ಸಾರಾಂಶ
ರಾಜ್ಯಕ್ಕೆ ಬರಬೇಕಾದ ಸಾವಿರಾರು ಕೋಟಿ ಜಿಎಸ್ಟಿ ತೆರಿಗೆ ವಂಚನೆಯಾಯಿತು. 17 ಸಾವಿರ ಕೋಟಿ ರು. ಬರ ಪರಿಹಾರ ಹೇಳಿದರೆ ಕೇವಲ 13 ಸಾವಿರ ಕೋಟಿ ರು. ಮಾತ್ರ ನೀಡಿದ್ದಾರೆ. ಅದೂ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ನೀಡಿದಂತಾಗಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಕೇಂದ್ರದ ಬಿಜೆಪಿ ಸರ್ಕಾರವು ಈ ಹಿಂದೆ ತೈಲ ಬೆಲೆ ಹಾಗೂ ಅಡುಗೆ ಅನಿಲ ದರ ಏರಿಸಿದಾಗ ಇಲ್ಲದ ತಾಪತ್ರಯ ಇದೀಗ ಕರ್ನಾಟಕ ಸರ್ಕಾರದ ವಿಚಾರದಲ್ಲಿ ಯಾಕೆ ಪ್ರತಿಧ್ವನಿಸಿದೆ? ಆಗ ಧ್ವನಿ ಎತ್ತದ ಬಿಜೆಪಿ ನಾಯಕರು ಈಗ ಯಾವ ನೈತಿಕೆಯಿಂದ ಪ್ರತಿಭಟಿಸುತ್ತಿದ್ದಾರೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ರಾಜ್ಯಾಧ್ಯಕ್ಷ ಬಿ. ಸುಬ್ರಹ್ಮಣ್ಯ ಪ್ರಶ್ನಿಸಿದ್ದಾರೆ.ಸಿದ್ದರಾಮಯ್ಯ ಸರ್ಕಾರ ತೆಗೆದುಕೊಂಡಿರುವ ತೈಲ ದರ ಏರಿಕೆಯು ಇತರೆ ರಾಜ್ಯಗಳಿಗಿಂತ ಕಡಿಮೆಯಿದೆ. ಈ ದರ ಹೆಚ್ಚಲು ಈ ಹಿಂದಿನ ಬಿಜೆಪಿ ಸರ್ಕಾರ ನೀತಿಗಳೇ ಕಾರಣ ಎಂಬ ಅಂಶವನ್ನು ಮುಖ್ಯಮಂತ್ರಿಗಳು ನಾಡಿನ ಜನರ ಗಮನಕ್ಕೆ ತಂದಿದ್ದಾರೆ. ಹೀಗಾಗಿ ವಿನಾ ಕಾರಣ ಬಿಜೆಪಿಯವರು ಪ್ರತಿಭಟಿಸುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ಬಿಜೆಪಿ ಸರ್ಕಾರ ದಿನಂಪ್ರತಿ ದರ ಹೆಚ್ಚಿಸುತ್ತಿದ್ದಾಗ ಇವರೆಲ್ಲ ಯಾಕೆ ತುಟಿ ಬಿಚ್ಚಲಿಲ್ಲ ಎಂದೂ ಕಿಡಿಕಾರಿದ್ದಾರೆ.ರಾಜ್ಯಕ್ಕೆ ಬರಬೇಕಾದ ಸಾವಿರಾರು ಕೋಟಿ ಜಿಎಸ್ಟಿ ತೆರಿಗೆ ವಂಚನೆಯಾಯಿತು. 17 ಸಾವಿರ ಕೋಟಿ ರು. ಬರ ಪರಿಹಾರ ಹೇಳಿದರೆ ಕೇವಲ 13 ಸಾವಿರ ಕೋಟಿ ರು. ಮಾತ್ರ ನೀಡಿದ್ದಾರೆ. ಅದೂ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ನೀಡಿದಂತಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ನೀಡಬೇಕಿದ್ದ 500 ಕೋಟಿ ರು. ಕೇಂದ್ರ ಹಣಕಾಸು ಸಚಿವರು ಬಿಡುಗಡೆ ಮಾಡಿಲ್ಲ. ಕೇಂದ್ರದಿಂದ ರಾಜ್ಯಕ್ಕೆ ಇಷ್ಟೆಲ್ಲ ಅನ್ಯಾಯ ಆಗುತ್ತಿದ್ದರೂ ಸೊಲ್ಲೆತ್ತದ ಬಿಜೆಪಿ ನಾಯಕರು ಈಗ ಪೆಟ್ರೋಲ್, ಡೀಸೆಲ್ ಬೆಲೆ ರಾಜ್ಯದಲ್ಲಿ ಏರಿಕೆಯಾಗಿದ್ದಕ್ಕೆ ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ ಎಂದು ಕುಟುಕಿದ್ದಾರೆ.ದಕ್ಷಿಣ ಭಾರತದ ರಾಜ್ಯಗಳಲ್ಲಿ ಕರ್ನಾಟಕದಲ್ಲೇ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಇದೆ. ಆರ್ಥಿಕವಾಗಿ ಬಲಿಷ್ಠವಾಗಿರುವ ಮಹಾರಾಷ್ಟ್ರದಲ್ಲಿ ಇಂಧನಗಳ ಮೇಲಿನ ಮಾರಾಟ ಸುಂಕ ಪೆಟ್ರೋಲ್ ಶೇ.25 ಇದ್ದು, ಹೆಚ್ಚುವರಿಯಾಗಿ 5.12 ರು. ತೆರಿಗೆ ಸಹ ಇದೆ. ಅಲ್ಲಿ ಯಾವ ಸರ್ಕಾರ ಇದೆ? ಮಹಾರಾಷ್ಟ್ರದಲ್ಲಿ ಡೀಸೆಲ್ ಮೇಲೆ ಶೇ.21 ತೆರಿಗೆ ಇದೆ. ಕರ್ನಾಟಕದಲ್ಲಿ ಪರಿಷ್ಕೃತಗೊಂಡ ನಂತರವೂ ಈ ಸುಂಕದ ಪ್ರಮಾಣ ಮಹಾರಾಷ್ಟ್ರಕ್ಕಿಂತ ಕಡಿಮೆ ಇದೆ ಎಂದು ಅವರು ತಿಳಿಸಿದ್ದಾರೆ.