ಸರ್ವಜ್ಞ ಸಾಮಾಜಿಕ ಸುಧಾರಣೆಯ ಕ್ರಾಂತಿಕಾರಿ: ಮುನಿರಾಜು.ಎಂ.ಅರಿಕೆರೆ

| Published : Feb 21 2024, 02:00 AM IST

ಸರ್ವಜ್ಞ ಸಾಮಾಜಿಕ ಸುಧಾರಣೆಯ ಕ್ರಾಂತಿಕಾರಿ: ಮುನಿರಾಜು.ಎಂ.ಅರಿಕೆರೆ
Share this Article
  • FB
  • TW
  • Linkdin
  • Email

ಸಾರಾಂಶ

16ನೇ ಶತಮಾನದಲ್ಲಿ ಬಾಳಿಬದುಕಿದ ಸಾಮಾಜಿಕ ನ್ಯಾಯದ ಹರಿಕಾರ ಬಹುದೊಡ್ಡ ಕ್ರಾಂತಿಕಾರಿ ಸಂತಕವಿ ಸರ್ವಜ್ಞರಾಗಿದ್ದಾರೆ ಎಂದು ಉಪನ್ಯಾಸಕ ಮುನಿರಾಜು.ಎಂ.ಅರಿಕೆರೆ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

16ನೇ ಶತಮಾನದಲ್ಲಿ ಬಾಳಿಬದುಕಿದ ಸಾಮಾಜಿಕ ನ್ಯಾಯದ ಹರಿಕಾರ ಬಹುದೊಡ್ಡ ಕ್ರಾಂತಿಕಾರಿ ಸಂತಕವಿ ಸರ್ವಜ್ಞರಾಗಿದ್ದಾರೆ ಎಂದು ಉಪನ್ಯಾಸಕ ಮುನಿರಾಜು.ಎಂ.ಅರಿಕೆರೆ ಅಭಿಪ್ರಾಯಪಟ್ಟರು.ತಾಲೂಕಿನ ನಂದಿಹೋಬಳಿ ಸುಲ್ತಾನ್‌ಪೇಟೆ ಗ್ರಾಮದ ಕುಂಬೇಶ್ವರ ದೇವಾಲಯದ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಸರ್ವಜ್ಞ ಕವಿಯ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, 16 ನೇ ಶತಮಾನದಲ್ಲಿ ಜೀವಿಸಿದ್ದ ಸರ್ವಜ್ಞ ನಿಜಾರ್ಥದಲ್ಲಿ ಜನಕವಿ. ಕನ್ನಡ ನಾಡಿನ ಅವಧೂತ ಪರಂಪರೆಯ ದೊಡ್ಡ ಕೊಂಡಿಯಾದ ಸರ್ವಜ್ಞ ದಾರ್ಶನಿಕ ವ್ಯಕ್ತಿತ್ವ ಉಳ್ಳವರು. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಅಸಮಾನತೆಗಳನ್ನು ತ್ರಿಪದಿಗಳ ಮೂಲಕ ನಿರ್ಭೀತಿಯಿಂದ ಜನತೆಗೆ ತಿಳಿಸುವ ಕೆಲಸ ಮಾಡಿದ ಸಮಾನತೆಯ ಹರಿಕಾರ. ಆಡುಮುಟ್ಟದ ಸೊಪ್ಪಿಲ್ಲ ಸರ್ವಜ್ಞ ಮುಟ್ಟದ ಕ್ಷೇತ್ರವಿಲ್ಲ ಎಂಬಂತೆ ಸಂಸಾರ,ಸತಿ-ಪತಿ ಸಂಬಂಧ, ದೇವರು, ನಂಬಿಕೆ, ಆಚಾರ, ವಿಚಾರ, ಕಂದಾಚಾರ, ಭಕ್ತಿ ವೈರಾಗ್ಯ, ನೇಮ ನಿಷ್ಟೆ ಗುರು-ಶಿಷ್ಯ, ಸಾಲ-ಸೋಲ ಹೀಗೆ ಸಮಸ್ತವನ್ನೂ ತಮ್ಮ ಅನುಭವದ ಮೂಸೆಗೆ ತಂದುಕೊಂಡು ತ್ರಿಪದಿ ಮೂಲಕ ಪಸರಿಸಿದ ಮಹಾಜ್ಞಾನಿಯಾಗಿದ್ದಾರೆ ಎಂದರು.ಉಚ್ಚಂಗಿ ಚೆನ್ನಬಸಪ್ಪನವರು ಕಷ್ಟಪಟ್ಟು ಸಂಪಾದಿಸಿರುವ ಸರ್ವಜ್ಞರ ತ್ರಿಪದಿಗಳು ಗ್ರಂಥವನ್ನು ಮನೆಗಾಗಿ ಕೊಂಡು ತಂದು ಮಕ್ಕಳಿಗೆ ಓದಲು ಹೇಳಬೇಕು ಎಂದು ತಿಳಿಸಿದರು. ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮಾತನಾಡಿ, ಸುಸ್ಥಿರ ಸಮಾಜವು ವಿಘಟನೆಗೊಂಡ ಈ ಕಾಲಘಟ್ಟದಲ್ಲಿ ಮಹಾಸಂತ ಸರ್ವಜ್ಞ ಕವಿಯ ಜಯಂತಿಯನ್ನು ಆಚರಿಸುತ್ತಿರುವುದು ಸಂತೋಷ ತಂದಿದೆ. ಸಮುದಾಯದ ಜನತೆ ಸರ್ವಜ್ಞರನ್ನು ಪೂಜೆಗೆ ಸೀಮಿತ ಮಾಡದೆ ಅವರು ಲೋಕಕ್ಕೆ ನೀಡಿದ ಸಂದೇಶಗಳನ್ನು ಪಾಲಿಸಬೇಕಿದೆ ಎಂದು ಕರೆ ನೀಡಿದರು. ಈ ವೇಳೆ ಸಮುದಾಯದ ಮುಖಂಡರನ್ನು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು. ಜಯಂತಿ ಅಂಗವಾಗಿ ಅನ್ನದಾನ, ಕುಂಬೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮನಿಷಾ, ಅಧಿಕಾರಿ ಅರುಣಕುಮಾರಿ, ನಂದಿ ಗ್ರಾಪಂ ಪಿಡಿಒ ರವಿಕುಮಾರ್ ಮತ್ತು ಸಿಬ್ಬಂದಿ, ಸುಲ್ತಾನ ಪೇಟೆ ಕುಂಬಾರ ಸಂಘದ ಪದಾಧಿಕಾರಿಗಳು, ಪ್ರೇಮಲೀಲಾ ವೆಂಕಟೇಶ್ ಮತ್ತಿತರರಿದ್ದರು.