ತೈಲ ಬೆಲೆ ಏರಿಕೆ: ಬಿಜೆಪಿ ಬೃಹತ್ ಪ್ರತಿಭಟನೆ

| Published : Jun 20 2024, 01:02 AM IST

ಸಾರಾಂಶ

ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ,ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು, ಹುಡಾ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ ಸೇರಿ ಇತರರು ಸೈಕಲ್ ನಂತರ ಎತ್ತಿನಗಾಡಿ ಮೇಲೆ ಸವಾರಿ ಮಾಡಿ ತೈಲ ಬೆಲೆಏರಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಹಲವಾರು ಭಾಗ್ಯಗಳ ಈಡೇರಿಕೆಗಾಗಿ ದಿನಬಳಕೆಯ ಬೆಲೆ ಏರಿಕೆ ಜೊತೆಗೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡಿರುವುದರ ವಿರುದ್ಧ ಬಿಜೆಪಿ ಪಕ್ಷದಿಂದ ನಗರದಲ್ಲಿ ಬುಧವಾರ ಎತ್ತಿನಗಾಡಿ, ಸೈಕಲ್ ಹಾಗೂ ನಾಲ್ಕು ಚಕ್ರದ ವಾಹನವನ್ನು ಹಗ್ಗ ಕಟ್ಟಿ ಎಳೆದು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮೂಲಕ ಜನರಿಗೆ ಚಿಪ್ಪು ಕೊಡುತ್ತಿದೆ. ಗುರುವಾರದಂದು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರಮುಖ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಈಗ ಎತ್ತಿನ ಗಾಡಿಗಳ ಮೂಲಕ ಡೀಸಿ ಕಚೇರಿಯವರೆಗೂ ತೆರಳಿ ಮನವಿ ಸಲ್ಲಿಸುತ್ತೇವೆ ಎಂದರು.ಎಸ್.ಟಿ. ನಿಗಮದಡಿ ಕಾಂಗ್ರೆಸ್ ಸರ್ಕಾರದಲ್ಲಿ ೧೮೯ ಕೋಟಿ ರು.ಗಳ ಭ್ರಷ್ಟಾಚಾರ ನಡೆದಿದ್ದು, ಈಗಾಗಲೇ ಸಚಿವರ ತಲೆದಂಡವೂ ಆಗಿದೆ. ಮುಖ್ಯಮಂತ್ರಿಯವರು ಹಾಗೂ ಅವರ ಸಂಪೂಟದ ಸಚಿವರೂ ಕೂಡ ಭಾಗಿಯಾಗಿದ್ದಾರೆ. ಕಾಂಗ್ರೆಸ್ ಕೊಟ್ಟಿರುವ ಭಾಗ್ಯಗಳು ಕೇವಲ ಕಣ್ಣು ಒರೆಸುವ ಭಾಗ್ಯಗಳಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಮಾತನಾಡಿ, ಹಲವಾರು ಭಾಗ್ಯಗಳ ಆಸೆ, ಆಮಿಷಗಳನ್ನು ತೋರಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರವು ಇಡೀ ಕರ್ನಾಟಕದ ಜನತೆಗೆ ಅದರಲ್ಲೂ ಬಡವರ ಹೊಟ್ಟೆಗೆ ಹೊಡೆಯುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹಲವಾರು ಯೋಜನೆಗಳನ್ನು ಕೊಟ್ಟರೂ ರಾಜ್ಯದಲ್ಲಿ ಬಡವರ ಮೇಲೆ ತೆರಿಗೆಯನ್ನು ಹೆಚ್ಚಾಗಿ ಏರಿಸುವ ಕೆಲಸ ಮಾಡಿದೆ ಎಂದು ದೂರಿದರು.

ರಾಜ್ಯ ಕಾಂಗ್ರೆಸ್ ಸರ್ಕಾರವು ದಿನ ಬಳಕೆಯ ಪದಾರ್ಥಗಳ ಬೆಲೆ ಏರಿಕೆ, ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡಿ, ಇದರಿಂದ ಬಂದ ತೆರಿಗೆ ಹಣವನ್ನು ತಮ್ಮ ಗ್ಯಾರಂಟಿ ಭಾಗ್ಯಗಳಿಗೆ ಉಪಯೋಗ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ವೇಳೆ ನಾವು ಬೆಲೆ ಏರಿಕೆ ಮಾಡುವುದಾಗಿ ಯಾವ ಆಶ್ವಾಸನೆ ಕೊಟ್ಟಿರುವುದಿಲ್ಲ. ಕಾಂಗ್ರೆಸ್ ಸರ್ಕಾರ ಇಡೀ ಕರ್ನಾಟಕದ ಜನತೆಗೆ ಚಿಪ್ಪು ಕೊಡುತ್ತಿದೆ ಎಂದು ಶಾಸಕರು ನೇರ ಆರೋಪ ಮಾಡಿದರು.

