ಸಾರಾಂಶ
ಲಕ್ಷ್ಮೇಶ್ವರ:ಸಮೀಪದ ಗೊಜನೂರ ಗುಡ್ಡದ ಮಣ್ಣನ್ನು ರೈತ ಸಂಪರ್ಕ ರಸ್ತೆಗಳ ದುರಸ್ತಿಗೆ ತೆಗೆದುಕೊಂಡು ಹೋಗಲು ಕಂದಾಯ ಅಧಿಕಾರಿಗಳು ಬಿಡುತ್ತಿಲ್ಲ. ಗೊಜನೂರ ಗುಡ್ಡವು ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಇದ್ದು ಅದರಲ್ಲಿನ ಮಣ್ಣು ತೆಗೆಯಲು ಅಧಿಕಾರಿಗಳು ಬಿಡುತ್ತಿಲ್ಲ, ಇದು ರಸ್ತೆ ಕಾಮಗಾರಿ ಮಾಡುವಲ್ಲಿ ತೊಂದರೆಯಾಗುತ್ತಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಸೋಮವಾರ ಪಟ್ಟಣದ ತಾಲೂಕು ಪಂಚಾಯತಿಯ ಸಾಮರ್ಥ್ಯ ಸೌಧದಲ್ಲಿ ಕೆ.ಡಿ.ಪಿ.ಸಭೆಯು ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.ಸಭೆ ಆರಂಭವಾಗುತ್ತಿದ್ದಂತೆ ಲಕ್ಷ್ಮೇಶ್ವರ ಪಟ್ಟಣದ ಹಳ್ಳದ ಕೇರಿ ಓಣಿಯ ರೈತರು ಸಂಭಾಗಣದಲ್ಲಿ ಬಂದು ರೈತರಿಗೆ ಅತ್ಯಂತ ಪ್ರಮುಖವಾದ ಅಣ್ಣಿಗೇರಿ ಮಾದರಿಯಲ್ಲಿ ರಸ್ತೆ ದುರಸ್ತಿಗೊಳಿಸುವಂತೆ ಹಲವು ಬಾರಿ ಒತ್ತಾಯಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ರಸ್ತೆ ಹಾಳಾಗಿದ್ದರಿಂದ ಕಳೆದ ಹಂಗಾಮಿನಲ್ಲಿ ರೈತರು ಬೆಳೆದ ಬೆಳೆಯನ್ನು ಮನೆಗೆ ತರಲು ಆಗದೆ ಕೈಬಂದ ತುತ್ತು ಬಾಯಿಗೆ ಬಾರದಂತಾಗಿ ಹಾಳಾಗಿ ಹೋದವು. ಈ ರಸ್ತೆ ದುರಸ್ತಿಗೆ 50 ರಿಂದ 100 ಟಿಪ್ಪರ ಮಣ್ಣುಬೇಕಾಗಿದ್ದು ಅದನ್ನು ಗೊಜನೂರು ಗುಡ್ಡದಿಂದ ಹೆರುವಂತೆ ಮನವಿ ಮಾಡಿದರು.ಈ ವೇಳೆ ಶಾಸಕರು ಮಾತನಾಡಿ, ಗೊಜನೂರ ಗುಡ್ಡವು ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುತ್ತಿದ್ದು, ಹೀಗಾಗಿ ಅಧಿಕಾರಿಗಳು ಮಣ್ಣು ಹೇರಲು ಬಿಡುತ್ತಿಲ್ಲ, ಗಣಿ ಮತ್ತು ಭೂಗರ್ಭ ಇಲಾಖೆಯ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು. ಕಂದಾಯ ಇಲಾಖೆಗೆ ಕಟ್ಟಬೇಕಾದ ರಾಜಸ್ವ ಕಟ್ಟಲು ನಾವು ಸಿದ್ಧರಿದ್ದರೂ ಮಣ್ಣು ಸಿಗುತ್ತಿಲ್ಲ. ಗುಡ್ಡದ ಮಣ್ಣನ್ನು ಕೆಲವರು ಕದ್ದು ಮುಚ್ಚಿ ಹೇರುತ್ತಿದ್ದಾರೆ. ಅಧಿಕಾರಿಗಳು ಅಂತವರಿಗೆ ನಿರ್ಬಂಧ ಹೇರುವ ಮೂಲಕ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೆ ರೈತರ ರಸ್ತೆ ದುರಸ್ತಿಗಾಗಿ ಮಣ್ಣು ಹೇರಲು ಅನುಮತಿ ಕೊಡಿ ಎಂದು ಜಿಲ್ಲಾಧಿಕಾರಿಗಳಿಗೆ ತಾವೆ ಪತ್ರ ಬರೆದಿದ್ದರೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಹರಿ ಹಾಯ್ದುದರು.
