ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಹಳೇ ದ್ವೇಷದ ಹಿನ್ನೆಲೆಯಲ್ಲಿ ಪಾನಮತ್ತ ಎಂಟು ಮಂದಿ ಯುವಕರ ಗುಂಪು ಬೈಕ್ ಗಳಲ್ಲಿ ಬಂದು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿ, ಹತ್ಯೆಗೈದಿರುವ ಘಟನೆ ತಾಲೂಕಿನ ಸೋಮನಹಳ್ಳಿ ಸಮೀಪದ ಕೆಸ್ತೂರು ಕ್ರಾಸ್ ಸ್ಕಂದ ಲೇಔಟ್ ಸಮೀಪ ಶುಕ್ರವಾರ ರಾತ್ರಿ ಜರುಗಿದೆ.ತಾಲೂಕಿನ ಆತಗೂರು ಹೋಬಳಿ ವಡ್ಡರದೊಡ್ಡಿ ಗ್ರಾಮದ ಲೇ.ಕಬ್ಬಾಳು ಪುಟ್ಟಯ್ಯನ ಪುತ್ರ ಪಿ.ಅರುಣ(35) ಕೊಲೆಯಾದ ಯುವಕ. ಎದೆ ಭಾಗ ಸೇರಿದಂತೆ ದೇಹದ ಹಲವು ಭಾಗಗಳ ಮೇಲೆ ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದ ಅರುಣ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಘಟನೆ ಸಂಬಂಧ ಪೊಲೀಸರು ತಾಲೂಕಿನ ಹೊಟ್ಟೇಗೌಡನದೊಡ್ಡಿ ಗ್ರಾಮದ ವಿಕಾಸ್, ಹನುಮಂತಪುರದ ಭರತ್, ನಿತೀನ್ ಗೌಡ ಸೇರಿ 8 ರಿಂದ 9 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.ಕೊಲೆಯಾದ ಬಿ.ಅರುಣ ಮೂಲತಃ ವಡ್ಡರದೊಡ್ಡಿ ಗ್ರಾಮದವನಾಗಿದ್ದು, ಬೆಂಗಳೂರಿನಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದನು.
ವರಮಹಾಲಕ್ಷ್ಮೀ ಹಬ್ಬಕ್ಕಾಗಿ ಸ್ವಗ್ರಾಮಕ್ಕೆ ಬಂದಿದ್ದ ಈತ ಶುಕ್ರವಾರ ರಾತ್ರಿ ತನ್ನ ಅಣ್ಣ ಉಮೇಶ, ಭಾಮೈದ ದೇವರಾಜು ಆತನ ಸ್ನೇಹಿತ ಸೂರ್ಯನೊಂದಿಗೆ ಕೆಸ್ತೂರು ಕ್ರಾಸ್ ಬಳಿ ಇರುವ ಬಾರ್ ವೊಂದಕ್ಕೆ ಮದ್ಯಪಾನ ಮಾಡಲು ಹೋಗಿದ್ದಾರೆ.ಇದೇ ವೇಳೆ ಬಾರ್ ಗೆ ಬಂದಿದ್ದ ಹೊಟ್ಟೇಗೌಡನದೊಡ್ಡಿಯ ವಿಕಾಸ್ ಸೇರಿದಂತೆ ನಾಲ್ವರ ಗುಂಪು ಬಾರ್ ಮುಂದೆ ನಿಂತಿದ್ದ ಅರುಣನ ಸ್ನೇಹಿತ ಸೂರ್ಯನನ್ನು ನೋಡಿದ್ದಾರೆ. ಕಳೆದ ಹಲವು ವರ್ಷಗಳ ಹಿಂದೆ ನಡೆದಿದ್ದ ಹಳೇ ದ್ವೇಷದ ಹಿನ್ನೆಲೆಯಲ್ಲಿ ಅರುಣ ಮತ್ತು ವಿಕಾಸ್ ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ಸಣ್ಣ ಪ್ರಮಾಣದ ಗಲಾಟೆ ನಡೆದಿದೆ.
ಬಾರ್ ಮಾಲೀಕರು ಎರಡು ಗುಂಪುಗಳನ್ನು ಸಮಾಧಾನಪಡಿಸಿ ಕಳುಹಿಸಿದ್ದಾರೆ. ನಂತರ ಅರುಣ ವಡ್ಡರದೊಡ್ಡಿಗೆ ಹೋಗಲು ಮದ್ದೂರು- ತುಮಕೂರು ಹೆದ್ದಾರಿ ಬಳಿ ಬೈಕ್ ನಲ್ಲಿ ತೆರಳುತ್ತಿದ್ದಾಗ ಸ್ಕಂದ ಲೇಔಟ್ ಬಳಿ ಹಿಂಬಾಲಿಸಿಕೊಂಡು ಬೈಕ್ ನಲ್ಲಿ ಬಂದ ಆರೋಪಿಗಳು ಬೈಕ್ ಅಡ್ಡಗಟ್ಟಿ ಅರುಣನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದು ಪರಾರಿಯಾಗಿದ್ದಾರೆ.ಘಟನೆ ಸಂಬಂಧ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕೆಸ್ತೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಉಳಿದ ಆರೋಪಿಗಳ ಪತ್ತೆಗಾಗಿ ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ ನೇತೃತ್ವದಲ್ಲಿ ಪಿಎಸ್ ಐ ಮಂಜುನಾಥ್ ಸೇರಿ ವಿಶೇಷ ತಂಡ ರಚಿಸಲಾಗಿದೆ.
ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ತಿಮ್ಮಯ್ಯ, ಡಿವೈಎಸ್ಪಿ ಕೃಷ್ಣಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.