ದೇಹತ್ಯಾಗ ಮಾಡುತ್ತಿದ್ದ ಕುಟುಂಬದವರ ಮನವೊಲಿಸಿದ ಅಧಿಕಾರಿಗಳು

| Published : Aug 24 2025, 02:00 AM IST

ಸಾರಾಂಶ

ಬಾಬಾರವರ ಆಧ್ಯಾತ್ಮಿಕದತ್ತ ಒಲವು ಹೊಂದಿದ್ದ ಕುಟುಂಬವೊಂದು ಸೆ.8 ರಂದು ದೇಹತ್ಯಾಗ ಮಾಡುವ ನಿರ್ಧಾರ ಮಾಡಿತ್ತು. ನಂತರ ಈ ವಿಷಯ ತಿಳಿದು ತಾಲೂಕು ಆಡಳಿತ ತಹಸೀಲ್ದಾರ್‌ ನೇತೃತ್ವದ ಅಧಿಕಾರಿಗಳ ತಂಡ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಅನಂತಪುರದ ಈರಕರ ಅವರ ನಿವಾಸಕ್ಕೆ ತೆರಳಿ ಮನವೊಲಿಸುವಲ್ಲಿ ಯಶಸ್ವಿಯಾಯಿತು.

ಕನ್ನಡಪ್ರಭ ವಾರ್ತೆ ಕಾಗವಾಡ

ಅನಂತಪುರ ಗ್ರಾಮದ ಈರಕರ ತೋಟದ ವಸತಿಯಲ್ಲಿ ವಾಸವಿರುವ ತುಕಾರಾಮ ಈರಕರ ಅವರ ಕುಟುಂಬ ಈ ನಿರ್ಧಾರಕ್ಕೆ ಬಂದಿತ್ತು. ಇವರು ಹರಿಯಾಣದ ವಿವಾದಾತ್ಮಕ ಧಾರ್ಮಿಕ ನಾಯಕ ಬಾಬಾ ರಾಮಪಾಲ್ ಮಹಾರಾಜನ ಭಕ್ತರಾಗಿದ್ದಾರೆ. ಸೆ.8 ರಂದು ನಾವು ಇಲ್ಲಿ ಇರಲ್ಲ. ಬಾಬಾ ಸ್ವತಃ ಬಂದು ನಮ್ಮನ್ನು ದೇಹ ಸಮೇತ ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಾರೆ. ನಾವು ದೇಹ ತ್ಯಾಗ ಮಾಡಲ್ಲ, ಬಾಬಾ ಬಂದು ಮೋಕ್ಷ ಕೊಡುತ್ತಾರೆ ಎಂದು ಕುಟುಂಬದ ಸದಸ್ಯರು ಗ್ರಾಮದಲ್ಲಿ ಹೇಳಿದ್ದರು. ಇದು ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿದ ತಾಲೂಕು ಆಡಳಿತ ಅನಂತಪೂರ ಗ್ರಾಮದ ಅವರ ನಿವಾಸಕ್ಕೆ ಭೇಟಿ ನೀಡಿ ಎಲ್ಲರಂತೆ ಸಾಮಾನ್ಯ ಜೀವನ ನಡೆಸುವಂತೆ ಅವರ ಮನವೊಲಿಸಲು ಯಶಸ್ವಿಯಾಗಿದೆ. ತಹಸೀಲ್ದಾರ್‌ ಸಿದರಾಯ ಭೋಸಗಿ, ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾವಿ, ಕವಲಗುಡ್ಡ ಅಮರೇಶ್ವರ ಮಹರಾಜರು, ಡಿವೈಎಸ್ಪಿ ಪ್ರಶಾಂತ ಮುನ್ನೋಳಿ, ಸಿಪಿಐ ಸಂತೋಷ ಹಳ್ಳೂರ, ವೈದ್ಯಾಧಿಕಾರಿ ಬಸಗೌಡ ಕಾಗೆ ಹಾಗೂ ಹಿರಿಯ ಅಧಿಕಾರಿಗಳ ತಂಡ ಅವರನ್ನು ಭೇಟಿ ಮಾಡಿ ಮನವೊಲಿಸಿತು. ಕುಟುಂಬದ ಸದಸ್ಯರ ಮನಸಿನಲ್ಲಿದ್ದ ಎಲ್ಲಾ ಉಹಾಪೋಹಗಳನ್ನು ತೆಗೆದು ಎಲ್ಲರಂತೆ ಬದುಕು ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.