ಈ ವೇಳೆ ಬಾಲೆಹೊಸೂರ ಸೂರಣಗಿ ಸಂಪರ್ಕ ಕಲ್ಪಿಸುವ 4 ಕಿಮೀ ರಸ್ತೆ ದುರಸ್ತಿ ಮಾಡಿಸಿದ್ದೇವೆ ಎಂದು ಹೇಳುತ್ತಿದ್ದಂತೆ ಸಭೆಗೆ ಆಗಮಿಸಿದ್ದ ಬಾಲೆಹೊಸೂರಿನ ರೈತ ಸಂಘಟನೆಯ ಸದಸ್ಯರು ಶಾಸಕರು ಈ ರಸ್ತೆ ದುರಸ್ತಿ ಮಾಡಿಸಿಲ್ಲ. ಸುಳ್ಳು ಹೇಳುವುದು ಸರಿಯಲ್ಲ ಎಂದು ಶಾಸಕರೊಂದಿಗೆ ವಾಗ್ವಾದಕ್ಕೆ ಇಳಿದರು. ಈ ಹಂತದಲ್ಲಿ ಕೆ.ಡಿ.ಪಿ.ಸಭೆ ಗೊಂದಲದ ಗೂಡಾಗಿ ಕಂಡು ಬಂದಿತು. ಈ ವೇಳೆ ಸಭಾಂಗಣದಲ್ಲಿದ್ದ ಪೊಲೀಸರು ಮಧ್ಯ ಪ್ರವೇಶಿಸಿ ಎಲ್ಲರನ್ನು ಸಮಾಧಾನ ಪಡಿಸಿ ವಾತಾವರಣ ತಿಳಿಗೊಳಿಸಿದರು.ನಂತರ ಶಾಸಕರು ತಹಸೀಲ್ದಾರ್, ಗಣಿ ಮತ್ತು ಭೂ ಇಲಾಖೆಯ ಅಧಿಕಾರಿ ನಾಗಭೂಷಣ ಅವರಿಗೆ ಸೂಚನೆ ನೀಡಿ ಕಾನೂನು ರೀತಿ ರೈತ ಸಂಪರ್ಕ ರಸ್ತೆಗಳಿಗೆ ಮಣ್ಣು ಹೇರಲು ತ್ವರಿತವಾಗಿ ಅವಕಾಶ ಕಲ್ಪಿಸು ನಿಟ್ಟಿನಲ್ಲಿ ಕ್ರಮ ಜರುಗಿಸಬೇಕು ಎಂದು ಹೇಳಿದರು. ಆಗ ಕೆಡಿಪಿ ನಾಮ ನಿರ್ದೇಶನ ಸದಸ್ಯ ಶಿವರಾಜಗೌಡ ಪಾಟೀಲ್, ವಿಜಯ ಹಳ್ಳಿ, ರಾಮಣ್ಣ ಲಮಾಣಿ ಅವರು ಗೊಜನೂರು ಗುಡ್ಡದ ಮಣ್ಣನ್ನು ಅಕ್ರಮವಾಗಿ ಸಾಕಷ್ಟು ಜನರು ಹೇರುತ್ತಿದ್ದಾರೆ. ಆದ್ದರಿಂದ ಗುಡ್ಡದಲ್ಲಿ ಎರಡು ಎಕರೆ ಪ್ರದೇಶವನ್ನು ಗುರುತಿಸಿ ಕೆರೆ ನಿರ್ಮಾಣ ಮಾಡಬೇಕು. ಇದರಿಂದ ಗುಡ್ಡದ ನೀರು ವ್ಯರ್ಥವಾಗಿ ಹರಿದು ಹೋಗುವುದು ತಪ್ಪುತ್ತದೆ, ಕೆರೆಯಲ್ಲಿ ನೀರು ನಿಂತು ಅಂತರ್‌ಜಲದ ಮಟ್ಟ ಹೆಚ್ಚಳವಾಗುತ್ತದೆ, ಅಲ್ಲದೆ ಇದರಿಂದ ರಸ್ತೆಗೆ ದುರಸ್ತಿಗಳಿಗೆ ಹಾಗೂ ರೈತರಿಗೆ ಮಣ್ಣು ಹೇರಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.