ಸಾರಾಂಶ
ಏ.23ರಂದು ಬೆಳಗ್ಗೆ 10.30 ಗಂಟೆಗೆ ಪಲಿಮಾರಿನಲ್ಲಿ ಜರಗುವ ಶ್ರೀ ವಿದ್ಯಾಮಾನ್ಯತೀರ್ಥರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.
ಕನ್ನಡಪ್ರಭ ವಾರ್ತೆ ಉಡುಪಿ
ಯತಿಶ್ರೇಷ್ಠರಾದ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಹೆಸರಿನಲ್ಲಿ ಅವರ ಕರಕಮಲ ಸಂಜಾತ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಅನುಗ್ರಹ ಪೂರ್ವಕವಾಗಿ ಕೊಡಮಾಡುವ ‘ಯಕ್ಷ ವಿದ್ಯಾಮಾನ್ಯ’ ಪ್ರಶಸ್ತಿಗೆ ಈ ಬಾರಿ ಬಡಗುತಿಟ್ಟಿನ ಶ್ರೇಷ್ಠ ಕಲಾವಿದರಾದ ಕೊಂಡದಕುಳಿ ರಾಮಚಂದ್ರ ಹೆಗಡೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 50 ಸಾವಿರ ರು.ಗಳ ನಿಧಿಯನ್ನು ಹೊಂದಿದೆ.ಬಡಗುತಿಟ್ಟಿನ ಪರಂಪರೆಯ ಪ್ರಾತಿನಿಧಿಕ ವೇಷಧಾರಿಯಾಗಿರುವ ಅವರು ಗುಂಡುಬಾಳ, ಪಂಚಲಿಂಗ, ಸಾಲಿಗ್ರಾಮ ಮೇಳಗಳಲ್ಲಿ ಕಲಾಸೇವೆಗೈದಿದ್ದಾರೆ. ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಸ್ವಂತ ಮೇಳ ಸ್ಥಾಪಿಸಿ, ಕಾಲಮಿತಿಯ ಪ್ರದರ್ಶನಗಳನ್ನು ನೀಡುತ್ತಾ ಬಂದಿರುತ್ತಾರೆ. ನಾಲ್ಕುವರೆ ದಶಕಗಳ ಕಲಾ ಜೀವನದಲ್ಲಿ ಹಲವು ಪೌರಾಣಿಕ ಪಾತ್ರಗಳನ್ನು ಅನನ್ಯವಾಗಿ ಚಿತ್ರಿಸಿ, ಯಕ್ಷಗಾನ ಕಲಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.
ಶ್ರೀ ಪಲಿಮಾರು ಮಠದ ಪರಂಪರೆಯಲ್ಲಿ ಬಂದಿರುವ, ಎಲ್ಲ ಮಂಗಳಕಾರ್ಯದಲ್ಲಿ ಪಠಿಸುವ ಮಂಗಲಾಷ್ಟಕವನ್ನು ಸನಾತನ ಜಗತ್ತಿಗೆ ನೀಡಿದವರು ಶ್ರೀ ರಾಜರಾಜೇಶ್ವರ ತೀರ್ಥರು. ಅವರ ಸಂಸ್ಮರಣೆಗಾಗಿ ನಾಡಿನ ಹಿರಿಯ ಜ್ಯೋತಿಷ್ಯ-ಆಗಮ-ಪುರೋಹಿತ ವಿದ್ವಾಂಸರಿಗೆ ‘ಶ್ರೀ ರಾಜರಾಜೇಶ್ವರ’ ಎಂಬ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಈ ಬಾರಿಯ ಪ್ರಶಸ್ತಿಯನ್ನು ಪೆರ್ಡೂರಿನ ಅನಂತಪದ್ಮನಾಭ ದೇವಸ್ಥಾನದ ಋಗ್ವೇದ ಪುರಾಣ ಉಪಾಧಿವಂತರಾಗಿ ಸೇವೆ ಸಲ್ಲಿಸುತ್ತಿದ್ದ, ಋಗ್ವೇದ ಯಜುರ್ವೇದ ಶಾಖೆಯ ಪೌರೋಹಿತ್ಯದಲ್ಲಿ ನಿಷ್ಣಾತರಾದ 88 ವರ್ಷದ ಇಳಿ ವಯಸ್ಸಿನ ರಾಮದಾಸ ಆಚಾರ್ಯ ಅವರ ಸೇವೆಯನ್ನು ಗಮನಿಸಿ, ಪ್ರಶಸ್ತಿಯನ್ನು ನೀಡಲಾಗುತ್ತಿದೆ.ಅಲ್ಲದೇ ಶ್ರೀ ಮಠದ ಪರಂಪರೆಯಲ್ಲಿ, ಶತಮಾನದ ಶಕಪುರುಷರೆನಿಸಿದ ಶ್ರೀ ವಿದ್ಯಾಮಾನ್ಯ ತೀರ್ಥರ ಸಂಸ್ಮರಣೆಗಾಗಿ ನಾಡಿನ ಹಿರಿಯ ಪಾಕ ತಜ್ಞರಿಗೆ ‘ಪಾಕ ವಿದ್ಯಾಮಾನ್ಯ’ ಎಂಬ ಪ್ರಶಸ್ತಿಯನ್ನು ಈ ವರ್ಷದಿಂದ ಪ್ರಾರಂಭಿಸಲಾಗುತ್ತಿದೆ. ಮೊದಲ ವರ್ಷದ ಪ್ರಶಸ್ತಿಯನ್ನು ಶಿರ್ವ ಗ್ರಾಮದ ಪದುಮಲೆಯ ‘ಕಂದಣ್ಣ’ ಎಂದೇ ಚಿರಪರಚಿತರಾದ, ಅಡುಗೆ ನಿಷ್ಣಾತರಾದ 86 ವರ್ಷದ ವೆಂಕಟ ಸುಬ್ರಾಯ ಭಟ್ ಅವರಿಗೆ ನೀಡಲಾಗುತ್ತಿದೆ.
ಏ.23ರಂದು ಬೆಳಗ್ಗೆ 10.30 ಗಂಟೆಗೆ ಪಲಿಮಾರಿನಲ್ಲಿ ಜರಗುವ ಶ್ರೀ ವಿದ್ಯಾಮಾನ್ಯತೀರ್ಥರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಪಲಿಮಾರು ಮಠದ ದಿವಾನರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.