ಅಧಿಕಾರಿಗಳು ಕರ್ತವ್ಯ ಜೊತೆಗೆ ಸಾಮಾಜಿಕ ಕಳಕಳಿ ಮೆರೆಯಬೇಕು

| Published : Jun 29 2024, 12:31 AM IST

ಅಧಿಕಾರಿಗಳು ಕರ್ತವ್ಯ ಜೊತೆಗೆ ಸಾಮಾಜಿಕ ಕಳಕಳಿ ಮೆರೆಯಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಹರಿಹರ ತಾಲೂಕುಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮ ಕರ್ತವ್ಯದ ಜೊತಯಲ್ಲಿ ಸಾಮಾಜಿಕ ಕಳಕಳಿಯನ್ನು ಹೊಂದುವ ಮೂಲಕ ಜನಪರವಾದ ಸೇವೆ ಸಲ್ಲಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಹಾಗೂ ಹರಿಹರ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಸಿ.ಪಿ. ಸೌಮ್ಯಶ್ರೀ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಹರಿಹರ

ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮ ಕರ್ತವ್ಯದ ಜೊತಯಲ್ಲಿ ಸಾಮಾಜಿಕ ಕಳಕಳಿಯನ್ನು ಹೊಂದುವ ಮೂಲಕ ಜನಪರವಾದ ಸೇವೆ ಸಲ್ಲಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಹಾಗೂ ಹರಿಹರ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಸಿ.ಪಿ. ಸೌಮ್ಯಶ್ರೀ ಸೂಚಿಸಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಇಲಾಖೆ ಅಧಿಕಾರಿಗಳು ತಮ್ಮ ಕೆಲಸಗಳನ್ನು ಸರ್ಕಾರಿ ಕೆಲಸ ಎನ್ನದೇ ಸಾಮಾಜಿಕ ಕಳಕಳಿಯಿಂದ ಜನರ ಸೇವೆ ಮಾಡಬೇಕು. ಉನ್ನತ ಅಧಿಕಾರಿಗಳು ಹೇಳುವ ರೀತಿಯಲ್ಲಿ ಕೇವಲ ಗುರಿ ತಲುಪುವುದಲ್ಲ. ಸಾರ್ವಜನಿಕರ ಪರವಾಗಿ ಕೆಲಸಗಳನ್ನು ಮಾಡಿ ಎಂದು ಸಲಹೆ ನೀಡಿದರು.

ಗುಣಮಟ್ಟದ ಕಲಿಕೆಗೆ ಆದ್ಯತೆ ನೀಡಿ:

ಶಿಕ್ಷಣ ಇಲಾಖೆಯಲ್ಲಿ ಗುಣಮಟ್ಟದ ಕಲಿಕೆಗೆ ಆದ್ಯತೆ ನೀಡಬೇಕು. ಕ್ಷೇತ್ರದಲ್ಲಿ ಶಿಕ್ಷಣಾಧಿಕಾರಿಗಳು ಪ್ರವಾಸ ಕೈಗೊಂಡಾಗ ಶಾಲೆಗಳಿಗೆ ದಿಢೀರ್ ಭೇಟಿ ನೀಡಬೇಕು. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವಾಗ ಟಿಇಟಿ, ಬಿಇಡಿ, ಡಿಇಡಿ ಪರಿಕ್ಷೆಯಲ್ಲಿ ಉತ್ತೀರ್ಣ ಆದವರಿಗೆ ಆದ್ಯತೆ ನೀಡುವ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗಬೇಕು ಎಂದರು.

