ಸಾರಾಂಶ
ಕನ್ನಡಪ್ರಭ ವಾರ್ತೆ ಬ್ಯಾಡಗಿ
ಒಳಪಂಗಡಗಳೂ ಸೇರಿದಂತೆ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ರಾಜ್ಯ ಘಟಕದ ವತಿಯಿಂದ ಕೂಡಲ ಸಂಗಮದ ಬಸವ ಮೃತ್ಯುಂಜಯ ಶ್ರೀ ನೇತೃತ್ವದಲ್ಲಿ ಜ.12 ರಂದು ಮೋಟೆಬೆನ್ನೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಬೆಳಗ್ಗೆ 10ರಿಂದ 12 ಗಂಟೆಯವರೆಗೆ ಸಾಮೂಹಿಕ ಲಿಂಗಪೂಜೆ ನಡೆಸುವುದಾಗಿ ವೀರಶೈವ ಪಂಚಮಸಾಲಿ ರಾಜ್ಯ ಘಟಕದ ಕಾರ್ಯದರ್ಶಿ ಸಿ.ಆರ್. ಬಳ್ಳಾರಿ ತಿಳಿಸಿದರು.ಸೋಮವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸ್ವಾತಂತ್ರ್ಯದ ದಿನದಿಂದಲೂ ಅನ್ಯಾಯವಾಗುತ್ತಾ ಬಂದಿದ್ದು ಇಂದಿಗೂ ಮುಂದುವರೆದಿದೆ. ರಾಜ್ಯದಲ್ಲಿ 1.25 ಕೋಟಿ ಜನಸಂಖ್ಯೆ ಹಾಗೂ ವಿಧಾನಸಭೆಯಲ್ಲಿ 50ಕ್ಕೂ ಹೆಚ್ಚು ಶಾಸಕರನ್ನು ಹೊಂದಿದ್ದರೂ ಸಹ ಇಂದಿಗೂ 2ಎ ಮೀಸಲಾತಿ ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ನಿರ್ಲಕ್ಷ್ಯ ಧೋರಣೆಗಳು ಇಂದು ನಮ್ಮನ್ನು ಬೀದಿಗೆ ತಂದು ನಿಲ್ಲಿಸಿದ್ದು, ಯಾವುದೇ ಕಾರಣಕ್ಕೂ ಮೀಸಲಾತಿ ದೊರಕಿಸಿಕೊಳ್ಳುವವರೆಗೂ ಶ್ರೀಗಳ ನೇತೃತ್ವದಲ್ಲಿ ಹೋರಾಟ ಮುಂದುವರೆಯಲಿದೆ ಎಂದರು.
ಕಳೆದ ಬಿಜೆಪಿ ಸರ್ಕಾರದಲ್ಲಿ ಸ್ಪಷ್ಟವಾಗಿ 2ಎ ಮೀಸಲಾತಿ ಘೋಷಣೆಗೂ ಪಟ್ಟುಹಿಡಿಯಲಾಗಿತ್ತು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2ಡಿ ಘೋಷಣೆ ಮಾಡಿದ್ದೇನೋ ನಿಜ, ಆದರೆ ಗೆಜೆಟ್ ನೋಟಿಫಿಕೇಶನ್ ಮಾಡದೇ ಇದ್ದುದರಿಂದ ನ್ಯಾಯಾಲಯದಲ್ಲಿ ಮಾನ್ಯತೆಯೂ ಸಿಗದಂತಾಗಿದ್ದು ಅಂದಿನವರೆಗೂ ನಡೆಸಿದ ಅಷ್ಟೂ ಹೋರಾಟಗಳನ್ನು ನಿರರ್ಥಕ ಮಾಡಲಾಯಿತು ಎಂದು ಆರೋಪಿಸಿದರು.