ಸಾರಾಂಶ
ಕನ್ನಡಪ್ರಭ ವಾರ್ತೆ ಮುನಿರಾಬಾದ
ವಿಜಯದಶಮಿ ದಿನದಂದು ಸುಮಾರು ಒಂದು ಲಕ್ಷಕ್ಕೂ ಅಧಿಕ ಭಕ್ತಾಧಿಗಳು ಇಲ್ಲಿನ ಪ್ರಸಿದ್ಧ ಶಕ್ತಿ ಪೀಠ ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದರು.ರಾತ್ರಿಯಿಂದಲೇ ಸಾಲುಗಟ್ಟಿ ನಿಂತ ಭಕ್ತಾದಿಗಳು, ಬೆಳಗ್ಗೆ ದೇವಸ್ಥಾನದ ಬಾಗಿಲು ತೆರೆಯತ್ತಿದ್ದಂತೆ ಅಮ್ಮನವರ ದರ್ಶನ ಪಡೆಯಲು ಪ್ರಾರಂಭಿಸಿದರು. ವಿಜಯದಶಮಿ ನಿಮಿತ್ತ ಇಂದು ಶ್ರೀ ಹುಲಿಗೆಮ್ಮ ದೇವಿಗೆ ವಿಶೇಷ ಅಲಂಕಾರ ಮಾಡಲಾಯಿತು. ದೇವಸ್ಥಾನವನ್ನು ತಳಿರು, ತೋರಣ ಹಾಗೂ ಹೂವಿನಿಂದ ಸಿಂಗರಿಸಲಾಗಿತ್ತು.
ನವರಾತ್ರಿಯಲ್ಲಿ 3 ಲಕ್ಷಕ್ಕೂ ಅಧಿಕ ಭಕ್ತರ ಭೇಟಿ:ನವರಾತ್ರಿಯು ಅ. 3ರಿಂದ ಪ್ರಾರಂಭವಾಗಿದ್ದು, ಅಂದಿನಿಂದ ಇಂದಿನವರೆಗೆ ಸುಮಾರು 3 ಲಕ್ಷಕ್ಕೂ ಅಧಿಕ ಜನ ಭಕ್ತಾಧಿಗಳು ಹುಲಿಗೆಮ್ಮ ದೇವಿ ದರ್ಶನ ಪಡೆದಿದ್ದಾರೆ. ಪ್ರತಿನಿತ್ಯ ದೇವಸ್ಥಾನಕ್ಕೆ 10ರಿಂದ 15 ಸಾವಿರ ಭಕ್ತಾದಿಗಳು ಆಗಮಿಸಿ ಅಮ್ಮನವರ ದರ್ಶನ ಪಡೆದರು. ಮಂಗಳವಾರ ಮತ್ತು ಶುಕ್ರವಾರದಂದು ದೇವಸ್ಥಾನಕ್ಕೆ ಆಗಮಿಸಿದ ಭಕ್ತರ ಸಂಖ್ಯೆ 50 ಸಾವಿರ ದಾಟಿತ್ತು. ವಿಜಯದಶಮಿ ದಿನದಂದು ಒಂದು ಲಕ್ಷಕ್ಕೂ ಅಧಿಕ ಭಕ್ತಾಧಿಗಳು ದೇವಿ ದರ್ಶನ ಪಡೆದರು.
ನವರಾತ್ರಿ ನಿಮಿತ್ತ 10 ದಿನಗಳ ಕಾಲ ಪ್ರತಿನಿತ್ಯ ದೇವಸ್ಥಾನದಲ್ಲಿ ದುರ್ಗಾ ಹೋಮ ನೆರವೇರಿಸಲಾಯಿತು.ಅಮ್ಮನವರಿಗೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳ್ಳಿಮಂಟಪದಲ್ಲಿ ಶಾರ್ದೂಲ ವಾಹನ ಅಲಂಕಾರ, ಸಿಂಹವಾಹನ ಅಲಂಕಾರ, ಮಯೂರ ವಾಹನ ಅಲಂಕಾರ, ಅಶ್ವ ವಾಹನ ಅಲಂಕಾರ ಹಾಗೂ ಗಜವಾಹನ ಅಲಂಕಾರ ಮಾಡಲಾಯಿತು.
ನವರಾತ್ರಿ ನಿಮಿತ್ತ ದೇವಸ್ಥಾನದಲ್ಲಿ ವಿವಿಧ ಕಲಾ ತಂಡಗಳಿಂದ ಭಕ್ತಿ ಸಂಗೀತ ಕಾರ್ಯಕ್ರಮ, ಭರತ ನಾಟ್ಯ, ಯಕ್ಷಗಾನ, ಸುಗಮ ಸಂಗೀತ ಹಾಗೂ ಮಾತಾ ನಾಟಕ ಪ್ರದರ್ಶನ ಕಾರ್ಯಕ್ರಮ ನಡೆದವು.ವಿಜಯದಶಮಿ ಪ್ರಯುಕ್ತ ಮಧ್ಯಾಹ್ನ ಅಮ್ಮನವರ ಉತ್ಸವ ಮೂರ್ತಿಯನ್ನು ಶಿವಪುರ ರಸ್ತೆಯಲ್ಲಿರುವ ಶಮಿ ವೃಕ್ಷಕ್ಕೆ ತೆಗೆದುಕೊಂಡು ಹೋಗಿ ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಅಮ್ಮನವರ ಉತ್ಸವ ಮೂರ್ತಿಯನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ದೇವಸ್ಥಾನಕ್ಕೆ ತಂದು ದೇವಸ್ಥಾನದಲ್ಲಿ ತೊಟ್ಟಿಲು ಸೇವೆ ಮಾಡಲಾಯಿತು. ನಂತರ ಮಂಗಳಾರತಿಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.