ಆಯಕ್ತರಿಗೆ ಹದಗೆಟ್ಟ ರಸ್ತೆಯ ವಸ್ತುಸ್ಥಿತಿ ದರ್ಶನ

| Published : Oct 14 2025, 01:00 AM IST

ಆಯಕ್ತರಿಗೆ ಹದಗೆಟ್ಟ ರಸ್ತೆಯ ವಸ್ತುಸ್ಥಿತಿ ದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಹೆಬ್ಬಾಳ ಜಂಕ್ಷನ್‌ನಿಂದ ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ವರೆಗಿನ ವರ್ತುಲ ರಸ್ತೆಯಲ್ಲಿ ಗುಂಡಿ ಬಿದ್ದಿರುವ, ಹಾಳಾಗಿರುವ ರಸ್ತೆಯನ್ನು ಸುಸ್ಥಿತಿಯಲ್ಲಿಡುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೆಬ್ಬಾಳ ಜಂಕ್ಷನ್‌ನಿಂದ ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ವರೆಗಿನ ವರ್ತುಲ ರಸ್ತೆಯಲ್ಲಿ ಗುಂಡಿ ಬಿದ್ದಿರುವ, ಹಾಳಾಗಿರುವ ರಸ್ತೆಯನ್ನು ಸುಸ್ಥಿತಿಯಲ್ಲಿಡುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ರಸ್ತೆಯನ್ನು ಖುದ್ದಾಗಿ ಪರಿಶೀಲಿಸಿದ ಅವರು, ವರ್ತುಲ ರಸ್ತೆಯಲ್ಲಿನ ಎಲ್ಲ ಗುಂಡಿಗಳನ್ನು ತಕ್ಷಣ ಮುಚ್ಚಬೇಕು. ರಾಜಕುಮಾರ್ ಸಮಾಧಿಯಿಂದ ನಾಗರಬಾವಿ ಜಂಕ್ಷನ್‌ವರೆಗಿನ ಸರ್ವಿಸ್ ರಸ್ತೆ ಗುಂಡಿಗಳು ಮತ್ತು ಹಾಳಾದ ಮೇಲ್ಮೈಯನ್ನು ಸರಿಪಡಿಸಬೇಕು. ಸಂಪೂರ್ಣ ಹಾಳಾಗಿರುವ ಗೊರಗುಂಟೆಪಾಳ್ಯ ಕೈಗಾರಿಕಾ ಪ್ರದೇಶದ ರಸ್ತೆಯನ್ನು ಶೀಘ್ರ ದುರಸ್ತಿ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಹೆಬ್ಬಾಳ ಜಂಕ್ಷನ್ ಕೆಳಭಾಗದಲ್ಲಿ ವೆಟ್ ಮಿಕ್ಸ್ ಹಾಕಲಾಗಿದ್ದು, ತಕ್ಷಣ ಅದಕ್ಕೆ ಡಾಂಬರೀಕರಣ ಮಾಡಬೇಕು. ಪಾದಚಾರಿಗಳಿಗೆ ಅನುಕೂಲವಾಗಲು ಹೈ ರೈಸ್ ಪಾದಚಾರಿ ಕ್ರಾಸಿಂಗ್ ನಿರ್ಮಿಸಬೇಕು. ಪೊಲೀಸ್ ಠಾಣೆಯ ಬಳಿ ಬಸ್ ನಿಲ್ದಾಣಕ್ಕಾಗಿ ಮೀಸಲಾಗಿರುವ ಜಾಗವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲು ಪರಿಶೀಲಿಸಿ, ಯೋಜನೆ, ವಿನ್ಯಾಸ ರೂಪಿಸಿ ಅನುಷ್ಠಾನಕ್ಕೆ ತರಲು ಮಹೇಶ್ವರ್‌ ರಾವ್‌ ಸೂಚಿಸಿದರು.

