14ರಂದು ಮಂಗ್ಳೂರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಾವೇಶ ಬದಲು ರೋಡ್‌ಶೋ

| Published : Apr 11 2024, 12:52 AM IST

14ರಂದು ಮಂಗ್ಳೂರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಾವೇಶ ಬದಲು ರೋಡ್‌ಶೋ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಏ.14ರಂದು ಮಂಗಳೂರಿನಲ್ಲಿ ಸಾರ್ವಜನಿಕ ಸಮಾವೇಶ ಬದಲು ರೋಡ್‌ಶೋ ನಡೆಸಲಿದ್ದಾರೆ. ರೋಡ್‌ಶೋ ಯಶಸ್ಸಿಗೆ ಬಿಜೆಪಿ ಪೂರ್ವ ಸಿದ್ಧತೆ ಆರಂಭಿಸಿದೆ. ಬುಧವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ದ.ಕ.ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಏ.14ರಂದು ಮಂಗಳೂರಿನಲ್ಲಿ ಸಾರ್ವಜನಿಕ ಸಮಾವೇಶ ಬದಲು ರೋಡ್‌ಶೋ ನಡೆಸಲಿದ್ದಾರೆ. ಪ್ರಧಾನಿಯ ಭರ್ಜರಿ ರೋಡ್‌ಶೋ ಯಶಸ್ಸಿಗೆ ಬಿಜೆಪಿ ಪೂರ್ವ ಸಿದ್ಧತೆ ಆರಂಭಿಸಿದೆ.

ಬುಧವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ದ.ಕ.ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶ ನಡೆಸಲು ಬಂಗ್ರಕೂಳೂರಿನಲ್ಲಿ ಬೆಳಗ್ಗೆ ಭೂಮಿ ಪೂಜೆ ನಡೆಸಲಾಗಿತ್ತು. ಇದೀಗ ಪಕ್ಷದ ನಿರ್ದೇಶನದಂತೆ ಸಮಾವೇಶ ಬದಲು ರೋಡ್‌ ಶೋ ಹಮ್ಮಿಕೊಳ್ಳಲಾಗಿದೆ. ಪ್ರಧಾನಿ ಮೋದಿ ಅವರು ಏ.14ರಂದು ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಸಂಜೆ 3.30ಕ್ಕೆ ಮೈಸೂರಿನಲ್ಲಿ ಸಮಾವೇಶದಲ್ಲಿ ಭಾಗವಹಿಸಿ ಸಂಜೆ 5 ಗಂಟೆಗೆ ಮಂಗಳೂರಿಗೆ ಆಗಮಿಸಲಿದ್ದಾರೆ ಎಂದರು.

ಸಂಜೆ 6 ಗಂಟೆಗೆ ಮಂಗಳೂರಿನ ಲೇಡಿಹಿಲ್‌ ನಾರಾಯಣಗುರು ವೃತ್ತದಿಂದ ರೋಡ್‌ಶೋ ಆರಂಭವಾಗಿ ಲಾಲ್‌ಭಾಗ್‌, ಬಲ್ಲಾಳ್‌ಬಾಗ್‌, ಬೆಸೆಂಟ್‌, ಪಿವಿಎಸ್‌ ವೃತ್ತದ ಮೂಲಕ ಸಾಗಿ ಮಂಜೇಶ್ವರ ಗೋವಿಂದ ಪೈ ವೃತ್ತ, ಕೆ.ಎಸ್‌.ರಾವ್‌. ರಸ್ತೆ ಮೂಲಕ ಹಂಪನಕಟ್ಟೆ ಸಿಗ್ನಲ್‌ನಲ್ಲಿ ಸಮಾಪನಗೊಳ್ಳಲಿದೆ. ಸುಮಾರು 2ರಿಂದ 2.30 ಕಿ.ಮೀ. ನಡೆಯುವ ರೋಡ್‌ ಶೋದಲ್ಲಿ ರಸ್ತೆಯುದ್ದಕ್ಕೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿ ವೀಕ್ಷಣೆ ಮಾಡಲಿದ್ದಾರೆ. ಈ ಸಂಬಂಧ ಈಗಾಗಲೇ ಪೊಲೀಸ್‌ ಇಲಾಖೆ, ಜಿಲ್ಲಾಡಳಿತದ ಜತೆ ಮಾತುಕತೆ ನಡೆಸಲಾಗಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಾರ್ಯಕರ್ತರು ಬರುವ ನಿರೀಕ್ಷೆಯಿದೆ. ಜಿಲ್ಲಾಮಟ್ಟ, ರಾಜ್ಯಮಟ್ಟದ ನಾಯಕರು ಭಾಗವಹಿಸಲಿದ್ದಾರೆ. ಮಂಗಳೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ ಹಾಗೂ ಮೂಡುಬಿದಿರೆ ಕ್ಷೇತ್ರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಲಿದ್ದಾರೆ. ಉಳಿದ ಕ್ಷೇತ್ರಗಳಲ್ಲಿ ಮನೆ ಮನೆ ಸಂಪರ್ಕ ಅಭಿಯಾನಕ್ಕೆ ಒತ್ತು ನೀಡಲಾಗಿದೆ. ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರು ಎರಡು ಸುತ್ತಿನ ಪ್ರಚಾರ ಕಾರ್ಯ ಮುಕ್ತಾಯಗೊಳಿಸಿದ್ದಾರೆ ಎಂದರು.

ಪಕ್ಷದ ಚುನಾವಣಾ ರಾಜ್ಯ ಸಂಚಾಲಕ ಜಗದೀಶ್‌ ಹಿರೇಮನಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ, ಲೋಕಸಭಾ ಕ್ಷೇತ್ರದ ಬಿಜೆಪಿ ಸಂಚಾಲಕ ನಿತಿನ್‌ ಕುಮಾರ್‌, ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಯತೀಶ್‌ ಆರ್ವರ್‌, ಬಂಟ್ವಾಳ ಚುನಾವಣಾ ಪ್ರಭಾರಿ ಜಗದೀಶ ಶೇಣವ, ಲೋಕಸಭಾ ಕ್ಷೇತ್ರದ ಬಿಜೆಪಿ ಮಹಿಳಾ ಪ್ರಮುಖರಾದ ಕಸ್ತೂರಿ ಪಂಜ ಇದ್ದರು.