ಸಾರಾಂಶ
ಪೀಣ್ಯ ದಾಸರಹಳ್ಳಿ : ದಾಸರಹಳ್ಳಿ ಮೆಟ್ರೋ ಸ್ಟೇಷನ್ ಹಿಂಭಾಗದ ಮೊದಲನೇ ಅಡ್ಡ ರಸ್ತೆಯನ್ನು ಸ್ಥಳೀಯರು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ಮತ್ತು ವಾಣಿಜ್ಯ ಮಳಿಗೆಗಳನ್ನು ಕಟ್ಟಿಕೊಂಡಿದ್ದಾರೆ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಹಲವು ಬಾರಿ ಬಿಬಿಎಂಪಿ ಅಪರ ಆಯುಕ್ತರಿಗೆ ದೂರು ನೀಡಿದರೂ ಒತ್ತುವರಿಯನ್ನು ತೆರವುಗೊಳಿಸದೆ ಉದಾಸೀನ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
40 ವರ್ಷದಿಂದ ಇದ್ದ ಕಾಂಕ್ರೀಟ್ ರಸ್ತೆಯಲ್ಲಿ ನೀರಿನ ಪೈಪ್ ಮತ್ತು ಒಳಚರಂಡಿ ಮಾಡಿದ್ದಾರೆ. ಆದರೆ ಈಗ ಅದು ನಮ್ಮ ಜಮೀನಿನ ಜಾಗವೆಂದು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ಮತ್ತು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿರುವುದನ್ನು ತೆರವುಗೊಳಿಸಿ ರಸ್ತೆ ಜಾಗವನ್ನು ಸಾರ್ವಜನಿಕರಿಗೆ ಉಳಿಸುವಂತೆ ಮನವಿ ಮಾಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಸಂದೀಪ್ ಸಿಂಗ್ ಆರೋಪಿಸಿದರು.
ರಸ್ತೆಯ ಜಾಗವನ್ನು ಕಲ್ಲುಕೂಡ ನಿಲ್ಲಿಸಿ ಒತ್ತುವರಿ ಮಾಡಿಕೊಂಡು ದರ್ಪ ತೋರಿಸುತ್ತಿದ್ದಾರೆ. ದಾಸರಹಳ್ಳಿ ಮಾಜಿ ನಗರಸಭೆ ಸದಸ್ಯರೊಬ್ಬರು ರಸ್ತೆ ಜಾಗವನ್ನು ಒತ್ತುವರಿ ಮಾಡಿದ್ದರಿಂದ ಉಳಿದವರು ಸಹ ಒತ್ತುವರಿ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಇದೇ ರೀತಿ ರಸ್ತೆಯ ಜಾಗಗಳನ್ನು ಒತ್ತುವರಿ ಮಾಡಿಕೊಂಡು ತಮಗಿಷ್ಟ ಬಂದಂತೆ ವಾಣಿಜ್ಯ ಮಳಿಗೆಗಳನ್ನು ಕಟ್ಟಿಕೊಂಡರೆ ಅವರಿಗೆ ಹೇಳುವವರು, ಕೇಳುವವರು ಯಾರು ಇಲ್ಲವಾ? ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆಯೇ? ಎಂದು ಪ್ರಶ್ನಿಸಿದರು.
ನಾವು ಇಲ್ಲಿ 38 ವರ್ಷದಿಂದ ವಾಸ ಮಾಡುತ್ತಿದ್ದು, ಹಿಂದೆ ಈ ರಸ್ತೆಯಲ್ಲಿ ಓಡಾಡುತ್ತಿದ್ದೆವು. ಆದರೆ ಈಗ ರಸ್ತೆಯ ಮೇಲೆ ವಾಣಿಜ್ಯ ಮಳಿಗೆ ನಿರ್ಮಿಸಿದ್ದಾರೆ ಎಂದು ಸ್ಥಳೀಯ ನಿವಾಸಿ ವಾದಿರಾಜ್ ತಿಳಿಸಿದರು. ಈ ವಿಷಯದ ಬಗ್ಗೆ ಅಪರ ಆಯುಕ್ತ ಬಾಲಶೇಖರ್ ಅವರಿಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು.