ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಕೇಂದ್ರ ಸಂಪುಟದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜೆಡಿಎಸ್ ವತಿಯಿಂದ ಜೂ.೧೬ರಂದು ಸಂಜೆ ೪ ಗಂಟೆಗೆ ನಾಗರಿಕ ಸನ್ಮಾನವನ್ನು ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.ಅಂದು ಸಂಜೆ ೪ ಗಂಟೆಗೆ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಮಾವೇಶವನ್ನುಆಯೋಜನೆ ಮಾಡಲಾಗಿದ್ದು, ಸುಮಾರು ಒಂದು ಲಕ್ಷ ಜನರು ಸೇರುವ ನಿರೀಕ್ಷೆ ಇದೆ ಎಂದು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಆಯ್ಕೆ ಮಾಡಿದ ಜಿಲ್ಲೆಯ ಮತದಾರರಿಗೆ ಎಚ್.ಡಿ.ಕುಮಾರಸ್ವಾಮಿ ಅವರು ಕೃತಜ್ಞತೆಗಳನ್ನು ಸಲ್ಲಿಸಲಿದ್ದಾರೆ. ಕೇಂದ್ರ ಮಂತ್ರಿಯಾದ ಬಳಿಕ ಮೊದಲ ಬಾರಿಗೆ ಆಗಮಿಸುತ್ತಿರುವ ಕುಮಾರಸ್ವಾಮಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುವುದು. ಅಂದು ಜೆಡಿಎಸ್-ಬಿಜೆಪಿ ರಾಜ್ಯಮಟ್ಟದ ನಾಯಕರು ಆಗಮಿಸುವ ನಿರೀಕ್ಷೆ ಇದೆ ಎಂದು ಹೇಳಿದರು.ದ್ವೇಷ ಬೇಡ, ಅಭಿವೃದ್ಧಿಗೆ ಕೈಜೋಡಿಸಿ:
ಚುನಾವಣೆ ಮುಗಿದಿದೆ. ಇನ್ನು ರಾಜಕೀಯವಾಗಿ ದ್ವೇಷ ಸಾಧಿಸುವುದು ಬೇಡ. ಕಾಂಗ್ರೆಸ್ ಸಚಿವರು, ಶಾಸಕರು ಒಟ್ಟಾಗಿ ಕೈಜೋಡಿಸಿ ಜಿಲ್ಲೆಯ ಅಭಿವೃದ್ಧಿ ಕಡೆ ಗಮನಹರಿಸುತ್ತೇವೆ. ಅಭಿವೃದ್ಧಿಗೆ ನಾವು ಕುಮಾರಸ್ವಾಮಿ ಅವರೊಂದಿಗೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.ಕೇಂದ್ರ ಮಂತ್ರಿಯಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ದೆಹಲಿಯಲ್ಲೇ ಹೆಚ್ಚು ದಿನಗಳು ಇರಬೇಕಾಗುತ್ತದೆ. ಹಾಗಾಗಿ ಸಭೆಗಳಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಅಭಿವೃದ್ಧಿ ಮಾಡಲು ಸಭೆಗಳಿಗೆ ಬರಲೇಬೇಕೆಂಬ ನಿಯಮವೂ ಇಲ್ಲ. ಏನೇ ಅಭಿವೃದ್ಧಿಯ ಸಲಹೆಗಳಿದ್ದರೂ ಸಂಪರ್ಕ ಸಾಧಿಸಿಕೊಂಡು ಜಿಲ್ಲೆಯನ್ನು ಪ್ರಗತಿಯತ್ತ ಮುನ್ನಡೆಸಬೇಕು ಎಂದು ಕಾಂಗ್ರೆಸ್ಸಿಗರಲ್ಲಿ ಮನವಿ ಮಾಡಿದರು.
ಬೆಳೆಗಳಿಗೆ ತ್ವರಿತವಾಗಿ ನೀರು ಕೊಡಿ:ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಕೆಆರ್‌ಎಸ್ ಜಲಾಶಯದಲ್ಲಿ ೮೬ ಅಡಿ ನೀರು ದಾಖಲಾಗಿರುವುದರಿಂದ ತ್ವರಿತವಾಗಿ ಬೆಳೆಗಳಿಗೆ ನೀರು ಹರಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿರನ್ನು ಒತ್ತಾಯಿಸಿದರು.
ಬೆಳೆಗಳಿಗೆ ನೀರು ಕೊಡದಿರುವುದೂ ಚುನಾವಣೆಯಲ್ಲಿ ಜನರು ನಿಮ್ಮನ್ನು ಸೋಲಿಸುವುದಕ್ಕೆ ಒಂದು ಕಾರಣವಾಗಿದೆ. ಈಗಲಾದರೂ ಮಾಡಿರುವ ತಪ್ಪುಗಳಿಂದ ಎಚ್ಚೆತ್ತುಕೊಳ್ಳಿ. ಕೆಆರ್‌ಎಸ್‌ನಲ್ಲಿ ಸಾಕಷ್ಟು ನೀರಿರುವುದರಿಂದ ಎರಡು ಕಟ್ಟು ನೀರು ಕೊಡುವುದಕ್ಕೆ ಯಾವುದೇ ತೊಂದರೆಯೂ ಇಲ್ಲ. ಈ ಬಗ್ಗೆ ಶೀಘ್ರಗತಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಕರೆತು ನಿರ್ಧಾರ ಕೈಗೊಳ್ಳುವಂತೆ ಆಗ್ರಹಿಸಿದರು.ಎನ್‌ಡಿಎ ಸರ್ಕಾರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ ದೊರಕಿದ್ದು, ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಸಹಕಾರಿಯಾಗಲಿದೆ. ಜಿಲ್ಲೆಯ ಮೈಷುಗರ್ ಕಾರ್ಖಾನೆ ಅವರ ವ್ಯಾಪ್ತಿಗೆ ಬರಲಿದೆಯೋ, ಬಂದರೆ ಯಾವ ರೀತಿಯಲ್ಲಿ ಆಧುನೀಕರಣ ಮಾಡಬಹುದು ಎಂಬ ಬಗ್ಗೆಯೂ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸುತ್ತೇವೆ. ಜಿಲ್ಲೆಯಲ್ಲಿ ಸರ್ಕಾರಿ ಜಾಗಗಳು ಎಲ್ಲೆಲ್ಲಿವೆ ಎಂಬ ಬಗ್ಗೆ ಗುರುತು ಮಾಡಲಾಗುತ್ತಿದೆ. ಅಲ್ಲಿ ಯಾವ ಕೈಗಾರಿಕೆಗಳನ್ನು ಸ್ಥಾಪಿಸಿದರೆ ಅನುಕೂಲವಾಗಲಿದೆ ಎಂಬ ಬಗ್ಗೆಯೂ ಕುಮಾರಸ್ವಾಮಿ ಅವರು ನಮ್ಮೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದರು.
ಗೋಷ್ಠಿಯಲ್ಲಿ ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕರಾದ ಕೆ.ಸುರೇಶ್‌ಗೌಡ, ಡಾ.ಕೆ.ಅನ್ನದಾನಿ, ಮುಖಂಡರಾದ ಬಿ.ಆರ್.ರಾಮಚಂದ್ರ, ಅಮರಾವತಿ ಚಂದ್ರಶೇಖರ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಅಬ್ಬಾಸ್‌ಅಲಿ ಬೋಹ್ರಾ ಇದ್ದರು.