ಬಹುಶಿಸ್ತೀಯ ಸಂಶೋಧನೆಗಳಿಗೆ ಆದ್ಯತೆ ನೀಡಿ

| Published : Mar 26 2024, 01:03 AM IST

ಸಾರಾಂಶ

ಸರಳವಾಗಿ, ಜನರಿಗೆ ಸುಲಭವಾಗಿ ಕೈಗೆಟಕುವ ರೀತಿಯಲ್ಲಿ ಸೌಲಭ್ಯಗಳು ಲಭಿಸುವಂತೆ ಮಾಡುವ ಬಹುಶಿಸ್ತೀಯ ಸಂಶೋಧನೆಗಳಿಗೆ ಹೆಚ್ಚಿನ ಬೇಡಿಕೆಯಿದೆ. ಆ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯಬೇಕು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಡಿ.ಕುಂಬಾರ ದಾವಣಗೆರೆಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ ಸರಳವಾಗಿ, ಜನರಿಗೆ ಸುಲಭವಾಗಿ ಕೈಗೆಟಕುವ ರೀತಿಯಲ್ಲಿ ಸೌಲಭ್ಯಗಳು ಲಭಿಸುವಂತೆ ಮಾಡುವ ಬಹುಶಿಸ್ತೀಯ ಸಂಶೋಧನೆಗಳಿಗೆ ಹೆಚ್ಚಿನ ಬೇಡಿಕೆಯಿದೆ. ಆ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯಬೇಕು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಡಿ.ಕುಂಬಾರ ಅಭಿಪ್ರಾಯಪಟ್ಟರು.

ದಾವಣಗೆರೆ ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಅಧ್ಯಯನ ವಿಭಾಗವು ನವದೆಹಲಿಯ ಐಸಿಎಸ್‌ಎಸ್‌ಆರ್ ಸಹಯೋಗದಲ್ಲಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಸಂಶೋಧನೆ ಮತ್ತು ದತ್ತಾಂಶ ವಿಶ್ಲೇಷಣೆ ಕಾರ್ಯಾಗಾರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇತ್ತೀಚಿನ ತಂತ್ರಜ್ಞಾನ ಮತ್ತು ತಂತ್ರಾಂಶಗಳು ಸಂಶೋಧನೆಯ ವಿಧಾನ ಮತ್ತು ಅಧ್ಯಯನ ಕ್ರಮವನ್ನು ಸುಲಭಗೊಳಿಸಿವೆ. ಅವುಗಳ ಪ್ರಯೋಜನ ಪಡೆದು ಗುಣಮಟ್ಟದ ಸಂಶೋಧನೆಗೆ ಆದ್ಯತೆ ನೀಡಬೇಕೇ ಹೊರತು, ಕೇವಲ ತಂತ್ರಜ್ಞಾನವನ್ನೇ ಅವಲಂಬಿಸಬಾರದು ಎಂದು ತಿಳಿಸಿದರು.

ಪದವಿಗಾಗಿ ಸಂಶೋಧನೆ ನಡೆಸಿದರೆ ಯಾವುದೇ ಪ್ರಯೋಜನವಿಲ್ಲ. ಗ್ರಾಮೀಣ ಪ್ರದೇಶದ ಜನರು, ಬೀದಿಬದಿಯ ವ್ಯಾಪಾರಿಗಳು, ದಿನಗೂಲಿ ಉದ್ಯೋಗಿಗಳು, ಕೃಷಿಕರು, ಕಾರ್ಮಿಕರು ಮೊದಲಾದ ಅಸಂಘಟಿತ ತಳಮಟ್ಟದ ಜನರ ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ಅಗತ್ಯವಿರುವ ಮಾರ್ಗದರ್ಶನಗಳು, ಯೋಜನೆಗಳನ್ನು ಆಧರಿಸಿದ ಸಂಶೋಧನೆಗಳು ನಡೆಯಬೇಕು ಎಂದು ಹೇಳಿದರು.

