ನೆಲಮಂಗಲ: ಸೋಲೂರು ಆಡಳಿತಾತ್ಮಕವಾಗಿ ಮಾಗಡಿ ತಾಲೂಕಿನಿಂದ ನೆಲಮಂಗಲ ತಾಲೂಕಿಗೆ ಅಧಿಕೃತ ಸೇರ್ಪಡೆಯಾಗಿದ್ದು, ಶಾಸಕ ಎನ್.ಶ್ರೀನಿವಾಸ್‍ರವರ ನಿರಂತರ ಪ್ರಯತ್ನದ ಫಲವಾಗಿ ಮಾತ್ರ ಈ ಕೆಲಸವಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು

ನೆಲಮಂಗಲ: ಸೋಲೂರು ಆಡಳಿತಾತ್ಮಕವಾಗಿ ಮಾಗಡಿ ತಾಲೂಕಿನಿಂದ ನೆಲಮಂಗಲ ತಾಲೂಕಿಗೆ ಅಧಿಕೃತ ಸೇರ್ಪಡೆಯಾಗಿದ್ದು, ಶಾಸಕ ಎನ್.ಶ್ರೀನಿವಾಸ್‍ರವರ ನಿರಂತರ ಪ್ರಯತ್ನದ ಫಲವಾಗಿ ಮಾತ್ರ ಈ ಕೆಲಸವಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ನಗರದ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸೋಲೂರು ಸೇರ್ಪಡೆ ಹಾಗೂ ದಾಖಲಾತಿಗಳ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ನೆಲಮಂಗಲಕ್ಕೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಹಳಷ್ಟು ಯೋಜನೆಗಳನ್ನು ನೀಡಿದೆ. ಶಾಸಕರ ಕ್ರೀಯಾಶೀಲತೆಗೆ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗಿದೆ. ಸೋಲೂರು ಸೇರ್ಪಡೆಯಲ್ಲಿ ಸಚಿವರು, ಸರ್ಕಾರದ ಪ್ರಯತ್ನ ಶೇ.10ರಷ್ಟಿದ್ದರೆ, ಶಾಸಕ ಶ್ರೀನಿವಾಸ್‌ ಪ್ರಯತ್ನ ಶೇ.90ರಷ್ಟಿದೆ. ಸೋಲೂರು ದಾಖಲಾತಿಗಳು ನೆಲಮಂಗಲಕ್ಕೆ ಹಸ್ತಾಂತರವಾಗಿದ್ದು ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳು ಶೀಘ್ರದಲ್ಲಿ ನೆಲಮಂಗಲಕ್ಕೆ ಬರಲಿವೆ ಎಂದು ಹೇಳಿದರು.

ಬಸ್ ನಿಲ್ದಾಣ ಪೂರ್ಣ:

ಬಹು ನಿರೀಕ್ಷಿತ ದಾಬಸ್‍ಪೇಟೆ ಬಸ್‍ನಿಲ್ದಾಣ ಕಾಮಗಾರಿಗೆ ಶಾಸಕರು ಅನುದಾನ ನೀಡಿದ್ದಾರೆ. ಈಗಗಾಲೇ ಟೆಂಡರ್ ಮುಗಿದಿದ್ದು ಶೀಘ್ರದಲ್ಲಿ ಶಂಕುಸ್ಥಾಪನೆ ಮಾಡಲಾಗುತ್ತದೆ. ನೆಲಮಂಗಲ ಬಸ್‍ನಿಲ್ದಾಣ 2017-18ರಲ್ಲಿ ನಾನೇ ಮುಂಜೂರು ಮಾಡಿದ್ದೇನೆ. ಬಿಜೆಪಿ ಸರ್ಕಾರ ಬಂದಾಗ ಆ ಯೋಜನೆಯಲ್ಲಿ ನಿಲ್ಲಿಸಿಬಿಟ್ಟಿತ್ತು. ಈಗ ಮತ್ತೆ ನಮ್ಮದೇ ಕಾಂಗ್ರೆಸ್‌ ಸರ್ಕಾರದಲ್ಲಿ ಕಾಂಗ್ರೆಸ್‌ ಶಾಸಕ ಶ್ರೀನಿವಾಸರ ಮನವಿಯ ಮೇರೆಗೆ ಈಗ ಮತ್ತೆ ನಾನೇ ಆರಂಭಿಸಿದ್ದು ಪೂರ್ಣಗೊಳಿಸುತ್ತೇವೆ ಎಂದು ಹೇಳಿದರು.