ಮಳೆಗಾಲ ಪ್ರಾರಂಭವಾದರೂ ಕೃಷಿ ಇಲಾಖೆಯಲ್ಲಿ ಭತ್ತದ ಬಿತ್ತನೆಬೀಜ ಇಲ್ಲದಿದ್ದರೆ ರೈತರಿಗೆ ಸಮಸ್ಯೆಯಾಗುತ್ತದೆ. ಕೂಡಲೇ ಮೇಲಾಧಿಕಾರಿಗಳನ್ನು ಸಂಪರ್ಕಿಸಿ ರೈತರಿಗೆ ಅಗತ್ಯ ಹಾಗೂ ಅನುಗುಣವಾಗಿ ಸೌಲಭ್ಯಗಳನ್ನು ನೀಡಬೇಕು. ರೈತರಿಗೆ ಸಂಜೀವಿನಿ ಯೋಜನೆ ಸೇವೆಗಳು ಸಿಗುವಂತಾಗಬೇಕು. ತಾಲೂಕಿನ ಎಲ್ಲ ಹಳ್ಳಿಗಳಿಗೆ ತೆರಳಿಗೆ ಮಣ್ಣು ಪರೀಕ್ಷೆ ಮಾಡಿ, ರೈತರು ತಮ್ಮ ಜಮೀನುಗಳಿಗೆ ಯಾವ ಯಾವ ಔಷಧಿ ಹಾಗೂ ರಸಗೊಬ್ಬರ ಹಾಕಬೇಕೆಂದು ಸಲಹೆ ನೀಡುವುದರಿಂದ ಅವರಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಪಡಿತರ ಸೇವೆ ಅವ್ಯವಸ್ಥೆ: ಜನರಿಗೆ ಪಡಿತರ ಕಾರ್ಡ್ ಸೇವೆ ನೀಡುವಲ್ಲಿ ತಾಲೂಕು ಆಡಳಿತ ವಿಫಲವಾಗುತ್ತಿದೆ. ಪ್ರತಿನಿತ್ಯ ಸಾವಿರಾರು ಜನರು ರೇಷನ್ ಕಾರ್ಡ್ ಸೇವೆ ಪಡೆದುಕೊಳ್ಳಲು ಕಚೇರಿಗೆ ಬರುತ್ತಾರೆ. ಆದರೆ, ತಿಂಗಳಲ್ಲಿ ಒಂದು ಗಂಟೆ ಈ ಸೇವೆ ನೀಡಲಾಗುತ್ತಿದೆ ಎಂದರೆ ಸಾರ್ವಜನಿಕರ ಪರಿಸ್ಥಿತಿ ಗಂಭೀರವಾಗುತ್ತದೆ. ನಾನು ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತರುತ್ತೇನೆ ಎಂದು ಹೇಳಿದರು.

ವಸತಿ ನಿಲಯದ ವಿದ್ಯಾರ್ಥಿಗಳು ಅಪ್ಪ-ಅಮ್ಮ, ಬಂಧು-ಬಳಗವನ್ನು ಬಿಟ್ಟು ವಿದ್ಯಾಭ್ಯಾಸಕ್ಕೆ ನಗರಕ್ಕೆ ಬಂದಿರುತ್ತಾರೆ. ಅವರು ಯಾವುದೇ ಖಿನ್ನತೆಗೆ ಒಳಗಾಗದಂತೆ ಕ್ರಿಯಾಶೀಲರಾಗಿ, ಲವಲವಿಕೆಯಿಂದ ಓದಿನಲ್ಲಿ ತೊಡಗುವಂತೆ ಸಮಾಜ ಕಲ್ಯಾಣ ಹಾಗೂ ಬಿಸಿಎಂ ಅಧಿಕಾರಿಗಳು ವಿಶೇಷ ಕಾರ್ಯಕ್ರಮಗಳು ಹಾಗೂ ಚಿಂತನ ಶಿಬಿರಗಳನ್ನು ಆಯೋಜಿಸಿ ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಾಹಕಾಧಿಕಾರಿ ರಾಮಕೃಷ್ಣ, ಸಹಾಯಕ ಲೆಕ್ಕಾಧಿಕಾರಿ ಲಿಂಗರಾಜ್, ಯೋಜನಾ ನಿರ್ದೇಶಕರಾದ ಪೂಜಾ, ಸಲೀಂ, ಸ್ವಪ್ನ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

- - -

ಕೋಟ್‌ ಕ್ಷೇತ್ರದಲ್ಲಿನ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಜನರ ಸಮಸ್ಯೆಗಳಿಗೆ ಗುಣಾತ್ಮಕವಾಗಿ ಸ್ಪಂದಿಸಬೇಕು. ಹಳ್ಳಿಯಿಂದ ಕೆಲಸದ ನಿಮಿತ್ತ ಕಚೇರಿಗಳಿಗೆ ಬರುವವರನ್ನು ಸತಾಯಿಸದೇ ಅವರ ಸಮಸ್ಯೆಗೆ ಸೂಕ್ತ ಪರಿಹಾರ ಕೊಡಬೇಕು. ಯಾವುದೇ ತಾರತಮ್ಯ ಇಲ್ಲದೇ ಜನಪರ ಕೆಲಸ ಮಾಡಿ

- ಬಿ.ಪಿ.ಹರೀಶ್, ಶಾಸಕ, ಹರಿಹರ ಕ್ಷೇತ್ರ

- - - -೨೮ಎಚ್‌ಆರ್‌ಆರ್೧:

ಹರಿಹರ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮನ್ಯ ಸಭೆಯಲ್ಲಿ ಶಾಸಕ ಬಿ.ಪಿ.ಹರೀಶ, ಆಡಳಿತಾಧಿಕಾರಿ ಸಿ.ಪಿ.ಸೌಮ್ಯಶ್ರೀ, ತಾಪಂ ಇಒ ರಾಮಕೃಷ್ಣ ಉಪಸ್ಥಿತರಿದ್ದರು.