ವಾಣಿಜ್ಯ ಮತ್ತು ಆಡಳಿತ ನಿಕಾಯದ ಡೀನ್ ಪ್ರೊ. ಆರ್.ಶಶಿಧರ್ ಸಮಾರೋಪ ಭಾಷಣ ಮಾಡಿದರು. ಅತ್ಯಾಧುನಿಕ ತಂತ್ರಾಂಶಗಳು ಸಂಶೋಧನಾ ಕ್ರಮ, ದತ್ತಾಂಶ ಸಂಗ್ರಹಣೆ, ದತ್ತಾಂಶ ವಿಶ್ಲೇಷಣೆ ಹಾಗೂ ನಿರ್ವಹಣೆಗೆ ಹೆಚ್ಚು ಪ್ರಯೋಜನಕಾರಿಯಾಗಿವೆ. ಯಾವುದೇ ಕ್ಲಿಷ್ಟಕರ ಸಮಸ್ಯೆಗಳಿಗೂ ತಕ್ಷಣವೇ ಪರಿಹಾರ ಕಂಡುಕೊಳ್ಳುವ ಅವಕಾಶವನ್ನು ಕಲ್ಪಿಸಿವೆ. ಇಂಥ ತಂತ್ರಜ್ಞಾನ ಮತ್ತು ತಂತ್ರಾಂಶಗಳ ಬಳಕೆಯ ವಿಧಾನವನ್ನೂ ಸಂಶೋಧಕರು ಕಲಿತು, ತಮ್ಮ ಅಧ್ಯಯನ ಮತ್ತು ಸಂಶೋಧನೆಯಲ್ಲಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಶೋಧನೆಯಲ್ಲಿ ವೈಯಕ್ತಿಕ ಹಿತಾಸಕ್ತಿಗಿಂತ ಸಾಮುದಾಯಿಕ ಹಿತಕ್ಕೆ ಆದ್ಯತೆ ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಂಶೋಧನೆಯ ವ್ಯಾಪ್ತಿ ವಿಶಾಲವಾಗಿ ಹರಡಿದೆ. ತಂತ್ರಜ್ಞಾನ, ತಂತ್ರಾಂಶಗಳನ್ನು ಬಳಸಿಕೊಂಡು ಗುಣಮಟ್ಟದ ಸಂಶೋಧನೆಯ ಮೂಲಕ ಸಮಾಜ ಹಾಗೂ ದೇಶದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲು ಗಮನ ನೀಡಬೇಕಾಗಿದೆ. ವೃತ್ತಿ ಮತ್ತು ಸಂಶೋಧನಾ ಕೌಶಲ್ಯಗಳ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕುಲಸಚಿವ ಪ್ರೊ. ಯು.ಎಸ್. ಮಹಾಬಲೇಶ್ವರ, ಪ್ರೊ.ಸೆಲ್ವಿ, ಡಾ. ಡಿ.ಎಚ್. ಗಿರೀಶ ಉಪಸ್ಥಿತರಿದ್ದರು. ಕಲಾ ಮತ್ತು ಮಾನವಿಕ ಅಧ್ಯಯನ ನಿಕಾಯದ ಡೀನ್ ಪ್ರೊ. ಸುಚಿತ್ರಾ ಸ್ವಾಗತಿಸಿದರು. ಡಾ.ಸುಂದರಂ ವರದಿ ವಾಚಿಸಿದರು. ಕಾರ್ಯಾಗಾರದ ನಿರ್ದೇಶಕ ಹಾಗೂ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಹುಚ್ಚೇಗೌಡ ವಂದಿಸಿದರು.

- - - -25ಕೆಡಿವಿಜಿ31ಃ: ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಸಂಶೋಧನೆ ಮತ್ತು ದತ್ತಾಂಶ ವಿಶ್ಲೇಷಣೆ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಕುಲಪತಿ ಪ್ರೊ. ಬಿ.ಡಿ.ಕುಂಬಾರ ಮಾತನಾಡಿದರು.