ಸಿಎಂ ಬದಲಾವಣೆ ಇಲ್ಲ:

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನಮ್ಮನ್ನು ಕೇಳಬೇಡಿ, ಹಿರಿಯ ಶಾಸಕರು ದೆಹಲಿಗೆ ಹೋಗಿರುವುದು ಸಚಿವ ಸ್ಥಾನ ಕೇಳಲು, ಮುಖ್ಯಮಂತ್ರಿ ಬದಲಾವಣೆಗಲ್ಲ, ಶಾಸಕರು ಸಚಿವ ಸ್ಥಾನ ಕೇಳುವುದು ಸರ್ವೆ ಸಾಮಾನ್ಯ ಅದರಲ್ಲಿ ತಪ್ಪೇನಿಲ್ಲ. ಹೈಕಮಾಂಡ್ ಹೇಳಿದರೆ ನಾನು ನನ್ನ ಸಚಿವ ಸ್ಥಾನ ಬಿಟ್ಟುಕೊಡುತ್ತೇನೆ. ರಾಜಣ್ಣರಂತೆ ಜಮೀರ್ ತಲೆತಂಡ ಅಂತ ಏಕೆ ಹೇಳುತ್ತೀರಾ, ಜಮೀರ್ ಪ್ರಚಾರಕ್ಕೆ ಹೋಗಿದ್ದರು ನಿಮ್ಮ ಮಾಧ್ಯಮಗಳಲ್ಲಿಯೇ ತೋರಿಸಿದ್ದೀರಾ, ಹೈಕಮಾಂಡ್ ದೂರಿನ ವಿಚಾರ ನನಗೆ ಗೊತ್ತಿಲ್ಲ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಮಾತನಾಡಿ, ಸೋಲೂರು ಜನರ ಸಂಕಷ್ಟವನ್ನು 2008ರಿಂದ ನಾನು ನೋಡಿದ್ದೇನೆ. ನೆಲಮಂಗಲಕ್ಕೆ ಸೋಲೂರು ಸೇರ್ಪಡೆಗೆ ಶಾಸಕ ಎನ್.ಶ್ರೀನಿವಾಸ್ ಬಹಳಷ್ಟು ಕಷ್ಟಪಟ್ಟಿದ್ದಾರೆ. ಅದಕ್ಕೆ ರಾಮಲಿಂಗಾರೆಡ್ಡಿ ಅವರ ಸಹಕಾರ ನೀಡಿರುವುದು ಬಹಳಷ್ಟು ಶಕ್ತಿ ಬಂದಿದೆ. ಇದು ಐತಿಹಾಸಿಕ ನಿರ್ಣಯ ಎಂದು ಹೇಳಿದರು.

ಸಿಲೆಂಡರ್ ಕೊರತೆ ಕೇಂದ್ರ ಬಗೆಹರಿಸಬೇಕು: ಎಲ್‍ಪಿಜಿ ಸಂಕಷ್ಟ ಎದುರಾಗುವ ಲಕ್ಷಣಗಳಿದೆ. ಎಲ್‍ಪಿಜಿ ಕೇಂದ್ರ ಸರಕಾರ ಸರಬರಾಜು ಮಾಡಿದರೇ ನಾವು ವಿತರಣೆ ಮಾಡುತ್ತೇವೆ. ಎಲ್‍ಪಿಜಿ ಸರಬರಾಜಿಗೂ ನಮಗೂ ಸಂಬಂಧವಿಲ್ಲ. ಮಿತ ಬಳಕೆಯನ್ನು ಜನರು ಮಾಡಬೇಕು. ತಕ್ಷಣ ಸಿಲೆಂಡರ್ ಸಮಸ್ಯೆಯನ್ನು ಕೇಂದ್ರ ಬಗೆಹರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಎನ್ ಅನುರಾಧ, ಉಪವಿಭಾಗಾಧಿಕಾರಿ ದುರ್ಗಾಶ್ರೀ, ನಗರಸಭೆ ಅಧ್ಯಕ್ಷ ಗಣೇಶ್, ಎನ್‍ಪಿಎ ಅಧ್ಯಕ್ಷ ಎಂ.ಕೆ ನಾಗರಾಜು, ಮಾಜಿ ಅಧ್ಯಕ್ಷ ನಾರಾಯಣಗೌಡ, ಹೇಮಂತ್‍ಕುಮಾರ್, ಟಿಎಪಿಸಿಎಂಎಸ್ ಅಧ್ಯಕ್ಷ ಹನುಮಂತರಾಜು, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು, ಜನಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು.

ಬಾಕ್ಸ್‌........

ಸೋಲೂರು ದಾಖಲೆಗಳ ಹಸ್ತಾಂತರ

ಬೆಂಗಳೂರು ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಅಪರ ಜಿಲ್ಲಾಧಿಕಾರಿ, ಮಾಗಡಿ ತಹಸೀಲ್ದಾರ್ ಸೇರಿದಂತೆ ಅಧಿಕಾರಿಗಳು ಸೋಲೂರು ನೆಲಮಂಗಲಕ್ಕೆ ಸೇರ್ಪಡೆಯಾಗಿರುವ ಬಗ್ಗೆ ಪ್ರಮಾಣ ಪತ್ರ ಹಾಗೂ ಸೋಲೂರು ದಾಖಲೆಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ, ಶಾಸಕ ಎನ್.ಶ್ರೀ ನಿವಾಸ್, ಜಿಲ್ಲಾಧಿಕಾರಿ ಡಾ. ಅನುರಾಧ, ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರವರಿಗೆ ಹಸ್ತಾಂತರ ಮಾಡಿದರು.

