ಕನ್ನಡಪ್ರಭ ವಾರ್ತೆ ಬೇಲೂರು

ಬಿಳಿಸುಳಿ ರೋಗದ ಬಗ್ಗೆ ಅಧಿಕಾರಿಗಳು ಸರ್ವೆ ನಡೆಸಿ, ರೈತರಿಗೆ ಪರಿಹಾರ ಕೊಡಿಸಲು ಸರ್ಕಾರಕ್ಕೆ ವರದಿ ನೀಡಬೇಕು. ಮತ್ತು ಎಲ್ಲ ರೈತರು ಬೆಳೆ ವಿಮೆ ಮಾಡಿಸಲು ಮುಂದಾಗುವಂತೆ ಶಾಸಕ ಎಚ್.ಕೆ.ಸುರೇಶ್ ಸೂಚಿಸಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಂಭಾಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು, ತಿಳಿಸಿ ವಿಮೆ ಕಟ್ಟಲು ಮತ್ತಷ್ಟು ಕಾಲವಕಾಶ ನೀಡಿ ಸರ್ವರ್‌ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದರು. ಜನರ ಸಮಸ್ಯೆಗಳಿಗೆ ಇಲಾಖೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು ಎಂದರು.ರಸ್ತೆ ಕಾಮಗಾರಿಗೆ ಮಾತಿನ ಚಕಮಕಿ:

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ದೇಶಾಣಿ ಆನಂದ್‌ ಮಾತನಾಡಿ, ಮಾಜಿ ಸಚಿವರು ತಂದ ₹ 6 ಕೋಟಿ ವೆಚ್ಚದ ಕಾಮಗಾರಿಯನ್ನು ಮಾಡಿಸದೆ ಶಾಸಕರು ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುತಿದ್ದಾರೆ ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಜಾಗವನ್ನು ಪುರಸಭೆಯಿಂದ ಇನ್ನೂ ಸಂಪೂರ್ಣವಾಗಿ ಹಸ್ತಾಂತರಿಸದಿರುವುದು ವಿಳಂಬಕ್ಕೆ ಕಾರಣವಾಗಿದೆ. ಸಮಸ್ಯೆ ಬಗೆಹರಿದ ನಂತರ ನಾನೇ ಭೂಮಿ ಪೂಜೆ ಮಾಡಲಿದ್ದೇನೆ ಎಂದು ಸ್ಪಷ್ಟಪಡಿಸಿದರು. ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ :

ಅಬಕಾರಿ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತಿದೆ ಎಂದು ಕೆಡಿಪಿ ಸದಸ್ಯರು ಆರೋಪಿಸಿ ಸಭೆ ನಡೆಯುತಿದ್ದ ವೇದಿಕೆ ಮುಂಭಾಗದಲ್ಲೇ ಕುಳಿತು ಪ್ರತಿಭಟಿಸಿದ ಘಟನೆ ನಡೆಯಿತು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಎಚ್. ಕೆ. ಸುರೇಶ್, ಸಾಕ್ಷ್ಯಾಧಾರಗಳೊಂದಿಗೆ ಮಾಹಿತಿ ನೀಡಿದರೆ ತಪ್ಪಿತಸ್ಥ ಅಧಿಕಾರಿಗಳ ಅಮಾನತಿಗೆ ನಾನೇ ಶಿಫಾರಸು ಮಾಡುತ್ತೇನೆ ಎಂದರು. ಈ ಸಂದರ್ಭ ಅಬಕಾರಿ ಇಲಾಖೆ ಅಧಿಕಾರಿ ಅಪೂರ್ವ ಮಾತನಾಡಿ, ಆರೋಪಗಳು ಸತ್ಯವಾಗಿದ್ದರೆ ನನ್ನ ವಿರುದ್ಧ ಕ್ರಮ ಕೈಗೊಳ್ಳಿ. ಆರೋಪ ಸುಳ್ಳಾಗಿದ್ದರೆ ಸುಳ್ಳು ಆರೋಪ ಮಾಡಿದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಶಾಸಕರಿಗೆ ತಿಳಿಸಿದರು. ಕೆಡಿಪಿ ಸದಸ್ಯ ನವೀನ್ ಮಾತನಾಡಿ, ಪ್ರತಿವರ್ಷ ಬೆಳೆ ವಿಮೆ ಮಾಡಿಸುತ್ತಾರೆ. ಆದರೆ ರೈತರಿಗೆ ಸರಿಯಾಗಿ ವಿಮೆ ಸಿಗುತ್ತಿಲ್ಲ ಎಂದು ದೂರಿದರು. ಕೆಡಿಪಿ ಸದಸ್ಯ ನಂದೀಶ್ ಮಾತನಾಡಿ, ಕೆಲ ಬ್ಯಾಂಕುಗಳಲ್ಲಿ ರೈತರಿಂದ ವಿಮೆ ಕಟ್ಟಿಸಿ ಕೊಳ್ಳುತ್ತಿಲ್ಲ. ಶಾಸಕರು ಗಮನಹರಿಸಬೇಕು ಎಂದರು. ಕೆಡಿಪಿ ಸದಸ್ಯ ಚೇತನ್‌ ಗೌಡ ಮಾತನಾಡಿ, ತ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಾನವ-ಆನೆ ಸಂಘರ್ಷಕ್ಕೆ ಯಾವುದೇ ಪಕ್ಷದ ಭೇದವಿಲ್ಲದೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಇದು ಪ್ರಕೃತಿ ವಿಕೋಪವಲ್ಲ, ಜನರ ಜೀವ ರಕ್ಷಣೆಗೆ ಇನ್ನಷ್ಟು ಪರಿಣಾಮಕಾರಿ ಕ್ರಮಗಳ ಅಗತ್ಯವಿದೆ ಜನರ ಜೀವ ರಕ್ಷಿಸುವುದು ಸರ್ಕಾರದ ಮೊದಲ ಕರ್ತವ್ಯ. ಮೃತರ ಕುಟುಂಬಕ್ಕೆ ₹20 ಲಕ್ಷ ಪರಿಹಾರ ಘೋಷಿಸಿರುವುದು ಸ್ವಾಗತಾರ್ಹ. ಆದರೆ ಒಬ್ಬ ಕುಟುಂಬದ ಆಧಾರಸ್ತಂಭನ ಜೀವಕ್ಕೆ ₹20 ಲಕ್ಷ ಪರಿಹಾರ ಸಾಕಾಗುವುದಿಲ್ಲ. ಮೃತರ ಕುಟುಂಬಕ್ಕೆ 5 ಕೋಟಿ ವಿಶೇಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ತಾಪಂ ಆಡಳಿತಾಧಿಕಾರಿ ಡಾ.ಬಿ.ಕೆ.ರಮೇಶ್, ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ತಾಪಂ ಇಒ ಸತೀಶ್‌ ಕುಮಾರ್‌, ಪೊಲೀಸ್‌ ಇನ್ಸ್ಪೆಕ್ಟರ್‌ ರೇವಣ್ಣ, ಕೆಡಿಪಿ ಸದಸ್ಯ ಜ್ಯೋತಿ ಚೇತನ್‌ ಗೌಡ , ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.


===========

ಫೋಟೋ:

ಬೇಲೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರೆಯಲಾಗಿದ್ದ ಪ್ರಗತಿ ಪರಿಶೀಲನ ಸಭೆಯಲ್ಲಿ ಶಾಸಕ ಎಚ್. ಕೆ. ಸುರೇಶ್‌ ಮಾತನಾಡಿದರು.