ಸಾರಾಂಶ
ಕೊಪ್ಪಳ: ಲಿಂಗಾಯತ ಶಾಸಕರು, ಸಚಿವರು ಒಟ್ಟಾಗಿ ಕೇಂದ್ರದ ಮೇಲೆ ಒತ್ತಡ ಹೇರಿದರೇ ಓಬಿಸಿ ಸ್ಥಾನಮಾನ ಸಾಧ್ಯ ಎಂದು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀವಚನಾನಂದ ಸ್ವಾಮೀಜಿ ಹೇಳಿದರು.
ನಗರದ ಕುಷ್ಟಗಿ ರಸ್ತೆಯಲ್ಲಿರುವ ಪಂಚಮಸಾಲಿ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ವೀರಶೈವ ಪಂಚಮಸಾಲಿ ಸಂಘ ಬೆಂಗಳೂರು, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಿಂದ ಭಾನುವಾರ ಜರುಗಿದ ಜಿಲ್ಲಾ ಮಟ್ಟದ ಸಂಘಟನಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಪ್ರತಿಯೊಬ್ಬರು ಸಮಾಜದ ಹಕ್ಕಿಗಾಗಿ ಕಾನೂನಾತ್ಮಕವಾಗಿ ಶ್ರಮಿಸಬೇಕು. ಪ್ರತಿಯೊಬ್ಬರು ಕೈ ಜೋಡಿಸಿದಾಗ ಮೀಸಲಾತಿ ಸಾಧ್ಯ. ಯಾರನ್ನೂ ದೂರುವುದು ಬೇಡ, ನಮ್ಮ ಪ್ರಯತ್ನ ಕಾನೂನಾತ್ಮಕವಾಗಿ ಮಾಡೋಣ ಎಂದರು.ಎಲ್ಲ ಲಿಂಗಾಯತರಿಗೆ ಕೇಂದ್ರದಲ್ಲಿ ಓಬಿಸಿ ಸ್ಥಾನಮಾನ ಸಿಗಬೇಕಿದೆ. ಈ ಕುರಿತು ಅನೇಕ ಬಾರಿ ಸಿಎಂ ಜತೆ ಮಾತನಾಡಿದ್ದೇನೆ. ಎಲ್ಲ ಲಿಂಗಾಯತ ಶಾಸಕರು, ಸಚಿವರು ಒಟ್ಟಾಗಿ ಕೇಂದ್ರದ ಮೇಲೆ ಒತ್ತಡ ಹೇರಿದರೇ ಓಬಿಸಿ ಸ್ಥಾನಮಾನ ದೊರೆಯುತ್ತದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕಿದೆ ಎಂದರು.
ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದವರ ಮೇಲೆ ಲಾಠಿ ಚಾರ್ಜ್ ಪ್ರಕರಣದಲ್ಲಿ ಅಂದು ನಾನು ಹೋರಾಟಕ್ಕೆ ಸ್ಪಂದಿಸಿದ್ದೇನೆ. ಆದರೆ, ನಾನು ವಿನಾಕಾರಣ ಹೋರಾಟಕ್ಕೆ ಸ್ಪಂದಿಸಿಲ್ಲ ಎನ್ನುವುದು ಸರಿಯಲ್ಲ. ನಾವೆಲ್ಲ ಸ್ವಾಮೀಜಿಗಳು ಒಂದೇ ಇದ್ದೇವೆ ಎಂದರು.ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಮಾತನಾಡಿ, ಸಣ್ಣ-ಪುಟ್ಟ ಭಿನ್ನಾಭಿಪ್ರಾಯ ದೂರವಿಟ್ಟು ನಾವೆಲ್ಲ ಒಂದಾಗಿ ಸಂಘಟಿತರಾಗೋಣ.
