ಕಲ್ಜಿಗ ಚಿತ್ರದಲ್ಲಿ ಕೊರಗಜ್ಜ ಪಾತ್ರ ಪ್ರದರ್ಶನಕ್ಕೆ ಆಕ್ಷೇಪ

| Published : Sep 14 2024, 01:50 AM IST

ಸಾರಾಂಶ

ಚಿತ್ರದ ಕುರಿತು ವಿವಾದ ಉದ್ಭವವಾದ ಬೆನ್ನಲ್ಲೇ ಕಲ್ಲಾಪುನಲ್ಲಿರುವ ಕೊರಗಜ್ಜ ಆದಿಸ್ಥಳಕ್ಕೆ ತೆರಳಿದ ಚಿತ್ರತಂಡದ ಪ್ರಮುಖರು ಪ್ರಾರ್ಥನೆ ಸಲ್ಲಿಸಿದ್ದಾರೆ.

ಮಂಗಳೂರು: ಶುಕ್ರವಾರ ಬಿಡುಗಡೆಯಾದ ಕಲ್ಜಿಗ ಚಿತ್ರದಲ್ಲಿ ಕೊರಗಜ್ಜ ದೈವದ ದೃಶ್ಯ ಪ್ರದರ್ಶನ ಮಾಡಿದ್ದಕ್ಕೆ ದೈವಾರಾಧಕರು ಆಕ್ರೋಶ ವ್ಯಕ್ತಪಡಿಸಿದ್ದು, ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಚಿತ್ರತಂಡದ ವಿರುದ್ಧ ಪ್ರಾರ್ಥನೆ ಮಾಡಿದ್ದಾರೆ.ಕಲ್ಜಿಗ ಸಿನಿಮಾದಲ್ಲಿ ಕೊರಗಜ್ಜ ದೈವ ಪ್ರತ್ಯಕ್ಷವಾಗುವ ದೃಶ್ಯ ತೋರಿಸಲಾಗಿದ್ದು, ಇದು ದೈವಾರಾಧಕರ ಕೆಂಗಣ್ಣಿಗೆ ಕಾರಣವಾಗಿದೆ. ಜಾಲತಾಣದಲ್ಲೂ ಬಾಯ್ಕಾಟ್‌ ಕಲ್ಜಿಗ ಅಭಿಯಾನವೂ ಆರಂಭವಾಗಿದೆ. ಇದರ ವಿರುದ್ಧ ತುಳುನಾಡ ದೈವಾರಾಧನೆ ಸಂರಕ್ಷಣಾ ಸಂಘಟನೆಯು ಕಾನೂನು ಹೋರಾಟದ ಎಚ್ಚರಿಕೆಯನ್ನೂ ನೀಡಿದೆ. ಇನ್ನು ಮುಂದೆ ಯಾರೇ ದೈವಗಳ ದೃಶ್ಯ ಬಳಸಿದರೂ ಉಗ್ರ ಹೋರಾಟ ಮಾಡುತ್ತೇವೆ. ಬಹಳಷ್ಟು ಶ್ರದ್ಧೆಯಿಂದ ಮಾಡುವ ದೈವಾರಾಧನೆಯನ್ನು ಕಂಡ ಕಂಡಲ್ಲಿ ಪ್ರದರ್ಶಿಸಲು ದೈವಾರಾಧನೆ ಪ್ರದರ್ಶನದ ವಸ್ತುವಲ್ಲ. ಇನ್ನು ಸಹಿಸಲಾಗದು. ಹಾಗಾಗಿ ದೈವಸ್ಥಾನಕ್ಕೆ ಹೋಗಿ ದೈವವೇ ನೋಡಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ. ದೈವಾರಾಧನೆ ನಿರ್ದಿಷ್ಟ ಕಟ್ಟುಪಾಡುಗಳೊಂದಿಗೆ ನಡೆಯುತ್ತದೆ ಎಂದು ಸಂಘಟನೆಯ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಕೊರಗಜ್ಜ ಆದಿಸ್ಥಳದಲ್ಲಿ ನಟ ಅರ್ಜುನ್‌ ಪ್ರಾರ್ಥನೆ

ಚಿತ್ರದ ಕುರಿತು ವಿವಾದ ಉದ್ಭವವಾದ ಬೆನ್ನಲ್ಲೇ ಕಲ್ಲಾಪುನಲ್ಲಿರುವ ಕೊರಗಜ್ಜ ಆದಿಸ್ಥಳಕ್ಕೆ ತೆರಳಿದ ಚಿತ್ರತಂಡದ ಪ್ರಮುಖರು ಪ್ರಾರ್ಥನೆ ಸಲ್ಲಿಸಿದ್ದಾರೆ.

ಈ ವೇಳೆ ಮಾತನಾಡಿದ ಚಿತ್ರದ ನಾಯಕ ನಟ ಅರ್ಜುನ್‌ ಕಾಪಿಕಾಡ್‌, ಅಪ್ಪಟ ತುಳುವನಾಗಿ, ಅಜ್ಜನ ಭಕ್ತನಾಗಿ ತುಳು ಭಾಷೆ- ಮಣ್ಣಿಗಾಗಿ ದುಡಿದವನು, ಎಂದಿಗೂ ಅಜ್ಜನ ಕಾರಣಿಕವನ್ನಷ್ಟೇ ತೋರಿಸುವ ಪ್ರಯತ್ನ ಮಾಡಿದ್ದೇವೆ. ಚಿತ್ರತಂಡದ ಮೇಲೆ ಅಜ್ಜನ ಆಶಿರ್ವಾದ ಇದೆ ಎನ್ನುವುದು ಚಿತ್ರದ ಶೂಟಿಂಗ್‌ನಿಂದ ಹಿಡಿದು ಈವರೆಗೆ ನಡೆದ ಸನ್ನಿವೇಶಗಳೆಲ್ಲವೂ ತೋರಿಸಿಕೊಟ್ಟಿವೆ. ಕೊರಗಜ್ಜನ ಕುರಿತು ಅಪಪ್ರಚಾರ ಮಾಡುವ ಯಾವುದೇ ಕಾರ್ಯಕ್ಕೆ ಮುಂದಾಗಿಲ್ಲ. ಮಿಗಿಲಾಗಿ ಅಜ್ಜನ ವಿಚಾರಗಳ ಕುರಿತು ಹೇಳುವಷ್ಟು ದೊಡ್ಡ ವ್ಯಕ್ತಿಯೂ ಅಲ್ಲ. ಇಡೀ ಚಿತ್ರತಂಡ ಅಜ್ಜನ ಭಕ್ತರಾಗಿರುವುದರಿಂದ ಅಜ್ಜನ ದಯೆ ಸದಾ ನಮ್ಮ ಬೆನ್ನಲ್ಲಿ ಇರುವಂತೆ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.

ಚಿತ್ರದ ನಿರ್ಮಾಪಕ ಶರತ್ ಕುಮಾರ್, ನಿರ್ದೇಶಕ ಸುಮನ್ ಸುವರ್ಣ, ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳದ ನವೀನ್ ಕಾಯಂಗಳ, ಪ್ರಸಾದ್ ಕಾಯಂಗಳ, ವನಿತಾ ಗಿರೀಶ್, ಪುರುಷೋತ್ತಮ್ ಕಲ್ಲಾಪು ಇದ್ದರು.