ವಾರದಲ್ಲಿ ಆನ್‍ಲೈನ್‍ನಲ್ಲಿ ದಾಖಲೆಗಳ ಬದಲಾವಣೆ:

ಸೋಲೂರು ಭಾಗದ 45 ಬೂತ್‍ಗಳನ್ನು ನಾವು ನಿರ್ವಹಣೆ ಮಾಡುತ್ತಿದೇವು, ಈಗ ಆಡಳಿತಾತ್ಮಕವಾಗಿ ನೆಲಮಂಗಲಕ್ಕೆ ಸೇರ್ಪಡೆಯಾಗಿರುವುದರಿಂದ 42 ಸಾವಿರ ಜನಸಂಖ್ಯೆ, 68 ಕಂದಾಯ ಗ್ರಾಮ ಸೇರಿದಂತೆ 152ಉಪಗ್ರಾಮಗಳು, 20ಸಾವಿರ ಪಹಣಿ, 15 ಸಾವಿರ ರೈತರು, 184 ಕಂದಾಯ ಇಲಾಖೆ ಕೇಸ್‍ಗಳು ಸೇರಿದಂತೆ ಎಲ್ಲಾ ಇಲಾಖೆಗಳು ನೆಲಮಂಗಲಕ್ಕೆ ಹಸ್ತಾಂತರವಾಗಿದ್ದು, ಮುಂದಿನ ಸೋಮವಾರದಲ್ಲಿ ನೆಲಮಂಗಲ ತಾಲೂಕಿನ ಸೋಲೂರು ಎಂಬುದಾಗಿ ಪಹಣಿ ಬದಲಾವಣೆಯಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಅನುರಾಧ ತಿಳಿಸಿದರು.

ಕೋಟ್‌...............

ಚುನಾವಣೆಯಲ್ಲಿ ಕೊಟ್ಟಮಾತು ಉಳಿಸಿಕೊಂಡಿದ್ದೇನೆ. 47 ವರ್ಷಗಳ ಸೋಲೂರು ಜನರ ಸಂಕಷ್ಟ ಇಂದಿಗೆ ಬಗೆಹರಿದಿದೆ. ಸೋಲೂರು ಸೇರ್ಪಡೆಗೆ ಸಹಕರಿಸಿದ ಸಿಎಂ, ಡಿಸಿಎಂ, ಸಚಿವರಾದ ಕೃಷ್ಣಬೈರೇಗೌಡರು, ರಾಮಲಿಂಗಾರೆಡ್ಡಿಯವರು, ಕೆ.ಎಚ್‍ಮುನಿಯಪ್ಪನವರು, ಎಂಎಲ್‍ಸಿ ರವಿ, ಬಮೂಲ್ ಅಧ್ಯಕ್ಷ ಡಿ.ಕೆ ಸುರೇಶ್, ಮಾಗಡಿ ಶಾಸಕ ಬಾಲಕೃಷ್ಣರವರು ಹಾಗೂ ಜಿಲ್ಲಾಧಿಕಾರಿ, ತಹಸೀಲ್ದಾರ್ ಸಹಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ. ಒಂದು ತಿಂಗಳಲ್ಲಿ ಪಂಚಾಯಿತಿ ಮಟ್ಟದಲ್ಲಿ ಜನಸಂಪರ್ಕ ಸಭೆ ಮಾಡಲಾಗುತ್ತದೆ. ಪ್ರತಿ ಮನೆಗೂ ಸಿಹಿ ತಲುಪಿಸಿ ಅಭಿನಂದನೆ ಸಲ್ಲಿಸಲಾಗುತ್ತದೆ.

-ಎನ್.ಶ್ರೀನಿವಾಸ್, ಶಾಸಕರು, ನೆಲಮಂಗಲ

ಪೋಟೋ 5:

ಮಾಗಡಿಯಿಂದ ಸೋಲೂರು ನೆಲಮಂಗಲಕ್ಕೆ ಸೇರ್ಪಡೆಯಾದ ಪ್ರಮಾಣ ಪತ್ರವನ್ನು ಶಾಸಕ ಎನ್.ಶ್ರೀನಿವಾಸ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು.

ಪೋಟೋ 7 : ಶಾಸಕ ಎನ್.ಶ್ರೀನಿವಾಸ್ (ಬಾಕ್ಸ್ ಗೆ)