ಮುಂದಿನ ದಿನಗಳಲ್ಲಿ ೫ ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ನಮ್ಮ ಸಮುದಾಯದ ಶಕ್ತಿ ಜಿಲ್ಲೆಯಲ್ಲಿ ಪ್ರದರ್ಶನ ಮಾಡೋಣ ಎಂದರು.ಮಾಜಿ ಸಂಸದ ಶಿವರಾಮೇಗೌಡ ಮಾತನಾಡಿ, ಪಂಚಮಸಾಲಿ ಸಮುದಾಯದ ಸಂಘಟನೆ ೧೯೯೩ರಿಂದ ಆರಂಭವಾಗಿದೆ. ಅಂದಿನಿಂದಲೂ ಸಂಘಟನೆಯ ಜಪ ಮಾಡುತ್ತಲೇ ಬಂದಿದ್ದೇವೆ. ಇದು ನಾಚಿಕೆಗೇಡಿತನದ ಸಂಗತಿಯಾಗಿದೆ. ಸಮಾಜದ ಸದಸ್ಯತ್ವ ನೋಂದಣಿ ಅಭಿಯಾನ ಹಿಂದುಳಿಯಲು ಕಾರಣವೇನು...?ಎಂಬುದರ ಆತ್ಮವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ನ್ಯಾಯವಾಧಿ ಬಿ.ಎಸ್. ಪಾಟೀಲ್ ತಾವರಗೇರಾ ಮಾತನಾಡಿ, ಪಂಚಮಸಾಲಿ ಸಮಾಜ ಎಂದರೇ ಶ್ರೀಮಂತ ಸಮಾಜ ಎನ್ನುವ ಭ್ರಮೆ ಹಲವರಲ್ಲಿದೆ. ಆದರೆ, ವಾಸ್ತವವಾಗಿ ಅನೇಕ ಪಂಚಮಸಾಲಿ ಸಮಾಜದ ಕುಟುಂಬಗಳು ಬಡತನದಲ್ಲಿವೆ. ಬಡತನದ ಕಾರಣದಿಂದ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರ ೨ಎ ಮೀಸಲಾತಿ ಕೊಡಲಿ ಎಂಬ ಆಗ್ರಹ ನಮ್ಮದು. ಅಲ್ಲದೆ, ಹಿಂದುಳಿದ ವರ್ಗಗಳ ಆಯೋಗಕ್ಕೆ ಪಂಚಮಸಾಲಿ ಸಮಾಜದ ಸ್ಥಿತಿಗತಿ ಕುರಿತು ಈಗಾಗಲೇ ೧೧೦೦ ಪುಟುಗಳ ವರದಿ ಸಲ್ಲಿಸಿದ್ದೇನೆ ಎಂದರು.ಸಮಾಜದ ಮುಖಂಡ ಬಸವನಗೌಡ ತೊಂಡಿಹಾಳ, ಬಸವಲಿಂಗಪ್ಪ ಭೂತೆ, ದೇವೇಂದ್ರಪ್ಪ ಬಳೂಟಗಿ, ಅಮರೇಶ ಕರಡಿ, ಡಾ. ಬಸವರಾಜ ಕ್ಯಾವಟರ್, ಕಳಕನಗೌಡ ಪಾಟೀಲ್, ಬಿ.ಎಸ್. ಪಾಟೀಲ್ ತಾವರಗೇರಾ, ಶಂಭುಲಿಂಗನಗೌಡ ಪಾಟೀಲ್ ಹಲಗೇರಿ, ವೀರಬಸಪ್ಪ ಪಟ್ಟಣ ಶೆಟ್ಟಿ, ಪರಮೇಶ ಪಟ್ಟಣಶೆಟ್ಟಿ, ವೀರಣ್ಣ ಅಣ್ಣಿಗೇರಿ, ಶಿವಪ್ಪ, ಕರಿಯಪ್ಪ ಮೇಟಿ, ಮಹಾಂತೇಶ ಮಲ್ಲನಗೌಡರ, ಬಸವರಾಜ ಸಂಕನಗೌಡರ, ಸುಮಂಗಲಾ ಹಂಚಿನಾಳ, ಕೋಟ್ರೇಶ ಕಿಚಡಿ, ಬಸವರಾಜ ಗದ್ದಿ ಗಿಣಿಗೇರಿ ಸೇರಿದಂತೆ ಇನ್ನಿತರರು ಇದ್ದರು.