ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಯಾವುದೇ ಒತ್ತಡ, ರಾಜಕಾರಣಿಗಳ ತಾಳಕ್ಕೆ ಕುಣಿಯದೆ ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಪ್ರಾಮಾಣಿಕ ಕೆಲಸ ಮಾಡುವಂತೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ತಾಕೀತು ಮಾಡಿದರು.ನಗರದ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ನಡೆದ ಕೇಂದ್ರ ವಲಯ, ಕೇಂದ್ರ ಪುರಸ್ಕೃತ ಕಾರ್‍ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇರೆ ಬೇರೆ ಪಕ್ಷದವರು ಅಧಿಕಾರಿಗಳಿಗೆ ಸೂಚನೆ ನೀಡುವುದು ಸಹಜ. ಆದರೆ, ಅಧಿಕಾರಿಗಳು ಪಕ್ಷಾತೀತವಾಗಿ ಜನರಿಗೆ ಸೌಲಭ್ಯ ತಲುಪಿಸುವ ಕೆಲಸ ಮಾಡಬೇಕು ಎಂದರು.
ಮಂಡ್ಯ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ನಾನು, ಕೇಂದ್ರದಲ್ಲಿ ಉನ್ನತ ಖಾತೆ ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ. ಆದ ಕಾರಣ ಕೇಂದ್ರ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಮಂಡ್ಯ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಉತ್ಸುಕನಾಗಿದ್ದೇನೆ. ಏನೆಲ್ಲಾ ಯೋಜನೆ ತರಬಹುದು, ಅಗತ್ಯತೆ ಇದೆ ಎಂಬುದರ ಕುರಿತಂತೆ ಪ್ರಸ್ತಾವನೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.ರಾಜಕಾರಣಿಗಳು ರಾಜಕೀಯ ಮಾಡುತ್ತಾರೆ. ಅಧಿಕಾರಿಗಳು ರಾಜಕಾರಿಣಿಗಳನ್ನು ಮೆಚ್ಚಿಸಲು ಕೆಲಸ ಮಾಡದೆ ಜನರ ಕೆಲಸ ಮಾಡುವ ಮೂಲಕ ತಮ್ಮ ಜವಾಬ್ದಾರಿ ಮರೆಯಬಾರದು. ರಾಜಕಾರಣ ಮಾಡಲು ಹೋದರೇ ಜನ ಸಾಮಾನ್ಯರ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರಾಮಾಣಿಕವಾಗಿ ಸರ್ಕಾರದ ಕಾರ್‍ಯಕ್ರಮಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವಂತೆ ಸಲಹೆ ನೀಡಿದರು.ಸಹಕಾರ ಇಲಾಖೆಗಳಲ್ಲಿ ಹೆಚ್ಚಿನ ಲೋಪಗಳು ಕಂಡುಬರುತ್ತಿವೆ. ಸಹಕಾರ ಇಲಾಖೆ ಕಾನೂನುಗಳೇ ಇಲ್ಲದಂತೆ ಆಗಿದೆ. ನೀವು ಕೊಟ್ಟಿದ್ದೆ ತೀರ್ಪು, ಕಾನೂನು ಎಂಬಂತೆ ಆಗಿದೆ. ಸಹಕಾರಿ ಸಂಸ್ಥೆಗಳ ಬೆಳವಣಿಗೆಗೆ ಪೂರಕವಾದ ನಿರ್ಧಾರಗಳನ್ನು ಅಧಿಕಾರಿಗಳು ತೆಗೆದುಕೊಳ್ಳಬೇಕು. ಅದು ಬಿಟ್ಟು ಯಾರದ್ದೋ ಹಿತಾಸಕ್ತಿಗಾಗಿ ಸಂಘಗಳಿಗೆ ಮಾರಕವಾಗುವಂತಹ ಕೆಲಸ ಮಾಡಬಾರದು ಎಂದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯಡಿ ಕೃಷಿ ಮತ್ತು ಪಶು ಸಾಕಾಣಿಕೆ ತರಬೇತಿ ನೀಡುವ ಇದರಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಜನರಿಗೆ ಪ್ರೇರೇಪಿಸಬೇಕು. ಕೃಷಿ ಪ್ರಧಾನ ಜಿಲ್ಲೆಯಲ್ಲಿ ಕೃಷಿ ಜೊತೆಗೆ ಪಶು ಪಾಲನೆಯಲ್ಲೂ ಜೋಡಿಸಿ ಕೆಲಸ ಮಾಡುವಂತೆ ಸೂಚಿಸಿದರು.ಕೃಷಿಗಿಂತಲೂ ಹೈನುಗಾರಿಕೆಯಲ್ಲೇ ಹೆಚ್ಚು ಆದಾಯ ಬರುತ್ತಿದೆ. ಇದರಿಂದ ರೈತ ಕುಟುಂಬಗಳು ಸ್ವಾವಲಂಭಿಯಾಗಲು ಸಾಧ್ಯವಾಗಿದೆ. ಕೃಷಿ ಮತ್ತು ಪಶು ಸಾಕಾಣಿಗೆ ಜೊತೆಗೆ ಯುವಜನರನ್ನೂ ತೊಡಗಿಸಿಕೊಂಡು ಸೌಲಭ್ಯ ನೀಡುವಂತೆ ಕಿವಿಮಾತು ಹೇಳಿದರು.
