್ಕಿಸಬಹುದಾಗಿದೆ.