ಸಾರಾಂಶ
ಕನ್ನಡಪ್ರಭ ವಾರ್ತೆ ಕಂಪ್ಲಿ
ಗ್ರಾಪಂ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ನ. 7ರಂದು ಬೆಂಗಳೂರಿನಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘ (ಸಿಐಟಿಯು ಸಂಯೋಜಿತ) ಬಳ್ಳಾರಿ ಜಿಲ್ಲಾಧ್ಯಕ್ಷ ಆರ್.ಎಸ್. ಬಸವರಾಜ್ ತಿಳಿಸಿದರು.ಪಟ್ಟಣದಲ್ಲಿ ಶನಿವಾರ ನಡೆದ ಸಂಘದ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ ವಸೂಲಿಗಾರ, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್ಸ್, ನೀರುಗಂಟಿಗಳು, ಜವಾನ, ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಸರ್ಕಾರಿ ನೌಕರರನ್ನಾಗಿ ಘೋಷಿಸಬೇಕು. ಇತ್ತೀಚಿನ ದಿನಗಳಲ್ಲಿ ದಿನೇ ದಿನೇ ಮನೆ ಬಳಕೆ ವಸ್ತುಗಳ ಬೆಲೆ ಹೆಚ್ಚಾಗುತ್ತಿದ್ದು, ಗ್ರಾಪಂ ನೌಕರರಿಗೆ ಜೀವನ ಸಾಗಿಸುವುದು ಕಷ್ಟವಾಗಿದೆ. ಹೀಗಾಗಿ ಕನಿಷ್ಠ ವೇತನ ₹31,000 ನಿಗದಿಗೊಳಿಸಬೇಕು. ಇನ್ನು ನೌಕರರಿಗೆ ನಿವೃತ್ತಿ ಅಥವಾ ಮರಣ ಹೊಂದಿದರೆ ಅವರಿಗೆ ಅಥವಾ ಅವರ ಕುಟುಂಬಕ್ಕೆ ಪ್ರತಿ ತಿಂಗಳು ಕನಿಷ್ಠ ₹6 ಸಾವಿರ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು. 2017ರ ಅ. 31ಕ್ಕೆ ನೇಮಕಗೊಂಡ ಜಿಪಂ ಅನುಮೋದನೆ ಇಲ್ಲದೆ ಮರಣ ಹೊಂದಿದ ಕುಟುಂಬಕ್ಕೆ ಅನುಕಂಪ ನೌಕರಿ ನೀಡಬೇಕು. ಅಲ್ಲದೇ ನೇಮಕಗೊಂಡ ನೌಕರರಿಗೆ ಜಿಪಂಗಳಿಂದ ಏಕಕಾಲಕ್ಕೆ ಅನುಮೋದನೆ ನೀಡಬೇಕು. ಅದರಲ್ಲಿ ಜವಾನ, ಸ್ವಚ್ಛತಾಗಾರರು, ನೀರುಗಂಟಿಗಳಿಗೆ ವಿದ್ಯಾರ್ಹತೆ ಕೈಬಿಟ್ಟು ನಿರ್ಣಯ, ವೇತನ, ಹಾಜರಾತಿ ಆಧಾರದಲ್ಲಿ ಅನುಮೋದನೆ ನೀಡಬೇಕು. ನೀರುಗಂಟಿಗಳಿಗೆ ಮಲ್ಟಿಪರ್ಪಸ್ ಎಂದಿರುವುದನ್ನು ಕೈಬಿಟ್ಟು ನಿರ್ದಿಷ್ಟವಾದ ಕೆಲಸಗಳನ್ನು ಇ-ನಿಗದಿಪಡಿಸಬೇಕು. ನೀರುಗಂಟಿ, ಅಟೆಂಡರ್, ಸ್ವೀಪರ್‌ಗಳಲ್ಲಿ ವಿದ್ಯಾರ್ಹತೆ ಇರುವವರಿಗೆ ಗ್ರೇಡ್-2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗಳಿಗೆ ಬಡ್ತಿ ನೀಡಬೇಕು. ಆದಾಯಕ್ಕೆ ಅನುಗುಣವಾಗಿ ಕರ ವಸೂಲಿಗಾರರ ಹುದ್ದೆಗಳನ್ನು ನಿಗದಿಗೊಳಿಸಬೇಕು. ಪ್ರತಿಯೊಂದು ಗ್ರಾಪಂಗಳಿಗೆ ಲೆಕ್ಕ ಸಹಾಯಕ ಹುದ್ದೆ ಸೃಷ್ಟಿಸಬೇಕು. ಐಪಿಡಿ ಸಾಲಪ್ಪ ವರದಿಯಂತೆ ಸ್ವಚ್ಛತಾಗಾರರನ್ನು ನೇಮಿಸಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ತ್ವರಿತಗತಿಯಲ್ಲಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಂ. ಚನ್ನಬಸಯ್ಯ ಕಂಪ್ಲಿ ತಾಲೂಕು ಅಧ್ಯಕ್ಷ ಡಿ.ಎಂ. ಜಡೆಯ್ಯಸ್ವಾಮಿ, ಕುರುಗೋಡು ತಾಲೂಕು ಅಧ್ಯಕ್ಷ ರಾಜಾಸಾಬ್, ಖಜಾಂಚಿ ಚಂದ್ರಶೇಖರಗೌಡ, ಪ್ರಧಾನ ಕಾರ್ಯದರ್ಶಿ ಎಲ್. ಚಾಂದಪಾಷಾ, ಇತರರಿದ್ದರು.