ಕ್ಷಯ ದೂರವಿಡಲು ಪೌಷ್ಟಿಕ ಆಹಾರ, ಸ್ವಚ್ಛತೆ ಅಗತ್ಯ

| Published : Mar 26 2024, 01:03 AM IST

ಸಾರಾಂಶ

ಕ್ಷಯ ರೋಗ ಹೆಚ್ಚಾಗಿ ಬಡವರಲ್ಲಿ ಕಂಡು ಬರುತ್ತದೆ. ಶ್ರೀಮಂತರಲ್ಲಿ ಬಹಳ ಅಪರೂಪ. ಅಲ್ಲದೆ ಕ್ಷಯ ಇದೆ ಎಂದು ಗೊತ್ತಾದ ಬಳಿಕವೂ ರೋಗ ನಿಯಂತ್ರಕ್ಕೆ ಬಾರದಿರಲು ಹಣದ ಕೊರತೆಯೊಂದೆ ಕಾರಣವಲ್ಲ. ಅವರಲ್ಲಿ ಪೌಷ್ಟಿಕಾಂಶದ ಕೊರತೆ ಮುಖ್ಯ ಕಾರಣ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕ್ಷಯರೋಗ ಎಂಬುದು ದೈಹಿಕ ಕಾಯಿಲೆ ಮಾತ್ರವಲ್ಲ. ಅದು ಸಾಮಾಜಿಕ ಮತ್ತು ಆರ್ಥಿಕವಾಹಿ ಹಾನಿ ಉಂಟುಮಾಡುವ ಕಾಯಿಲೆಯೂ ಹೌದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್ ತಿಳಿಸಿದರು. ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರ ವತಿಯಿಂದ ಸೋಮವಾರ ನಡೆದ ಜಿಲ್ಲಾ ಮಟ್ಟದ ವಿಶ್ವ ಕ್ಷಯ ರೋಗ ನಿಯಂತ್ರಣ ದಿನಾಚರಣೆ ಅಂಗವಾಗಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಬೈಕ್ ರ್‍ಯಾಲಿ ಹಾಗೂ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

ಬಡವರಲ್ಲೇ ಕ್ಷಯ ರೋಗ ಹೆಚ್ಚು

ಕ್ಷಯ ರೋಗ ಹೆಚ್ಚಾಗಿ ಬಡವರಲ್ಲಿ ಕಂಡು ಬರುತ್ತದೆ. ಶ್ರೀಮಂತರಲ್ಲಿ ಬಹಳ ಅಪರೂಪ. ಅಲ್ಲದೆ ಕ್ಷಯ ಇದೆ ಎಂದು ಗೊತ್ತಾದ ಬಳಿಕವೂ ರೋಗ ನಿಯಂತ್ರಕ್ಕೆ ಬಾರದಿರಲು ಹಣದ ಕೊರತೆಯೊಂದೆ ಕಾರಣವಲ್ಲ. ಅವರಲ್ಲಿ ಪೌಷ್ಟಿಕಾಂಶದ ಕೊರತೆಯೂ ಇರುತ್ತದೆ. ಶ್ರೀಮಂತರು ಸರಿಯಾದ ಚಿಕಿತ್ಸೆ ಪಡೆದು ಗುಣಮುಖರಾಗುತ್ತಾರೆ. ಇದು ನಮ್ಮ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯನ್ನು ತೋರಿಸುತ್ತದೆ ಎಂದು ಹೇಳಿದರು.ಜಪಾನ್ ನಂತಹ ದೇಶಗಳಲ್ಲಿ ಈ ರೀತಿ ಸಾಂಕ್ರಾಮಿಕ ರೋಗಗಳು ಇಲ್ಲವೇ ಇಲ್ಲ. ಅಲ್ಲಿನ ಆಸ್ಪತ್ರೆಯಲ್ಲಿ ಅವರ ಕಾಯ್ದೆ ಪ್ರಕಾರ ಕಡ್ಡಾಯವಾಗಿರುವ ಕಾರಣಕ್ಕಾಗಿಯಷ್ಟೆ ಒಂದು ಬೆಡ್ ಅನ್ನು ಸಾಂಕ್ರಾಮಿಕ ರೋಗಗಳಿಗಾಗಿ ಮೀಸಲಿಟ್ಟಿದ್ದನ್ನು ನೋಡಬಹುದು. ಆದರೆ ನಮ್ಮಲ್ಲಿ ಕ್ಷಯರೋಗ ಸೇರಿದಂತೆ ಸಾಂಕ್ರಾಮಿಕ ಕಾಯಿಲೆಗಳೇ ಹೆಚ್ಚಾಗಿವೆ ಎಂದರು. ಕ್ಷಯ ನಿಯಂತ್ರಣ ಸವಾಲು

