ಸಾರಾಂಶ
ಬಳ್ಳಾರಿ: ರೈತರು, ಕೃಷಿ ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿ, ಯುವಜನರ ಧ್ವನಿಯಾಗಿ ಹೋರಾಟ ಕಟ್ಟುತ್ತಿರುವ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 19 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಎಸ್‌ಯುಸಿಐ ಪಕ್ಷ ಏಕಾಂಗಿಯಾಗಿ ಸ್ಪರ್ಧೆ ನಡೆಸುತ್ತಿದೆ. ದೇಶದ 19 ರಾಜ್ಯ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ 151 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ.ಚುನಾವಣೆಯಲ್ಲಿ ಕೇಂದ್ರದ ಎನ್‌ಡಿಎ ಸರ್ಕಾರದ ದುರಾಡಳಿತ ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡಲಾಗುವುದು. ಸ್ವಿಸ್ ಬ್ಯಾಂಕ್‌ನಿಂದ ಕಪ್ಪುಹಣ ಹಿಂದಕ್ಕೆ ತರುವ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ, ಬೆಲೆ ಏರಿಕೆ ನಿಯಂತ್ರಿಸುವ, ಬಡ ಹಾಗೂ ಮಧ್ಯಮ ವರ್ಗದ ಹಿತ ಕಾಯುವ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ರಾಜ್ಯದಲ್ಲಿ ನಿರೀಕ್ಷಿತ ಅಭಿವೃದ್ಧಿ ಕಾರ್ಯ ಕೈಗೊಳ್ಳದ ಕಾಂಗ್ರೆಸ್ ನೀತಿಗಳನ್ನು ಚುನಾವಣೆ ಪ್ರಚಾರ ವೇಳೆ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.ಪಕ್ಷ ಸ್ಪರ್ಧೆ ನಡೆಸದೇ ಇರುವ ಕ್ಷೇತ್ರಗಳಲ್ಲಿ ರಾಜ್ಯದ ಮೂರು ಜನವಿರೋಧಿ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಬಿಟ್ಟು ಬೇರೆ ಪ್ರಾಮಾಣಿಕ, ಹೋರಾಟಗಾರ ಅಭ್ಯರ್ಥಿಗಳಿಗೆ ಮತ ನೀಡಬೇಕೆಂದು ನಮ್ಮ ಪಕ್ಷ ಕರೆ ನೀಡುತ್ತದೆ ಎಂದು ತಿಳಿಸಿದರು.ಇದೇ ವೇಳೆ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ಮುಖಂಡರು ಬಿಡುಗಡೆಗೊಳಿಸಿದರು. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಲಕ್ಷ್ಮಣ ಜಡಗಣ್ಣನವರ್, ಬಾಗಲಕೋಟೆ (ಮಲ್ಲಿಕಾರ್ಜುನ ಎಚ್.ಟಿ.), ಬಿಜಾಪುರ (ನಾಗಜ್ಯೋತಿ), ಕಲಬುರಗಿ (ಎಸ್.ಎಂ. ಶರ್ಮ), ರಾಯಚೂರು (ರಾಮಲಿಂಗಪ್ಪ), ಕೊಪ್ಪಳ (ಶರಣು ಗಡ್ಡಿ), ಬಳ್ಳಾರಿ (ಎ.ದೇವದಾಸ್), ಹಾವೇರಿ (ಗಂಗಾಧರ ಬಡಿಗೇರ), ಧಾರವಾಡ (ಶರಣಬಸವ ಗೋನವಾರ), ಉತ್ತರ ಕನ್ನಡ (ಗಣಪತಿ ವಿ. ಹೆಗಡೆ), ದಾವಣಗೆರೆ (ತಿಪ್ಪೇಸ್ವಾಮಿ), ಚಿತ್ರದುರ್ಗ (ಸುಜಾತ), ತುಮಕೂರು (ಎಸ್.ಎನ್. ಸ್ವಾಮಿ), ಮೈಸೂರು (ಸುನಿಲ್ ಟಿ.ಆರ್.), ಚಾಮರಾಜನಗರ (ಸುಮಾ ಎಸ್.), ಬೆಂಗಳೂರು ಗ್ರಾಮಾಂತರ (ಹೇಮಾವತಿ ಕೆ.), ಬೆಂಗಳೂರು ಉತ್ತರ (ನಿರ್ಮಲ ಎಚ್.ಎಲ್.), ಬೆಂಗಳೂರು ಕೇಂದ್ರ (ಶಿವಪ್ರಕಾಶ್ ಎಚ್.ಪಿ.) ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಷಣ್ಮುಗಂ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.ಪಕ್ಷದ ಮುಖಂಡರಾದ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎ.ದೇವದಾಸ್, ಜಿಲ್ಲಾ ಸಮಿತಿಯ ಸದಸ್ಯರಾದ ಮಂಜುಳಾ ಎಂ.ಎನ್., ಡಿ.ನಾಗಲಕ್ಷ್ಮಿ, ಡಾ.ಪ್ರಮೋದ್ ಎನ್, ಎ.ಶಾಂತಾ, ಗೋವಿಂದ್, ನಾಗರತ್ನ ಸುದ್ದಿಗೋಷ್ಠಿಯಲ್ಲಿದ್ದರು.