ನೀಡಿದ ಭರವಸೆ ಈಡೇರಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿ ಅಧಿವೇಶನದ ವೇಳೆ ಸಮಾಜದ ಮುಖಂಡರಿಗೆ ನೀಡಿದ ಭರವಸೆ ಈಡೇರಿಸುವಂತೆ ಆಗ್ರಹಿಸಿದ ಅವರು, ಕೂಡಲೇ ಸರ್ಕಾರ 2ಎ ಮೀಸಲಾತಿ ಕುರಿತು ಗೆಜೆಟ್ ನೋಟಿಫಿಕೇಶನ್ ಹೊರಡಿಸಬೇಕು. ಯಾವುದೇ ಕಾರಣಕ್ಕೂ ಮೂಗಿಗೆ ತುಪ್ಪ ಸವರಿ ಸಮಾಜಕ್ಕೆಅನ್ಯಾಯ ಮಾಡಿದಲ್ಲಿ ಸುಮ್ಮನಿರಲು ಸಾದ್ಯವಿಲ್ಲ ಎಂದು ಎಚ್ಚರಿಸಿದರು.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 2ಎ ಮೀಸಲಾತಿ ಹೋರಾಟ ಪಕ್ಷಾತೀತವಾಗಿದ್ದು ಎಲ್ಲ ಪಕ್ಷಗಳಲ್ಲಿರುವ ಶಾಸಕರು ಸಚಿವರು ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ, ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಮಹಿಳಾ ಮತ್ತು ಮಕ್ಕಳ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಶಾಸಕರಾದ ಅರವಿಂದ ಬೆಲ್ಲದ, ವಿನಯ ಕುಲಕರ್ಣಿ ಸೇರಿದಂತೆ ಶಾಸಕರು ಸಚಿವರು, ಮಾಜಿ ಸಚಿವರು ಹಾಗೂ ವಿವಿಧ ಘಟಕಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.ಮೋಟೆಬೆನ್ನೂರ ಬಳಿಯಿರುವ ಅಯ್ಯಪ್ಪಸ್ವಾಮಿ ಸನ್ನಿಧಿಯ ಜಾಗದಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಮಾಜದ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ ಎಂದ ಅವರು, ಸುಮಾರು 2 ತಾಸುಗಳ ಕಾಲ ರಾಷ್ಟ್ರೀಯ ಹೆದ್ದಾರಿಯನ್ನು ಸ್ಥಗಿತಗೊಳಿಸಿ ಪ್ರತಿಭಟಿಸಲಿದ್ದೇವೆ ಎಂದರು.
ಸಾಮೂಹಿಕ ಲಿಂಗಪೂಜೆ ಹಿನ್ನೆಲೆ ಜಯಬಸವ ಮೃತ್ಯುಂಜಯ ಶ್ರೀ ನೇತೃತ್ವದಲ್ಲಿ ಜ.3 ರಂದು ಬ್ಯಾಡಗಿ ವಿಧಾನಸಭೆ ಮತಕ್ಷೇತ್ರದ ಉಕ್ಕುಂದ, ಬೆಳಕೇರಿ, ಚಿಕ್ಕಣಜಿ ಹಾಗೂ ಕಲ್ಲೇದೇವರು ಗ್ರಾಮಗಳಲ್ಲಿ, ಜ.4 ರಂದು ಮೋಟೆಬೆನ್ನೂರು, ಮಲ್ಲೂರು, ಗುಂಡೇನಹಳ್ಳಿ, ಕೆಂಗೊಂಡ, ಕಾಕೋಳ, ಕಜ್ಜರಿ, ಹೊನ್ನತ್ತಿ ಗ್ರಾಮ ಘಟಕಗಳ ನೇತೃತ್ವದಲ್ಲಿ ಸಮಾಜದ ಪೂರ್ವಭಾವಿ ಸಭೆ ಏರ್ಪಡಿಸಲಾಗಿದೆ ಎಂದರು. ಈ ವೇಳೆ ತಾಲೂಕು ಘಟಕದ ಸಂಚಾಲಕ ಎಸ್.ಬಿ. ಲಕ್ಕಣ್ಣವರ, ಮುರಡೆಪ್ಪ ಹೆಡಿಯಾಲ, ಶಂಬಣ್ಣ ಮಲಗಾರ ಇತರರಿದ್ದರು.