ವಸತಿ ಯೋಜನೆಯಡಿ ಜಿಲ್ಲೆಯಲ್ಲಿ ಪರಿಣಾಮಕಾರಿ ಪ್ರಗತಿ ಆಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಅವರು, 2021-22ನೇ ಸಾಲಿನಲ್ಲಿ ಹೆಚ್ಚಿನ ಪ್ರಗತಿ ಆಗಿದೆ ಎನ್ನಲಾಗುತ್ತಿದೆ. ಆದರೂ ಹೆಚ್ಚಾಗಿ ನಿವೇಶನ ಮತ್ತು ಮನೆ ಹಂಚಿಕೆಯಲ್ಲಿ ಸಾಧನೆ ಆಗಿಲ್ಲ. ನಿವೇಶನ ಹಾಗೂ ಮನೆಗಾಗಿ ಸಾರ್ವಜನಿಕರ ಅಹವಾಲು ಸಲ್ಲಿಸುತ್ತಿದ್ದಾರೆ ಎಂದರು.ಮಧ್ಯ ಪ್ರವೇಶಿಸಿದ ಜಿಲ್ಲಾಕಾರಿ ಡಾ.ಕುಮಾರ, ಮನೆ ನಿರ್ಮಾಣಕ್ಕೆ 1.20 ಲಕ್ಷ ರು. ಅನುದಾನ ನೀಡಲಾಗುತ್ತಿದೆ. ಎಸ್ಸಿ, ಎಸ್ಟಿಯವರಿಗೆ 2 ಲಕ್ಷ ರು.ನೀಡಲಾಗುತ್ತದೆ. ಇಷ್ಟು ಕಡಿಮೆ ಮೊತ್ತದ ಹಣದಿಂದ ಏನೂ ಮಾಡಲಾಗದು. ಫಲಾನುಭವಿಗಳು ಅಡಿಪಾಯ ಹಾಕಲು ಉಪಯೋಗಿಸಿಕೊಂಡು ನಂತರ ಬ್ಯಾಂಕ್ ಸಾಲಕ್ಕೆ ಮೊರೆ ಹೋಗುತ್ತಾರೆ. ಕೆಲವರಿಗೆ ಬ್ಯಾಂಕ್ ಸಾಲ ಸೌಲಭ್ಯ ದೊರೆಯದೆ ಸ್ಥಗಿತವಾಗಿದೆ. ಇನ್ನೂ ಹಲವು ಸಮಸ್ಯೆಗಳಿಂದಾಗಿ ಮನೆ ನಿರ್ಮಾಣ ಸಾಧ್ಯವಾಗಿಲ್ಲ ಎಂದು ಸಚಿವರ ಗಮನಕ್ಕೆ ತಂದರು.
ನಬಾರ್ಡ್ ವ್ಯವಸ್ಥಾಪಕರು ಉತ್ತರಿಸಿ, ಫಲಾನುಭವಿಗಳಿಗೆ ಕೆಲವೆಡೆ ಹಕ್ಕುಪತ್ರ ಇಲ್ಲ. ಸಂಬಂಧಿಸಿದ ದಾಖಲಾತಿ ಒದಗಿಸಿಲ್ಲ. ಹೀಗಾಗಿ ಸಾಲ ಸೌಲಭ್ಯದಲ್ಲಿ ಸಮಸ್ಯೆಗಳಾಗುತ್ತಿವೆ ಎಂದು ವಿವರಿಸಿದರು. ಹಕ್ಕಪತ್ರ ಕೊಡುವ ಕಡೆಗಳಲ್ಲಿ ಹಕ್ಕು ಪತ್ರಗಳನ್ನು ನೀಡಿ ಬ್ಯಾಂಕ್ ಸಾಲ ಕೊಡಿಸಲು ಸಹಾಯ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚಿಸಿದರು.ಜಿಲ್ಲೆಯಲ್ಲಿ ಕಬ್ಬು ಮತ್ತು ಭತ್ತ ಹೊರತುಪಡಿಸಿ ಬೇರೆ ಬೆಳೆ ಬೆಳೆಯಲು ರೈತರಿಗೆ ಮನವರಿಕೆ ಮಾಡುವಂತೆ ಕೃಷಿ ಜಂಟಿ ನಿರ್ದೇಶಕರಿಗೆ ಕುಮಾರಸ್ವಾಮಿ ಸೂಚನೆ ನೀಡಿದರು. ಭತ್ತದ ಉತ್ಪಾದನೆ ಕಡಿಮೆಯಾದರೆ, ಕಬ್ಬಿನ ಉತ್ಪಾದನೆ ಹೆಚ್ಚಿದೆ. ಆದರೆ, ಇಳುವರಿ ಮಾತ್ರ ಕಡಿಮೆ ಇದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆ ಸಲಹೆ ನೀಡಿದರು.
ರಾಸಾಯನಿಕ ಗೊಬ್ಬರಗಳ ಬದಲಿಗೆ ನ್ಯಾನೋ ಮತ್ತು ಸಾವಯವ ಗೊಬ್ಬರ ಉಪಯೋಗಿಸಲು ರೈತರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.ಸಭೆಯಲ್ಲಿ ಶಾಸಕರಾದ ಪಿ.ರವಿಕುಮಾರ್, ಶಾಸಕ ಎಚ್.ಟಿ. ಮಂಜು, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಅಪರ ಜಿಲ್ಲಾಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.