ಸಾರಾಂಶ
45 ಸಾವಿರಕ್ಕೂ ಹೆಚ್ಚು ತಂಬಾಕು ಬೆಳೆಗಾರರು ಇರುವ ಈ ಕರ್ನಾಟದಲ್ಲಿ ಇದೊಂದೇ ಸಂಶೋಧನಾ ಕೇಂದ್ರವಿದೆ.
ಕನ್ನಡಪ್ರಭ ವಾರ್ತೆ ಹುಣಸೂರು
ಪಟ್ಟಣದ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರ (ಸಿಟಿಆರ್ಐ)ದಲ್ಲಿ ಐಸಿಎಆರ್-ಸಿಟಿಆರ್ಐ ಸಹಯೋಗದಲ್ಲಿ 13ನೇ ವಾರ್ಷಿಕ ಆಲ್ ಇಂಡಿಯಾ ನೆಟ್ ವರ್ಕ್ ಪ್ರಾಜೆಕ್ಟ್ ಆನ್ ಟೊಬ್ಯಾಕೋ ಕುರಿತು ರಾಷ್ಟ್ರಮಟ್ಟದ ಕಾರ್ಯಾಗಾರದ ಎರಡನೇ ಮತ್ತು ಅಂತಿಮ ದಿನವಾದ ಶುಕ್ರವಾರ ಆಯೋಜನೆಗೊಂಡಿದ್ದ ವಿಜ್ಞಾನಿಗಳು ಮತ್ತು ರೈತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ರೈತರು ತಮ್ಮ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು.ಚಿಲ್ಕುಂದ ಹರಾಜು ಮಾರುಕಟ್ಟೆಯ ರೈತ ಸಣ್ಣತಮ್ಮೇಗೌಡ ಮಾತನಾಡಿ, 45 ಸಾವಿರಕ್ಕೂ ಹೆಚ್ಚು ತಂಬಾಕು ಬೆಳೆಗಾರರು ಇರುವ ಈ ಕರ್ನಾಟದಲ್ಲಿ ಇದೊಂದೇ ಸಂಶೋಧನಾ ಕೇಂದ್ರವಿದೆ. ಕೇಂದ್ರದಲ್ಲಿ ವಿಜ್ಞಾನಿಗಳ ಕೊರತೆಯೂ ಕಾಡುತ್ತಿದೆ. ಹೊಸ ತಳಿಗಳ ಅವಶ್ಯಕತೆ ಇದೆ. ಇದೆಲ್ಲವನ್ನೂ ಸರಿಪಡಿಸಿಕೊಂಡು ರೈತರಿಗೆ ಬೆಂಬಲವಾಗಿ ವಿಜ್ಞಾನಿಗಳು ನಿಲ್ಲಬೇಕಿದ್ದು ಈ ಕುರಿತು ಗಮನಹರಿಸಲು ಕೋರಿದರು.
ಪ್ರಗತಿಪರ ರೈತ ನಾಗೇಶ್ ಮಾತನಾಡಿ, ಈ ವಾತಾವರಣಕ್ಕೆ ಅವಶ್ಯಕವಾದ ಮತ್ತು ಅನುಕೂಲಕರವಾದ ತಳಿಗಳ ಅಭಿವೃದ್ಧಿ ಇಂದಿನ ಜರೂರಾಗಿದೆ. ರೈತರಲ್ಲಿ ಹೊಸ ತಳಿಗಳು ಮತ್ತು ಹೊಸ ಪದ್ಧತಿಗಳ ಕುರಿತು ಅರಿವಿನ ಕೊರತೆ ಇದ್ದು, ಕ್ಲಸ್ಟರ್ ಮಟ್ಟದಲ್ಲಿ ಇಂತಹ ಕಾರ್ಯಾಗಾರಗಳು ಆಯೋಜನಗೊಂಡಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು. ತಂಬಾಕಿಗೆ ಅವಶ್ಯವಾದ ಮೂರು ಬಗೆಯ ರಾಸಾಯನಿಕ ಗೊಬ್ಬರಗಳ ನೀಡುವಿಕೆ ಕೃಷಿಕಾರ್ಮಿರಕ ಕೊರತೆಯಿಂದಾಗಿ ಕಷ್ಟಸಾಧ್ಯವಾಗುತ್ತಿದೆ. ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಮೂರು ಗೊಬ್ಬರಗಳನ್ನು ಮಿಶ್ರಣ ಮಾಡಿ ಒಂದೇ ರೂಪದಲ್ಲಿ ನೀಡುವತ್ತ ಸಂಶೋಧನೆ ನಡೆಸಿದಲ್ಲಿ ಗೊಬ್ಬರಗಳ ಸಮರ್ಪಕ ನೀಡುವಿಕೆಯ ಮೂಲಕ ಗಿಡಗಳ ಸಮಾನಾಂತರ ಬೆಳವಣಿಗೆ ಸಾಧ್ಯವಾಗಲಿದೆ ಎಂದರು.ರೈತ ಕಾಳೇಗೌಡ, ರೈತ ನಿಲುವಾಗಿಲು ಪ್ರಭಾಕರ್ ಮಾತನಾಡಿದರು.
