ಪಟಾಕಿ ದಾಸ್ತಾನು ಗೋದಾಮಿಗೆ ಅಧಿಕಾರಿಗಳ ದಾಳಿ
KannadaprabhaNewsNetwork | Published : Oct 12 2023, 12:00 AM IST
ಪಟಾಕಿ ದಾಸ್ತಾನು ಗೋದಾಮಿಗೆ ಅಧಿಕಾರಿಗಳ ದಾಳಿ
ಸಾರಾಂಶ
ಪಟಾಕಿ ದಾಸ್ತಾನು ಗೋದಾಮಿಗೆ ಅಧಿಕಾರಿಗಳ ದಾಳಿ
ನಗರದ ಎಂ.ಜಿ ರಸ್ತೆಯ ಆಲೇನಳ್ಳಿ ಗ್ರಾಮದ ಪಟಾಕಿ ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಮುಂಜಾಗೃತಾ ಕ್ರಮವಾಗಿ ನಗರದ ವಿವಿಧ ಪಟಾಕಿ ದಾಸ್ತಾನು ಗೋದಾಮಿನ ಮೇಲೆ ಧಿಡೀರ್ ದಾಳಿ ನಡೆಸಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು. ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅತ್ತಿಬೆಲೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಅವಘಡದಿಂದ ಜೀವ ಹಾನಿಯಾಗಿರುವ ಹಿನ್ನೆಲೆಯಲ್ಲಿ ನಗರದ ಎಂ.ಜಿ ರಸ್ತೆಯ ಹೇಮಂತ್ ವೈರೈಟಿಸ್ ಮಾಲೀಕ ಅಕ್ಷಯ್ ಎಂಬುವರಿಗೆ ಸೇರಿದ ಆಲೇನಳ್ಳಿ ಗ್ರಾಮದ ಪಟಾಕಿ ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ 4 ಲಕ್ಷ ಮೌಲ್ಯದ 1000 ಕೆಜಿ ಪಟಾಕಿ ಕಂಡುಬಂದಿದೆ. ಅವರ ತಂದೆ ಹೆಸರಿನಲ್ಲಿರುವ ಪರವಾನಗಿ ವರ್ಗಾವಣೆ ಮಾಡಿಕೊಳ್ಳದಿರುವುದನ್ನು ಪತ್ತೆ ಹಚ್ಚಿದ್ದಾರೆ. ಪಟಾಕಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಂ.ಜಿ ರಸ್ತೆಯ ಜೆ.ಸಿ ಬಾಬುಲಾಲ್ ಮಾಲೀಕತ್ವದ ಷರೀಫ್ ಗಲ್ಲಿಯ ಪಟಾಕಿ ಗೋದಾಮಿನಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು 3.5 ಲಕ್ಷ ಮೌಲ್ಯದ 684 ಕೆಜಿ ಪಟಾಕಿ ಕಂಡು ಬಂದಿದೆ. ನಗರದ ಗುರುನಾಥ ಟಾಕೀಸ್ ರಸ್ತೆಯ ಮಂಜುನಾಥ ಫ್ಯಾನ್ಸಿ ಸ್ಟೋರ್ಸ್‌ನಲ್ಲಿ 10 ಸಾವಿರ ರು. ಮೌಲ್ಯದ 25 ಕೆಜಿ ಪಟಾಕಿ ಪತ್ತೆಯಾಗಿದೆ. ಪಟಾಕಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಪಟಾಕಿ ಅವಘಡಗಳು ಸಂಭವಿಸದಂತೆ ಮುಂಜಾಗ್ರತೆ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಪ್ರತಿ ಜಿಲ್ಲಾಡಳಿತಕ್ಕೆ ಪಟಾಕಿಗಳನ್ನು ಸಂಗ್ರಹಿಸುವ, ಸಾಗಾಣಿಕೆ ಮಾಡುವ ಹಾಗೂ ಮಾರಾಟ ಮಾಡುವ ಸಂದರ್ಭದಲ್ಲಿ ಸೂಕ್ತ ಅನುಮತಿಯನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದಿರುವುದನ್ನು ದೃಢಿಕರಿಸುವುದು. ಕಂದಾಯ, ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗಳ ಪ್ರತಿನಿಧಿಗಳನ್ನೊಳಗೊಂಡ ತಂಡ ಪಟಾಕಿ ಗೋದಾಮುಗಳ ಬಗ್ಗೆ ತಪಾಸಣೆ ನಡೆಸಿ, ಪ್ರಮಾಣೀಕರಿಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಕಂದಾಯ ಉಪ ವಿಭಾಗಾಧಿಕಾರಿ ರಾಜೇಶ್ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ನಗರದ ವಿವಿಧ ಪಟಾಕಿ ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 11 ಕೆಸಿಕೆಎಂ 3 ಚಿಕ್ಕಮಗಳೂರಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಪಟಾಕಿಗಳ ಗೋದಾಮುಗಳ ಮೇಲೆ ಅಧಿಕಾರಿ ಮತ್ತು ಸಿಬ್ಬಂದಿ ದಾಳಿ ನಡೆಸಿ ವಶಕ್ಕೆ ತೆಗೆದುಕೊಂಡರು.