ಅಧಿಕಾರಿಗಳಿಗೆ ಹಂದಿಯ ಹಾವಳಿ, ಗಟಾರಗಳ ಗಬ್ಬು ವಾಸನೆ ದರ್ಶನ

| Published : Jun 30 2024, 12:56 AM IST

ಅಧಿಕಾರಿಗಳಿಗೆ ಹಂದಿಯ ಹಾವಳಿ, ಗಟಾರಗಳ ಗಬ್ಬು ವಾಸನೆ ದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಹಾನಗಲ್ಲ ಸ್ವಚ್ಛತೆಯ ದೋಷ ಪರಿಶೀಲನೆಗಾಗಿ ತಾಲೂಕು ವೈದ್ಯಾಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಪಟ್ಟಣದ ನವನಗರ ಬಡಾವಣೆಗೆ ತೆರಳಿದಾಗ, ಸಾರ್ವಜನಿಕರು ಹಂದಿಯ ಹಾವಳಿ, ಗಟಾರಗಳ ಗಬ್ಬು ವಾಸನೆ, ನಾಲ್ಕಾರು ತಿಂಗಳಿನಿಂದ ಗಟಾರ ಸ್ವಚ್ಛಗೊಳಿಸದಿರುವುದನ್ನು ಪ್ರಸ್ತಾಪಿಸಿ ಸ್ವಚ್ಛತೆಗೆ ಆದ್ಯತೆ ನೀಡಲು ಬೇಡಿಕೊಂಡರು.

