ಒಂದಾನೊಂದು ಕಾಲದಲ್ಲಿ, ಮೊಬೈಲ್‌ ಇಲ್ಲದ ಊರಿನಲ್ಲಿ: ಮಾಣಿಯಲ್ಲಿ ವಿಶೇಷ ಬೇಸಿಗೆ ಶಿಬಿರದ ಗಮ್ಮತ್ತು

| Published : Apr 10 2025, 01:15 AM IST

ಒಂದಾನೊಂದು ಕಾಲದಲ್ಲಿ, ಮೊಬೈಲ್‌ ಇಲ್ಲದ ಊರಿನಲ್ಲಿ: ಮಾಣಿಯಲ್ಲಿ ವಿಶೇಷ ಬೇಸಿಗೆ ಶಿಬಿರದ ಗಮ್ಮತ್ತು
Share this Article
  • FB
  • TW
  • Linkdin
  • Email

ಸಾರಾಂಶ

ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಅಜ್ಜಿಮನೆ ಹೆಸರಿನ ಶಿಬಿರ ಭಾಗವಹಿಸಿದ ಮಕ್ಕಳಿಗೆ ವಿಶೇಷ ಅನುಭವ ನೀಡಿತು. ‘ಒಂದಾನೊಂದು ಕಾಲದಲ್ಲಿ, ಮೊಬೈಲ್‌ ಇಲ್ಲದ ಊರಿನಲ್ಲಿ’ ಎಂಬ ಉಪಶೀರ್ಷಿಕೆಯೊಂದಿಗೆ ಗ್ರಾಮೀಣ ಸೊಬಗಿನೊಂದಿಗೆ ಶಿಬಿರ ನಡೆಯಿತು.

ಮೌನೇಶ ವಿಶ್ವಕರ್ಮ

ಕನ್ನಡಪ್ರಭ ವಾರ್ತೆ ಬಂಟ್ವಾಳ

ಹಾಳೆಯಲ್ಲಿ ಜಾರಿದರು, ತೆಂಗಿನ ಗರಿಯಲ್ಲಿ ಗಿರಿಗಿಟಿ ಮಾಡಿದರು, ಮಣ್ಣಿನಲ್ಲಿ ಮಡಿಕೆಯನ್ನೂ ಮಾಡಿ ಕುಣಿದು ಕುಪ್ಪಳಿಸಿದರು.

ಹೌದು ಇದು ಮಾಣಿ ಪೆರಾಜೆಯ ‘ಅಜ್ಜಿಮನೆ’ಯಲ್ಲಿ ಕಂಡುಬಂದ ಸನ್ನಿವೇಶ. ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಅಜ್ಜಿಮನೆ ಹೆಸರಿನ ಶಿಬಿರ ಭಾಗವಹಿಸಿದ ಮಕ್ಕಳಿಗೆ ವಿಶೇಷ ಅನುಭವ ನೀಡಿತು.

‘ಒಂದಾನೊಂದು ಕಾಲದಲ್ಲಿ, ಮೊಬೈಲ್‌ ಇಲ್ಲದ ಊರಿನಲ್ಲಿ’ ಎಂಬ ಉಪಶೀರ್ಷಿಕೆಯೊಂದಿಗೆ ರೂಪುಗೊಂಡ ಶಿಬಿರದಲ್ಲಿ ಮಹರಾಷ್ಟ್ರ, ಬೆಂಗಳೂರು, ಮಂಗಳೂರು,ಪುತ್ತೂರು ಬಿ.ಸಿ.ರೋಡು, ಕಲ್ಲಡ್ಕ, ಉಪ್ಪಿನಂಗಡಿ, ವಿಟ್ಲ ಸಹಿತ ಸಹಿತ ಜಿಲ್ಲೆಯ ೪೦ಕ್ಕೂ ಅಧಿಕ ವಿದ್ಯಾಸಂಸ್ಥೆಗಳ ೨೧೧ ವಿದ್ಯಾರ್ಥಿಗಳು ಭಾಗವಹಿಸಿದರು.

