ಸಾರಾಂಶ
ಗ್ರಾಮದ ಮಾರಮ್ಮ, ಆಂಜನೇಯಸ್ವಾಮಿ ಹಾಗೂ ಮಡಿವಾಳ ಮಾಚಯ್ಯ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಹದೇಶ್ವರ ಸ್ವಾಮಿ ಎಣ್ಣೆ ಮಜ್ಜನ ಸೇವೆ ಆರಂಭಗೊಂಡು ರಾತ್ರಿಪೂರ್ತಿ ವಿವಿಧ ರೀತಿಯ ಪೂಜಾ ಕೈಂಕರ್ಯಗಳನ್ನು ಸಂಪ್ರದಾಯ ಬದ್ಧವಾಗಿ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಲಿಂಗೋದ್ಭವವಾಗಿ ತಾಲೂಕಿನ ದುಗ್ಗನಹಳ್ಳಿಯಲ್ಲಿ ನೆಲೆಸಿರುವ ಮಲೆಮಹದೇಶ್ವರಸ್ವಾಮಿಯ 68ನೇ ವರ್ಷದ ದೀಪಾವಳಿ ಜಾತ್ರೆ ಮಹೋತ್ಸವದ ಅಂಗವಾಗಿ ಸ್ವಾಮಿಗೆ ಎಣ್ಣೆ ಮಜ್ಜನ ಹಾಗೂ ಅಭಿಷೇಕ ಸೇವೆ ಭಕ್ತಿ ಪ್ರಧಾನವಾಗಿ ಜರುಗಿತು.ದೀಪಾವಳಿ ಹಬ್ಬದ ಅಂಗವಾಗಿ ಮಹದೇಶ್ವರ ಸ್ವಾಮಿಗೆ ಹೋಮ ಹವನ, ಪೂಜಾ ಕೈಂಕರ್ಯಗಳು ಜರುಗಿದವು. ಗ್ರಾಮದ ದೇವಸ್ಥಾನ ಆಡಳಿತ ಮಂಂಡಳಿ, ಅಕ್ಕ ಪಕ್ಕದ ಗ್ರಾಮಸ್ಥರು ಹಾಗೂ ವಿವಿಧೆಡೆಯಿಂದ ಬಂದ ಭಕ್ತರ ಸಮ್ಮುಖದಲ್ಲಿ ಮಂಗಳಾವಾದ್ಯದೊಂದಿಗೆ ಪೂಜಾ ಮಹೋತ್ಸವ ಅರ್ಥಪೂರ್ಣವಾಗಿ ನಡೆಯಿತು.
ಮಂಗಳಾವಾದ್ಯದೊಂದಿಗೆ ಮಹದೇಶ್ವರ ದೇವಸ್ಥಾನದಿಂದ ಸ್ವಾಮಿ ಪೂಜೆ ಹಾಗೂ ಬಿರುದುಗಳನ್ನು ಮೆರವಣಿಗೆ ಮೂಲಕ ಬಸವನಗುಡಿ ಮಾರ್ಗವಾಗಿ ಈಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು.ಗ್ರಾಮದ ಮಾರಮ್ಮ, ಆಂಜನೇಯಸ್ವಾಮಿ ಹಾಗೂ ಮಡಿವಾಳ ಮಾಚಯ್ಯ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಹದೇಶ್ವರ ಸ್ವಾಮಿ ಎಣ್ಣೆ ಮಜ್ಜನ ಸೇವೆ ಆರಂಭಗೊಂಡು ರಾತ್ರಿಪೂರ್ತಿ ವಿವಿಧ ರೀತಿಯ ಪೂಜಾ ಕೈಂಕರ್ಯಗಳನ್ನು ಸಂಪ್ರದಾಯ ಬದ್ಧವಾಗಿ ಆಚರಿಸಲಾಯಿತು.
ಹರಕೆಹೊತ್ತ ಭಕ್ತರಿಂದ ಬಾಯಿ ಬೀಗ ಹಾಕಿಸಿಕೊಳ್ಳುವುದರ ಮೂಲಕ ಹರಕೆ ತೀರಿಸಿದರು. ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿ ಧನ್ಯತೆ ಮೆರೆದರು.