ಸಂಪೂರ್ಣ ಮತ್ತು ಸಮಗ್ರ ಚಿಕಿತ್ಸೆಯಿಲ್ಲದಿದ್ದರೆ ಕ್ಷಯ ನಿಯಂತ್ರಣ ಸವಾಲಾಗಲಿದೆ. ಕ್ಷಯ ರೋಗ ನಿಯಂತ್ರಣಕ್ಕೆ ಬಹುದಷ್ಟಿಕೋನಗಳ ಯೋಜನೆ ರೂಪಿಸುವಿಕೆ ಹಾಗೂ ಅನುಷ್ಠಾನದ ಅಗತ್ಯವಿದೆ. ಶುದ್ಧ ನೀರು, ಶೌಚಾಲಯ, ಒಳಚರಂಡಿ ವ್ಯವಸ್ಥೆ, ಸ್ವಚ್ಛ ವಾತಾವರಣ ಎಲ್ಲ ಸಾಂಕ್ರಾಮಿಕ ರೋಗಗಳನ್ನು ದೂರ ಇಡಲು ಸಾಧ್ಯ. ಡಾಕ್ಟರ್ ಮತ್ತು ರೋಗಿಯ ಜೊತೆಗೆ ಎಲ್ಲರ ಸಹಕಾರವಿದ್ದರೆ ಮಾತ್ರ ಕ್ಷಯ ನಿಯಂತ್ರಣ ಸಾಧ್ಯ ಎಂದು ಹೇಳಿದರು.ಕ್ಷಯ ಭಾರತದಲ್ಲೇ ಹೆಚ್ಚು

ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಉಮಾ ಮಾತನಾಡಿ,ವಿಶ್ವದಲ್ಲಿ ಕಂಡು ಬರುವ ಕ್ಷಯರೋಗದ ಪ್ರಮಾಣದಲ್ಲಿ ಮೂರನೇ ಒಂದರಷ್ಟು ಭಾರತದಲ್ಲಿಯೇ ಇದೆ. ಟಿಬಿಯನ್ನು ಸೋಲಿಸಿ ದೇಶವನ್ನು ಗೆಲ್ಲಿಸಿ ಈ ವಾಕ್ಯದೊಡನೆ ವಿಶ್ವ ಕ್ಷಯರೋಗ ದಿನಾಚರಣೆಯ ಈ ವರ್ಷದ ಘೋಷಣೆಯು ‘ಹೌದು ನಾವು ಕ್ಷಯರೋಗವನ್ನ ಕೊನೆಗೊಳಿಸಬಹುದು’ ಎಂಬುದಾಗಿದೆ ಪ್ರತಿಯೊಬ್ಬರಿಗೂ ಇದರ ಜಾಗೃತಿಯನ್ನು ಮೂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕ್ಷಯರೋಗಕ್ಕೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ದೊರೆಯಲಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ಪ್ರಕಾಶ್,ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ, ಕೃಷ್ಣಪ್ರಸಾದ್, ನಗರಸಭೆ ಆಯುಕ್ತ ಎ.ಎಸ್. ಮಂಜುನಾಥ್, ಪರಿಸರ ಅಭಿಯಂತರಉಮಾಶಂಕರ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಮಂಜುಳಾ, ಜಿಲ್ಲಾಸ್ಪತ್ರೆ ವೈದ್ಯರಾದ ಡಾ. ವಿಜಯ, ಡಾ. ಜೀವನ್ ಪ್ರಕಾಶ್, ಡಾ. ಚಂದ್ರಶೇಖರ್,ಜಿಲ್ಲಾ ಹಿರಿಯ ಆರೋಗ್ಯ ನಿರೀಕ್ಷಕ ವೆಂಕಟರಸಪ್ಪ, ತಾಲೂಕ್ ಅರೋಗ್ಯ ನಿರೀಕ್ಷಕ ನಾರಾಯಣಸ್ವಾಮಿ, ಇದ್ದರು.