ಮೊದಲ ದಿನವೇ ಅಜ್ಜಿ ಮನೆಗೆ ಭೇಟಿ ಕೊಟ್ಟು ಮಕ್ಕಳನ್ನು ಅಜ್ಜಿಕಾಲಕ್ಕೆ ಕರೆದೊಯ್ದವರು ಮಾಣಿಯ ಪ್ರಪುಲ್ಲಾ ರೈ. ಮಕ್ಕಳಿಗೆ ಹಿಂದಿನ ಕಾಲದಲ್ಲಿ ಮನೆಯೊಳಗೆ ಇದ್ದ ಪರಿಸ್ಥಿತಿ, ಆಗಿನ ಆಟಗಳು, ಹಾಡುಗಳ ಬಗ್ಗೆ ವಿವರಿಸಿದರು. ಮನೆಯ ಸುತ್ತಮುತ್ತ ಸಿಗುವ ಪ್ರಾಕೃತಿಕ ವಸ್ತುಗಳನ್ನು ಬಳಸಿ ಆಟಿಕೆ ತಯಾರಿಸುವ ವಿವಿಧ ಚಟುವಟಿಕೆಯಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.ಮೂರನೇ ದಿನ ಅತ್ರಬೈಲು ದಿ.ರಾಮದಾಸ್‌ ರೈ ಗುತ್ತಿನ ಮನೆಗೆ ಭೇಟಿ ನೀಡಿದ ಎಲ್ಲಾ ಮಕ್ಕಳೂ ಅಲ್ಲಿನ ವಿನ್ಯಾಸ ಕಂಡು ಅಚ್ಚರಿಪಟ್ಟರು, ಟಯರ್‌ ನಲ್ಲಿ ಕೋಲ್ಚಕ್ರ ಆಡಿದರಲ್ಲದೆ, ತೋಟ, ಗದ್ದೆಗಳಲ್ಲಿಯೇ ವಿವಿಧ ಆಟಗಳನ್ನು ಆಡಿದ ಮಕ್ಕಳು ತೆಂಗಿನ ಗರಿಯ ಕಾಂಡದ (ಕೊತ್ತಳಿಗೆ) ಬ್ಯಾಟ್‌ ನಲ್ಲಿ ಕ್ರಿಕೆಟ್‌ ಆಡಿದರು.

ಸಾಬೂನಿನ ನೀರಿನಲ್ಲಿ ಗುಳ್ಳೆ ಮಾಡಿ ಹಾರಿಸಿ ಖುಷಿ ಹಂಚಿಕೊಂಡ ಮಕ್ಕಳು ಗೋಲಿ, ಲಗೋರಿ, ಕಲ್ಲಾಟ, ಎಲೆಯಲ್ಲಿ ಪೀಪಿ ಊದುವ ಚಟುವಟಿಕೆಗಳ ಸಹಿತ ವಿವಿಧ ಗ್ರಾಮೀಣ ಆಟಗಳನ್ನು ಆಡಿದರು. ದನಗಳಿಗೆ ಮೇವು ಉಣ್ಣಿಸಿ ಖುಷಿಪಟ್ಟರು.

ತೆಂಗಿನ ಗೆರಟೆಯಲ್ಲಿ ಸೌಟು ಮಾಡುವ ಹಿರಿಯ ಕುಶಲಕರ್ಮಿ, ಮಡಿಕೆ ಮಾಡುವ ಕುಂಬಾರ, ಬುಟ್ಟಿ ಹೆಣೆಯುವ ಮೇದಾರ ಹೀಗೆ ಹಲವರ ಕೌಶಲ್ಯಗಳನ್ನು ಮಕ್ಕಳಿಗೆ ಪರಿಚಯಿಸಲಾಯಿತು. ಹಲಸಿನ ಹಣ್ಣು ಕೊಯ್ಯುವುದರಿಂದ ತೊಡಗಿ, ಹಪ್ಪಳ ತಯಾರಿಸುವ ಪ್ರಾತ್ಯಕ್ಷಿಕೆಯನ್ನು ಮಕ್ಕಳಿಂದಲೇ ಮಾಡಿಸಲಾಯಿತು.

ಗೇರುಬೀಜ ಬೆಂಕಿಯಲ್ಲಿ ಸುಟ್ಟು ತಿನ್ನುವ ರೀತಿ, ಹಲಸಿನ ಎಲೆಯಲ್ಲಿ ಕೊಟ್ಟಿಗೆ ಕಟ್ಟುವ ಕಲೆ ಹೀಗೆ ಹಲವು ಗ್ರಾಮೀಣ ವಿಚಾರಧಾರೆಗಳಲ್ಲಿ ಎಲ್ಲಾ ಮಕ್ಕಳು ಭಾಗವಹಿಸಿದ್ದರು.

ಈ ಮೊದಲ ಹಂತದ ಅಜ್ಜಿಮನೆ ಶಿಬಿರವನ್ನು ಬಾಲವಿಕಾಸ ವಿದ್ಯಾಸಂಸ್ಥೆ ಹೊರತುಪಡಿಸಿ, ವಿವಿಧ ಶಾಲಾ ಮಕ್ಕಳಿಗೆಂದೇ ಏರ್ಪಡಿಸಲಾಗಿದ್ದು, ಉಚಿತ ವಾಹನದ ವ್ಯವಸ್ಥೆ ಹಾಗೂ ಉಪಹಾರ ಕಲ್ಪಿಸಲಾಗಿತ್ತು.

