ಮಾರ್ಚ್‌ 17 ರಂದು ನಟನದಲ್ಲಿ ಉಷಾಹರಣ ನಾಟಕ ಪ್ರದರ್ಶನ

| Published : Mar 15 2024, 01:17 AM IST

ಸಾರಾಂಶ

ಕನ್ನಡ ಭಾಷೆಯ ಇಂದಿನ ಗತಿಸ್ಥಿತಿಯ ಸಂದರ್ಭದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುವ, ಚರ್ಚೆಗೆ ಹಚ್ಚುವ ಪ್ರಯತ್ನ ಈ ಪ್ರಯೋಗದ ಹಿಂದಿದೆ. ಯುದ್ಧ ಮತ್ತು ಪ್ರೀತಿಯ ಸಾರ್ವಕಾಲಿಕ ಮೌಲ್ಯವನ್ನು ಸಾರುವ ಈ ನಾಟಕ ಈ ಕಾರಣಕ್ಕಾಗಿ ಸಮಕಾಲೀನವಾಗಿದೆ. ಉಷಾಹರಣದಲ್ಲಿ ಬಳಸಲಾದ ರಂಗತಂತ್ರ ಒಂದರ್ಥದಲ್ಲಿ ತಳಹದಿಯಿಂದ ರಂಗಭೂಮಿ ಕುರಿತು ಅರಿವು ಮೂಡಿಸಿಕೊಳ್ಳುವ ರಂಗ ಪ್ರಯೋಗಗಳ ಆಧುನಿಕತೆಯನ್ನು ಮುರಿದು ಕಟ್ಟುವ ಕೆಲಸ.

ಕನ್ನಡಪ್ರಭ ವಾರ್ತೆ ಮೈಸೂರು

ನಟನ ರಂಗಶಾಲೆಯು ತನ್ನ ಚಟುವಟಿಕೆಯ ಭಾಗವಾಗಿ ಮಾ.17ರ ಸಂಜೆ 6.30ಕ್ಕೆ ಸರಿಯಾಗಿ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ನಟನದ ರೆಪರ್ಟರಿ ಕಲಾವಿದರಿಂದ ಶಾಂತಕವಿ (ಸಕ್ಕರಿ ಬಾಳಾಚಾರ್ಯ) ಅವರು ರಚಿಸಿರುವ, ಕನ್ನಡದ ಮೊದಲ ಸ್ವತಂತ್ರ ನಾಟಕ ಉಷಾಹರಣವು ಪ್ರಯೋಗವನ್ನು ಕಾಣಲಿದೆ. ಈ ಪ್ರಸ್ತುತಿಯ ಸಂಗೀತ, ವಿನ್ಯಾಸ ಮತ್ತು ನಿರ್ದೇಶನ ಡಾ. ಶ್ರೀಪಾದ ಭಟ್‌ ಅವರದ್ದು.

ಕರ್ನಾಟಕದ ಮೊದಲ ನಾಟಕ ಕಂಪನಿಯ ಸಂಸ್ಥಾಪಕರು ಎನ್ನಲಾದ ಹಾವೇರಿಯ ಶಾಂತಕವಿಗಳ ಮೊದಲ ನಾಟಕ ಉಷಾಹರಣ. 1870 ಪೂರ್ವದಲ್ಲೇ ಈ ನಾಟಕ ಬರೆದ ಶಾಂತಕವಿಗಳು ಕನ್ನಡ ಪಾರಮ್ಯದ ವಿಚಾರದಲ್ಲಿ ಪ್ರಶ್ನಾತೀತ ಒಲವು ತಾಳಿಸಿದ್ದವರು. ಆಗ ಕನ್ನಡದ ಮೇಲೆ ಮರಾಠಿ ನಾಟಕಗಳ ಆಕ್ರಮಣಕಾರಿ ಒತ್ತುವರಿ ನಡೆದಿತ್ತು. ಈಗ ಇದೇ ಕನ್ನಡ ರಂಗಭೂಮಿ ಬಗೆ ಬಗೆಯ ಆಕ್ರಮಣಗಳ ಆಡುಂಬೋಲವಾಗಿ ಅಂದಿನದೇ ಪರಿಸ್ಥಿತಿಯ ಪುನರಾವರ್ತನೆಯೂ ಆಗಿದೆ.

ಒಂದೂವರೆ ಶತಮಾನಕ್ಕಿಂತಲೂ ಹಳೆಯದಾದ ಈ ನಾಟಕವನ್ನು ಪ್ರಯೋಗಕ್ಕೆ ಎತ್ತಿಕೊಳ್ಳುವ ಮೂಲಕ ಕನ್ನಡ-ಕರ್ನಾಟಕ, ಭಾಷೆ, ರಂಗಭೂಮಿ ಕುರಿತಾದ ಚರ್ಚೆಯನ್ನು ಹುಟ್ಟು ಹಾಕುವ ಮಹತ್ವದ ಆಕಾಂಕ್ಷೆ ಈ ನಾಟಕದ್ದು. ಉಷಾಹರಣದಲ್ಲಿ ಬಳಸಲಾದ ರಂಗತಂತ್ರ ಒಂದರ್ಥದಲ್ಲಿ ತಳಹದಿಯಿಂದ ರಂಗಭೂಮಿ ಕುರಿತು ಅರಿವು ಮೂಡಿಸಿಕೊಳ್ಳುವ ರಂಗ ಪ್ರಯೋಗಗಳ ಆಧುನಿಕತೆಯನ್ನು ಮುರಿದು ಕಟ್ಟುವ ಕೆಲಸ.

ಕನ್ನಡ ಭಾಷೆಯ ಇಂದಿನ ಗತಿಸ್ಥಿತಿಯ ಸಂದರ್ಭದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುವ, ಚರ್ಚೆಗೆ ಹಚ್ಚುವ ಪ್ರಯತ್ನ ಈ ಪ್ರಯೋಗದ ಹಿಂದಿದೆ. ಯುದ್ಧ ಮತ್ತು ಪ್ರೀತಿಯ ಸಾರ್ವಕಾಲಿಕ ಮೌಲ್ಯವನ್ನು ಸಾರುವ ಈ ನಾಟಕ ಈ ಕಾರಣಕ್ಕಾಗಿ ಸಮಕಾಲೀನವಾಗಿದೆ. ರಂಗಾಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ. 99455 55570, 94804 68327, 72595 37777 ಸಂಪರ್ಕಿಸಬಹುದು.