ದಲಿತರ ಪರವಾಗಿದ್ದೇವೆ, ಪರಿಶಿಷ್ಟ ಜಾತಿ ಪಂಗಡದ ಪರವಾಗಿದ್ದೇವೆ ಎಂದು ಹೇಳುವ ಈ ಸರಕಾರ ೨೫ ಸಾವಿರ ಕೋಟಿ ರು. ಹಣ ದುರ್ಬಳಕೆ ಮಾಡಿದ್ದು, ಪರಿಶಿಷ್ಟ ಜಾತಿಯವರ ೧೮೭ ಕೋಟಿ ಹಣವನ್ನು ಕೂಡ ದುರ್ಬಳಕೆ ಮಾಡುವ ಮೂಲಕ ಹಗಲು ದರೋಡೆ ಮಾಡುತ್ತಿದೆ ನೇರವಾಗಿ ದೂರಿದರು.

ಬಡವರ ಬಗ್ಗೆ ಕಾಳಜಿ, ಪ್ರೀತಿ ಇದ್ದರೆ ಉತ್ತಮವಾದ ಭಾಗ್ಯಗಳನ್ನು ಕೊಡಬೇಕು. ಒಳ್ಳೆಯ ಸರಕಾರ ಕೊಡುತ್ತಿದ್ದೇವೆ ಎಂಬ ಮನಸ್ಸಿದ್ದರೆ ಇಂದು ರಾತ್ರಿಯಿಂದಲೇ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಕಡಿಮೆ ಮಾಡುವಂತೆ ಆಗ್ರಹಿಸಿದರು. ಮುಂದಿನ ದಿನಗಳಲ್ಲಿ ತೈಲ ಬೆಲೆ ಕಡಿಮೆ ಮಾಡದಿದ್ದರೆ ಇಡೀ ರಾಜ್ಯಾದ್ಯಂತ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಗಿರೀಶ್, ವೇಣುಕುಮಾರ್, ಶೋಭನ್ ಬಾಬು, ಎಚ್.ಎನ್. ನಾಗೇಶ್, ನಗರಸಭೆ ಮಾಜಿ ಅಧ್ಯಕ್ಷ ಆರ್. ಮೋಹನ್, ರೇಣುಕುಮಾರ್, ಪುನೀತ್, ಯೋಗೀಶ್, ಹರ್ಷಿತ್, ಅಡಗೂರು ಬಸವರಾಜು, ಬಿ.ಎಚ್. ನಾರಾಯಣಗೌಡ, ಆನಂದ್, ಅಶ್ವಥ್, ಉಮಾ ರವಿಪ್ರಕಾಶ್, ನೇತ್ರಾ ಮಂಜುನಾಥ್, ಕುಸಮಾ, ಶೋಭಾ ಗಣೇಶ್, ಸಶೀಲಾ ಅಣ್ಣಪ್ಪ, ಎಸ್.ಡಿ. ಚಂದ್ರು, ಗಗನ್ ಗಾಂಧಿ, ಶಿವಕುಮಾರ್, ರಾಜಕುಮಾರ್ ಇತರರು ಉಪಸ್ಥಿತರಿದ್ದರು.

ಎತ್ತಿನಗಾಡಿ ಓಡಿಸಿದ ಶಾಸಕ ಸಿಮೆಂಟ್ ಮಂಜು:

ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ,ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು, ಹುಡಾ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ ಸೇರಿ ಇತರರು ಸೈಕಲ್ ನಂತರ ಎತ್ತಿನಗಾಡಿ ಮೇಲೆ ಸವಾರಿ ಮಾಡಿ ತೈಲ ಬೆಲೆಏರಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ನಗರದ ಹೇಮಾವತಿ ಪ್ರತಿಮೆ ಬಳಿ ಬಿಜೆಪಿ ಹಿರಿಯ ನಾಯಕ ಎಂ.ಬಿ. ಭಾನುಪ್ರಕಾಶ್ ಸಾವಿಗೆ ಎರಡು ನಿಮಿಷ ಮೌನ ಆಚರಿಸಿ, ಶ್ರದ್ಧಾಂಜಲಿ ಅರ್ಪಿಸಿದರು. ನಗರದ ಎನ್.ಆರ್. ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಸಮಯ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. ನಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.