ಉಪಹಾರದಲ್ಲೂ ದೇಸಿ ಪದ್ಧತಿ ಪರಿಚಯಿಸುವ ಸಲುವಾಗಿ ಅಕ್ಕಿ ಉಂಡೆ, ಕಡ್ಲೆ ಅವಲಕ್ಕಿ, ಪಾನಕ, ಹುರಿಉಂಡೆ, ಉಪ್ಪಿಟ್ಟು, ದಾಸವಾಳ ಪಾನೀಯ, ಜಂಬು ನೇರಳೆ ಹಣ್ಣು ಮೊದಲಾದವುಗಳನ್ನು ನೀಡಲಾಗಿತ್ತು.

ಹಳೆ ಕಾಲದ ಬಾಲಮಂಗಳ, ತುಂತುರು, ಚಂದಮಾಮ, ಮಯೂರ, ಮಂಗಳ ಮೊದಲಾದ ಪಾಕ್ಷಿಕ , ವಾರಪತ್ರಿಕೆಗಳನ್ನೂ ಮಕ್ಕಳಿಗೆ ಪರಿಚಯಿಸಲಾಯಿತು.

ಶಿಕ್ಷಕರೇ ಸಂಪನ್ಮೂಲ ವ್ಯಕ್ತಿಗಳು:

ಶಾಲಾ ಸಂಚಾಲಕ ಪ್ರಹ್ಲಾದ್‌ ಜೆ ಶೆಟ್ಟಿ ಮಾರ್ಗದರ್ಶನದಲ್ಲಿ, ಕಾರ್ಯದರ್ಶಿ ಮಹೇಶ್‌ ಶೆಟ್ಟಿ ಜೆ. ನೇತೃತ್ವದಲ್ಲಿ, ಶಾಲಾ ಮುಖ್ಯಶಿಕ್ಷಕಿ ಸುಪ್ರಿಯಾ ಡಿ. ಪರಿಕಲ್ಪನೆಯಲ್ಲಿ ಮೂಡಿ ಬಂದ ಅಜ್ಜಿಮನೆ ಶಿಬಿರವನ್ನು ಬಾಲವಿಕಾಸ ವಿದ್ಯಾ ಸಂಸ್ಥೆಯ ಶಿಕ್ಷಕರೇ ಸಂಪನ್ಮೂಲ ವ್ಯಕ್ತಿಗಳಾಗಿ ನಿರ್ವಹಿಸಿದ್ದು ವಿಶೇಷವಾಗಿತ್ತು, ಭಾನುವಾರ ಎಲ್ಲಾ ಮಕ್ಕಳ ಪೋಷಕರಿಗೂ ವಿವಿಧ ಮನರಂಜನಾ ಆಟೋಟ ಸ್ಪರ್ಧೆಗಳ ಜೊತೆ ಶೈಕ್ಷಣಿಕ ಮಾಹಿತಿ ಕಾರ್ಯಾಗಾರವನ್ನೂ ಏರ್ಪಡಿಸಲಾಗಿತ್ತು.

................................................................................................................

ಅಜ್ಜಿಮನೆಯ ಪರಿಕಲ್ಪನೆಯಲ್ಲಿಯೇ ಬಾಲವಿಕಾಸ ವಿದ್ಯಾ ಸಂಸ್ಥೆಯಲ್ಲಿ ಸಾಂಪ್ರದಾಯಿಕ ತಳಹದಿಯ ಶಿಕ್ಷಣ ನೀಡಲಾಗುತ್ತಿದೆ.

- ಸುಪ್ರಿಯಾ ಡಿ. ಮುಖ್ಯ ಶಿಕ್ಷಕಿ, ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ-ಮಾಣಿ ಪೆರಾಜೆ.

................ಮೊದಲ ಹಂತದಲ್ಲಿ ಬೇರೆ ಶಾಲೆಗಳ ಮಕ್ಕಳಿಗೆ ಈ ಅಜ್ಜಿಮನೆ ಶಿಬಿರ ಏರ್ಪಡಿಸಲಾಗಿದ್ದು, ನಮ್ಮ ಶಾಲೆಯ ಮಕ್ಕಳಿಗೆ ಮೇ ತಿಂಗಳಿನಲ್ಲಿ ಆಯೋಜಿಸುತ್ತೇವೆ.

- ಮಹೇಶ್‌ ಜೆ.ಶೆಟ್ಟಿ, ಕಾರ್ಯದರ್ಶಿ, ಬಾಲವಿಕಾಸ ಟ್ರಸ್ಟ್‌ ಮಾಣಿ.