ನಂತರ ನಡೆದ ಸಭೆಯಲ್ಲಿ ವಿಶೇಷವಾರು ಪಟ್ಟಿಯನ್ನು ಕೈಗೆತ್ತಿಕೊಂಡು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರೇವಣ್ಣಪ್ಪ ಮನಗೊಳಿ ಅವರಿಗೆ ಶಾಸಕರು ಸೂಚನೆ ನೀಡಿ ಮುಂಗಾರು ಹಂಗಾಮಿಗೆ 6 ಸಾವಿರ ಮೆಟ್ರಿಕ್ ಟನ್ ಗೊಬ್ಬರ ಅವಶ್ಯಕತೆ ಇದೆ ಹಾಗೂ ಬಿತ್ತನೆ ಬೀಜಗಳನ್ನು ಮುಂಗಡವಾಗಿ ತರಿಸಿ ಗೊಂದಲ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆಯ ಎಇಇ ಫಕ್ಕೀರೇಶ ತಿಮ್ಮಾಪುರ ಅವರು ಇಲಾಖೆಯ ವಿವರಣೆ ನೀಡುತ್ತಿದ್ದಾಗ ತಾಲೂಕಿನಲ್ಲಿ ಇಲಾಖೆಯ ಎಲ್ಲಾ ರಸ್ತೆಗಳು ಹದಗೆಟ್ಟು ಹಳ್ಳಹಿಡಿದು ಹೋಗಿದೆ ಗುಂಡಿ ಮುಚ್ಚಲು, ಡಾಂಬರ್ ಹಾಕಲು ಮತ್ತು ಜಂಗಲ ಕಟಿಂಗಗಾಗಿ ಎಷ್ಟು ಅನುದಾನ ಬಿಡುಗಡೆಯಾಗಿದೆ. ಯಾರಯಾರಿಗೆ ಟೆಂಡರ್ ಆಗಿವೆ ಎಂಬ ಮಾಹಿತಿ ಕೊಡಿ, ಎಲ್ಲಿಯೂ ಕೆಲಸ ಪರಿಪೂರ್ಣ ಆಗಿಲ್ಲ ಎಂದು ವಿಜಯ ಹಳ್ಳಿ, ರಾಮಣ್ಣ ಲಮಾಣಿ, ರಫೀಕ್ ಕಲಬರ್ಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಸಭೆಯಲ್ಲಿ ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯ ರಾಜ್ಯ ಇಲಾಖೆ, ಹೆಸ್ಕಾಂ, ಸಾರಿಗೆ ಇಲಾಖೆ, ಆರೋಗ್ಯ ಇಲಾಖೆ, ಗ್ರಾಮೀಣ ಕುಡಿಯು ನೀರು ಸರಬರಾಜು ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳ ಚರ್ಚೆ ನಡೆದವು.
ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಓಗಳು ಭಾಗವಹಿಸಿದ್ದರು. ವೇದಿಕೆಯ ಮೇಲೆ ತಹಸೀಲ್ದಾರ್ ವಾಸುದೇವಸ್ವಾಮಿ, ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ, ಗಣಿ ಮತ್ತು ಭೂ ಇಲಾಖೆಯ ನಾಗಭೂಷಣ ಇದ್ದರು.