ಕೆ-ರೈಡ್‌ ಜತೆ ಸಮನ್ವಯ ಸಾಧಿಸಿ:

ಭದ್ರಪ್ಪ ಲೇಔಟ್ ಮೇಲ್ಸೇತುವೆ ಬಳಿಯ ಸರ್ವಿಸ್ ರಸ್ತೆ ಹಾಳಾಗಿದ್ದು, ಹೈಡೆನ್ಸಿಟಿ ಕಾರಿಡಾರ್ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಕೆ-ರೈಡ್‌ನಿಂದಲೂ ಕಾಮಗಾರಿ ನಡೆಸಲಾಗಿದೆ. ಅವರೊಂದಿಗೆ ಸಮನ್ವಯ ಸಾಧಿಸಿ ಸರ್ವಿಸ್ ರಸ್ತೆ ಸರಿಪಡಿಸಬೇಕು. ರಸ್ತೆ ಬದಿಯ ಡಕ್ಟ್‌ ಚೇಂಬರ್‌ಗಳು ರಸ್ತೆ ಮಟ್ಟಕ್ಕಿಂತ ಕೆಳಗಿದ್ದು, ಕೂಡಲೇ ರಸ್ತೆ ಮಟ್ಟಕ್ಕೆ ತರಬೇಕು ಎಂದು ಆಯುಕ್ತರು ಹೇಳಿದರು.

ಗುತ್ತಿಗೆದಾರರಿಂದಲೇ ಸರಿಪಡಿಸಿ

ಹಾಳಾಗಿರುವ ಬಿಇಎಲ್ ಜಂಕ್ಷನ್‌ನ ಮೇಲ್ಮೈ ಅನ್ನು ವೈಟ್ ಟಾಪಿಂಗ್ ಗುತ್ತಿಗೆದಾರರಿಂದಲೇ ಸರಿಪಡಿಸಬೇಕು. ಮತ್ತಿಕೆರೆ ಕಡೆಗೆ ಹೋಗುವ ಭಾಗದಲ್ಲಿ ಪಾದಚಾರಿ ಮಾರ್ಗವನ್ನು ಅಗಲೀಕರಣ ಮಾಡಬೇಕು ಎಂದು ರಾವ್‌ ಸೂಚಿಸಿದರು.

ಕಸದ ರಾಶಿ, ಕಟ್ಟಡ ಕಾಮಗಾರಿ ತ್ಯಾಜ್ಯ, ಜಲಮಂಡಳಿ ಪೈಪ್‌ಗಳಿಂದ ರಸ್ತೆ ನೀರು ಹರಿಯುತ್ತಿದ್ದು, ರಿಂಗ್ ರಸ್ತೆಯ ವಿವಿಧ ಜಂಕ್ಷನ್‌ಗಳಲ್ಲಿ ವಿವಿಧ ತ್ಯಾಜ್ಯಗಳು, ಅನಾಥ ವಾಹನಗಳು, ಪಾದಚಾರಿ ಮಾರ್ಗಕ್ಕೆ ಅಡ್ಡಲಾಗಿ ಇರುವ ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಳಾಂತರಗೊಳಿಸಬೇಕು. ಸುಮ್ಮನಹಳ್ಳಿ ಜಂಕ್ಷನ್ ಮೇಲ್ಸೇತುವೆ ಕೆಳಭಾಗದಲ್ಲಿನ ಕಸ ವರ್ಗಾವಣೆ ಘಟಕದಲ್ಲಿ ಲೀಚೇಟ್‌ನಿಂದ ದುರ್ವಾಸನೆ ಉಂಟಾಗಿದೆ. ಜೆಟ್ ಸ್ಪ್ರೇಯರ್ ಮೂಲಕ ಸ್ವಚ್ಛಗೊಳಿಸಬೇಕು ಎಂದು ಆಯುಕ್ತರು ಸೂಚಿಸಿದರು. ಈ ಸಂದರ್ಭದಲ್ಲಿ ಶಾಸಕ ರವಿ ಸುಬ್ರಮಣ್ಯ, ಜಿಬಿಎ ಅಧಿಕಾರಿಗಳು ಉಪಸ್ಥಿತರಿದ್ದರು.