ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಕಂದಾಯ ಇಲಾಖೆ ಅಧಿಕಾರಿಗಗಳು, ನೌಕರರು ಸಾರ್ವಜನಿಕರೊಂದಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿ ಸಮಾಜ ಮುಖಿಯಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ ನೀಡಿದರು.ಪಟ್ಟಣದ ತಾಲೂಕು ಕಚೇರಿಗೆ ಗುರುವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಕುಮಾರ, ತಾಲೂಕಿನ ಎಲ್ಲಾ ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ನಿರೀಕ್ಷಕರು, ಉಪ ತಹಸೀಲ್ದಾರ್ ಅವರೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಾದ ಆಧಾರ್ ಸೀಡಿಂಗ್, ಇ-ಪೌತಿ ಖಾತಾ ಆಂದೋಲನ, ನಮೂನೆ 1 ರಿಂದ 5, ಗೈರು ವಿಲೆ ಕಡತ, ಸಕಾಲ, ನ್ಯಾಯಾಲಯಗಳ ಪ್ರಕರಣಗಳು, ಒತ್ತುವರಿ ತೆರವು, ಭೂ ಸುರಕ್ಷಾ, 11 ಇ ತಿದ್ದುಪಡಿ, ಬಗರ್ ಹುಕುಂ ಅರ್ಜಿಗಳ ವಿಲೇವಾರಿ ಹಾಗೂ ಹಕ್ಕುಪತ್ರ ವಿತರಣೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಿದರು.ಕಂದಾಯ ಇಲಾಖೆ ಅಧಿಕಾರಿಗಳು ಉತ್ತಮ ಆಡಳಿತದೊಂದಿಗೆ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು. ನಿಗಧಿತ ಸಮಯಕ್ಕೆ ಕಚೇರಿಗೆ ಹಾಜರಾಗಬೇಕು. ಗುರುತಿನ ಚೀಟಿ ಧರಿಸುವಿಕೆ ಹಾಗೂ ಕಚೇರಿ ಕಾರ್ಯ ವಿಧಾನ ತಪ್ಪದೇ ಪಾಲಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಲೋಕಾಯಕ್ತ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ ಜರೂರಾಗಿ ಲೋಕಾಯುಕ್ತರಿಗೆ ವರದಿ ಸಲ್ಲಿಸಬೇಕು. ಪ್ರಕೃತಿ ವಿಕೋಪ, ಆಕಸ್ಮಿಕ ಹಾಗೂ ಇತರೆ ರೀತಿಯ ವಿಕೋಪಗಳಲ್ಲಿ ಬಾಧಿತರಾದವರಿಗೆ ತುರ್ತಾಗಿ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.ಇ-ಆಫೀಸ್ ಬಾಕಿಯನ್ನು ಶೀಘ್ರವೇ ಇತ್ಯರ್ಥ ಪಡಿಸಬೇಕು. ಸಾರ್ವಜನಿಕರ ಅನಗತ್ಯ ಅಲೆದಾಟಕ್ಕೆ ಆಸ್ಪದ ನೀಡದೇ ಸಾರ್ವಜನಿಕರ ಅರ್ಜಿಗಳನ್ನು ತುರ್ತಾಗಿ ವಿಲೇವಾರಿ ಮಾಡಲು ಕ್ರಮವಹಿಸಬೇಕು. ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಭೂ ಹಿಡುವಳಿ ಪ್ರಮಾನ ಪತ್ರ, ವಂಶವೃಕ್ಷ ಸೇರಿದಂತೆ ಇತರೆ ಎಲ್ಲಾ ರೀತಿಯ ಸೇವೆಗಳನ್ನು ಸಕಾಲದಲ್ಲಿ ನಿಗದಿ ಪಡಿಸಿರುವ ಅವಧಿಯೊಳಗೆ ಕಡ್ಡಾಯವಾಗಿ ಒದಗಿಸಬೇಕು. ತಪ್ಪಿದ್ದಲ್ಲಿ ಅಂತಹ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಇದಕ್ಕೆ ಆಸ್ಪದ ನೀಡಡದಂತೆ ಅಧಿಕಾರಿಗಳು ಮತ್ತು ನೌಕರರು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದರು.
ಕಚೇರಿಯ ಅಭಿಲೇಖಾಲಯ ಶಾಖೆಯನ್ನು ಪರಶೀಲಿಸಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕರು ದಾಖಲಾತಿಗಳನ್ನು ಕೋರಿ ಅರ್ಜಿ ಸಲ್ಲಿಸಿದ್ದಾಗ ಸರ್ಕಾರಕ್ಕೆ ಪಾವತಿಸಬೇಕಾದ ಶುಲ್ಕ ಪಾವತಿಸಿಕೊಂಡು ದಾಖಲಾತಿ ನೀಡಬೇಕು ಹಾಗೂ ನಾಡ ಕಚೇರಿಗೆ ಸ್ವೀಕೃತವಾಗುವ ಸರ್ಕಾರದ ಶುಲ್ಕವನ್ನು ಅದೇ ದಿನ ಸರ್ಕಾರಕ್ಕೆ ಪಾವತಿಸಿ ದಾಖಲೆ ನಿರ್ವಹಣೆ ಮಾಡಬೇಕು ಎಂದರು.ಹೋಬಳಿ ಕೇಂದ್ರದ ಎಲ್ಲಾ ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿ ಲಭ್ಯವಿದ್ದು, ಸಾರ್ವಜನಿಕ ಮನವಿ ತ್ವರಿತವಾಗಿ ಇತ್ಯರ್ಥ ಪಡಿಸಬೇಕು. ಕರ್ತವ್ಯ ಲೋಪ ಕಂಡುಬಂದರೆ ಅಂತಹ ನೌಕರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಮೊದಲಿಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಸ್ವೀಕೃತ ಅಹವಾಲುಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸುವಂತೆ ಹಾಗೂ ಕಚೇರಿಯಲ್ಲಿ ಬಾಕಿ ಇರುವ ನ್ಯಾಯಾಲಯ ಪ್ರಕರಣಗಳ ಬಾಬ್ತು ತುರ್ತಾಗಿ ಕ್ರಮವಹಿಸಿ ವರದಿ ಸಲ್ಲಿಸಬೇಕು. ಬಾಕಿ ಇರುವ ರಿಟ್ ಪಿಟಿಷನ್ ಪ್ರಕರಣಗಳಿಗೆ ನ್ಯಾಯಾಲಯಕ್ಕೆ ಕಂಡಿಕೆವಾರು ಉತ್ತರ ಸಲ್ಲಿಸುವಂತೆ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಅವರಿಗೆ ಸೂಚಿಸಿದರು.ಈ ವೇಳೆ ಉಪವಿಭಾಗಾದಿಕಾರಿ ಕೆ.ಆರ್.ಶ್ರೀನಿವಾಸ್, ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ಶಿರಸ್ತೇದಾರ್ ಮೋಹನ್, ಡಿಎಸ್‌ಎಸ್ ಮುಖಂಡ ಡಿ.ಕೆ.ಅಂಕಯ್ಯ, ಕಂದಾಯ ನಿರೀಕ್ಷಕ ಮಹೇಂದ್ರ ಇತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))