ಈ ಕುರಿತು ಸಂಶೋಧನಾ ಸಂಸ್ಥೆಯಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಡಾ.ಎಸ್. ರಾಮಕೃಷ್ಣನ್ ತಿಳಿಸಿದರು.ರೈತ ಶ್ರೀಶೈಲ ಮಾತನಾಡಿ, ತಂಬಾಕು ಕೃಷಿಯಲ್ಲಿ ನರ್ಸರಿ ಕಾಂರ್ವು ಎರಡು ತಿಂಗಳ ದೀರ್ಘ ಅವಧಿಯನ್ನು ಹೊಂದಿದ್ದು ನೇರವಾಗಿ ಸಸಿಯನ್ನು ಭೂಮಿಗೆ ನಾಟಿ ಮಾಡಲು ಅವಶ್ಯಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಕೋರಿದರು.
ವಿಜ್ಞಾನಿ ಡಾ. ಮಹದೇವಸ್ವಾಮಿ ಮಾತನಾಡಿ, ತಂಬಾಕು ಕೃಷಿಯಲ್ಲಿ ರೈತರು ಅನುಭವಿಸುತ್ತಿರುವ ಸಂಕಷ್ಟಗಳಿಗೆ ಉತ್ತಮ ಪರಿಹಾರವೂ ಇದೆ. ರೈತರು ರಿಡ್ಜ್ ಪ್ಲಾಂಟೇಶನ್ ಪದ್ಧತಿ ಅನುಸರಿಸುವುದು, ನಾಟಿ ಮಾಡುವುದಕ್ಕೂ ಮುನ್ನ ಭೂಮಿಗೆ ಕೆಲ ಪೋಷಕಾಂಶಗಳನ್ನು ನೀಡುವುದು ಮತ್ತು ಸಕಾಲದಲ್ಲಿ ನರ್ಸರಿ ಕಾರ್ಯ ಆರಂಭಿಸಿದಲ್ಲಿ ಶೇ. 90 ರಷ್ಟು ಬೆಳೆ ನಿಮ್ಮ ಕೈಸೇರಲಿದೆ ಎಂದರು.ರೈತರಾದ ಮೂರ್ತಿ, ಮರೀಗೌಡ, ಅಶೋಕ್ ಮುಂತಾದವರು ಸಮಸ್ಯೆಗಳನ್ನು ತಿಳಿಸಿದರು.
ರೈತರ ಸಮಸ್ಯೆಗಳನ್ನು ಸಿಟಿಆರ್.ಐ ರಾಜಮಂಡ್ರಿಯ ನಿರ್ದೇಶಕ ಡಾ. ಶೇಷು ಮಾಧವ್, ಐಸಿಎಆರ್ ನ ಎಡಿಜಿ ಪ್ರಸಂತ ಕೆ. ದಾಶ್, ನೋಡಲ್ ಅಧಿಕಾರಿ ಡಾ. ಸರಳಾ ಆಲಿಸಿದರು. ವಿಜ್ಞಾನಿಗಳು ಮತ್ತು ರೈತರು ಇದ್ದರು.