ಹಾನಗಲ್ಲ: ನಗರದ ಸ್ವಚ್ಛತೆಯ ದೋಷ ಪರಿಶೀಲನೆಗಾಗಿ ತಾಲೂಕು ವೈದ್ಯಾಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಪಟ್ಟಣದ ನವನಗರ ಬಡಾವಣೆಗೆ ತೆರಳಿದಾಗ, ಸಾರ್ವಜನಿಕರು ಹಂದಿಯ ಹಾವಳಿ, ಗಟಾರಗಳ ಗಬ್ಬು ವಾಸನೆ, ನಾಲ್ಕಾರು ತಿಂಗಳಿನಿಂದ ಗಟಾರ ಸ್ವಚ್ಛಗೊಳಿಸದಿರುವುದನ್ನು ಅಧಿಕಾರಿಗಳ ಮುಂದೆ ಪ್ರಸ್ತಾಪಿಸಿ ಸ್ವಚ್ಛತೆಗೆ ಆದ್ಯತೆ ನೀಡಲು ಬೇಡಿಕೊಂಡರು.ಡೆಂಘೀ ಜಾಗೃತಿ ಹಾಗೂ ಪ್ರಕರಣಗಳ ಕುರಿತು ನಡೆದ ಚರ್ಚೆಯ ಬಳಿಕ ನವನಗರ ಬಡಾವಣೆಗೆ ತಾಲೂಕು ವೈದ್ಯಾಧಿಕಾರಿ ಡಾ. ಲಿಂಗರಾಜ ಹಾಗೂ ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಸಿಬ್ಬಂದಿಯೊಂದಿಗೆ ತೆರಳಿದಾಗ ನವನಗರದ ಖುರ್ಷಿದಾಬಾನು ಕಬ್ಬೂರ ಎಂಬ ನಾಗರಿಕರು ಅಧಿಕಾರಿಗಳಿಗೆ ಅಲ್ಲಿನ ಮಲೀನ ಗಟಾರಗಳು ಹಾಗೂ ಗಲೀಜು ನೀರು ಸಂಗ್ರಹದ ದೃಶ್ಯಗಳನ್ನು ಗಮನಕ್ಕೆ ತಂದು, ಇಲ್ಲಿನ ಜನರು ದುರ್ವಾಸನೆಯಲ್ಲಿಯೇ ವಾಸಿಸುವಂತಾಗಿದೆ. ೩-೪ ತಿಂಗಳಿಗೊಮ್ಮೆ ಇಬ್ಬರು ಮೂವರು ಪುರಸಭೆ ಕಾರ್ಮಿಕರು ಬಂದು ತಮಗಾದಷ್ಟು ಗಟಾರಗಳ ಸ್ವಚ್ಛಗೆ ಮಾಡಿ ಹೋಗುತ್ತಾರೆ. ಮತ್ತೆ ಈ ಕಡೆಗೆ ನೋಡುವುದೇ ಇಲ್ಲ. ಪುರಸಭೆ ಅಧಿಕಾರಿಗಳಂತೂ ಇತ್ತ ಕಡೆ ಹಾಯುವುದೇ ಇಲ್ಲ. ನಾವು ಯಾರಿಗೆ ಹೇಳಬೇಕು. ಇನ್ನು ಮುಂದಾದರೂ ಸ್ವಚ್ಛತೆಗೆ ಅವಕಾಶ ಮಾಡಿಕೊಡಿ. ಬಡವರ ಆರೋಗ್ಯದ ಬಗೆಗೆ ಕಾಳಜಿ ಇರಲಿ ಎಂದು ಮನವಿ ಮಾಡಿದರು.ಇಡೀ ನವನಗರ ಬಡಾವಣೆಯ ಓಣಿಗಳಲ್ಲಿ ಅಧಿಕಾರಿಗಳು ಸಂಚರಿಸಿ ವಾಸ್ತವವನ್ನು ನೋಡಿದರಾದರೂ ಇದರ ಸ್ವಚ್ಛತಗೆ ಆದ್ಯತೆ ನೀಡುವ ಭರವಸೆ ಮಾತ್ರ ಸಿಗಲಿಲ್ಲ. ಸಿಬ್ಬಂದಿಯ ಕೊರತೆ ಎಂದು ಪುರಸಭೆ ಮುಖ್ಯಾಧಿಕಾರಿ ಅಳಲು ತೋಡಿಕೊಂಡರು. ವೈದ್ಯಾಧಿಕಾರಿಗಳು ಇದು ಗಂಭೀರ ಸಮಸ್ಯೆ. ಆದರೆ ನನ್ನ ಜವಾಬ್ದಾರಿ ಅಲ್ಲ ಎಂದರು. ಒಂದು ಗಂಟೆಯ ಕಾಲ ನವನಗರ ಬಡಾವಣೆಯಲ್ಲಿ ನಡೆಸಿ ಸ್ವಚ್ಛತೆಯ ಪರಿಶೀಲನೆ ಅಧಿಕಾರಿಗಳಿಗೆ ಮುಜುಗುರ ಉಂಟು ಮಾಡಿತು.ಹಿಂಡು ಹಂದಿಗಳು: ನವನಗರ ಬಡಾವಣೆಯಲ್ಲಿ ಹಿಂಡು ಹಿಂಡಾಗಿ ಹಂದಿಗಳು ಓಡಾಡಿಕೊಂಡಿದ್ದರೂ ಕೂಡ ಅವುಗಳನ್ನು ಹೊರ ಹಾಕುವ ಪ್ರಯತ್ನ ನಡೆಯುತ್ತಿಲ್ಲ. ಡೆಂಘೀ, ಕಾಲರಾದಂತಹ ರೋಗ ಬಾಧೆಯ ಚರ್ಚೆ ನಡೆಯುತ್ತಿದ್ದರೂ ಕೂಡ ಪುರಸಭೆ ಹಂದಿ ಹೊರ ಹಾಕಲು ಇರುವ ಆತಂಕ ಏನು ಎಂದು ಮಾತ್ರ ಯಾರಿಗೂ ಅರ್ಥವಾಗುತ್ತಿಲ್ಲ. ಊರ ತುಂಬ ಇರುವ ಹಂದಿಗಳ ನಿಯಂತ್ರಣಕ್ಕೆ ಸಂಬಂಧಿಸಿದ ಅಧಿಕಾರಿಗಳು ಮುಂದಾಗದಿದ್ದರೆ ಸಾರ್ವಜನಿಕರು ಪ್ರತಿಭಟನೆಗೆ ಮುಂದಾಗುವ ಅನಿವಾರ್ಯತೆ ಇದೆ.ನವನಗರದ ಬಗ್ಗೆ ಯಾರದೂ ಕಾಳಜಿ ಇಲ್ಲ. ಇಲ್ಲಿ ಬಡವರೇ ಬಹುಪಾಲು ಇದ್ದಾರೆ. ಕೂಲಿ ನಾಲಿ ಮಾಡಿ, ಊರು ಸುತ್ತಿ ಸಣ್ಣ ಪುಟ್ಟ ವ್ಯಾಪಾರ ಮಾಡುವ ಜನ. ಬೆಳಗಾದರೆ ಹೊಟ್ಟೆ ಪಾಡಿಗೆ ವ್ಯಾಪಾರಕ್ಕೆ ಹೋಗುತ್ತಾರೆ. ಸಂಜೆ ಮನೆಗೆ ಬಂದರೆ ಹೊಟ್ಟೆಯ ಬವಣೆಯಲ್ಲಿ ತಮ್ಮನ್ನೇ ಮರೆತು ಬಿಡುತ್ತಾರೆ. ಹೀಗಾಗಿ ಅಧಿಕಾರಿಗಳನ್ನು ಕೇಳುವವರಿಲ್ಲ. ನಮ್ಮಂತಹವರು ಸ್ವಚ್ಛತೆಗಾಗಿ ಹೇಳಿದರೂ ಕೇಳಿಸಿಕೊಳ್ಳದೇ ಹೋಗುತ್ತಾರೆ. ಇದು ಬಡವರ ಬಡಾಣೆಯ ಬದುಕು ಎಂದು ನವನಗರದ ಖುರ್ಷಿದಾಬಾನು ಕಬ್ಬೂರ ಹೇಳಿದರು.ಸ್ವಚ್ಛತೆಗೆ ಪ್ರಯತ್ನಿಸುತ್ತಿದ್ದೇವೆ. ಸಿಬ್ಬಂದಿ ಕೊರತೆ ಇದೆ. ಹಣಕಾಸು ಸಮಸ್ಯೆಯೂ ಇದೆ. ಇದ್ದ ಕಾರ್ಮಿಕರಿಂದಲೇ ಎಲ್ಲವನ್ನು ನಿಭಾಯಿಸುತ್ತಿದ್ದೇವೆ. ಹೊರಗುತ್ತಿಗೆ ಸಿಬ್ಬಂದಿ ನೇಮಿಸಿಕೊಂಡು ಸ್ವಚ್ಛತೆಗೆ ಆದ್ಯತೆ ನೀಡುತ್ತೇವೆ. ಚರಂಡಿಯ ಗಲೀಜು ನೀರು ನಿರ್ವಹಣೆಗೆ ಹೊಸ ಯೋಜನೆ ರೂಪಿಸುತ್ತಿದ್ದೇವೆ ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಹೇಳಿದರು.