ಸಾರಾಂಶ
ಆಧುನಿಕತೆಯ ಭರಾಟೆಯಲ್ಲಿರುವ ನಮಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ನಮ್ಮ ಆರೋಗ್ಯದ ಕಡೆ ಗಮನಹರಿಸುವುದನ್ನು ಮತ್ತೊಮ್ಮೆ ನೆನಪು ಮಾಡಿಕೊಟ್ಟಿದೆ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು.
ರಾಣಿಬೆನ್ನೂರು: ಆಧುನಿಕತೆಯ ಭರಾಟೆಯಲ್ಲಿರುವ ನಮಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ನಮ್ಮ ಆರೋಗ್ಯದ ಕಡೆ ಗಮನಹರಿಸುವುದನ್ನು ಮತ್ತೊಮ್ಮೆ ನೆನಪು ಮಾಡಿಕೊಟ್ಟಿದೆ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು. ಇಲ್ಲಿನ ಮೃತ್ಯುಂಜಯ ನಗರದ ಚೆನ್ನೇಶ್ವರ ಮಠದ ವಾಗೀಶ ಪಂಡಿತಾರಾಧ್ಯ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಜ್ಞಾನವಾಹಿನಿ ಮಾಸಿಕ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿಶ್ವಕ್ಕೆ ಗುರುವಾಗಿರುವ ಭಾರತದಲ್ಲಿ ನೆಲೆಸಿದ್ದ ಋಷಿಮುನಿಗಳು ವಯಸ್ಸಿಗನಗುಣವಾಗಿರುವ ಯೋಗಾಸನಗಳನ್ನು ಕಂಡುಕೊಂಡು ನಮಗೆ ನೀಡಿದ್ದಾರೆ. ವಯಸ್ಸಿಗನುಸಾರವಾಗಿ ಯೋಗಾಸನಗಳನ್ನು ನಾವು ಮಾಡೋಣ. ಧರ್ಮಾಚರಣೆ ಇಲ್ಲದೇ ಇರುವುದೇ ಇತ್ತೀಚೆಗೆ ನಮ್ಮ ಸುತ್ತಮುತ್ತಲ ನಡೆಯುತ್ತಿರುವ ಅಪರಾಧಿಕ ಘಟನೆಗಳಿಗೆ ಕಾರಣವಾಗಿದೆ. ನಮ್ಮ ಧರ್ಮ ಕರ್ಮದ ಅರಿವಿಟ್ಟುಕೊಂಡು ನಾವು ಬಾಳೋಣ ಆರೋಗ್ಯವಂತರಾಗಿ ಆಯುಷ್ಯವಂತರಾಗೋಣ ಎಂದರು. ಕೋಣಂದೂರು ಮತ್ತು ಪುರಮಠದ ಅಭಿನವ ಸಿದ್ದವೀರೇಶ ಶಿವಾಚಾರ್ಯರು ಮಾತನಾಡಿ, ಭಕ್ತಿ ಭಾವದ ಕುರಿತು ಧರ್ಮವು ಬಾಳಿನ ಬೆಳಕಾಗಿದೆ. ಧರ್ಮವೇ ಜೀವನದ ಆತ್ಮವಾಗಿದ್ದು ಧರ್ಮಾಚರಣೆಯೇ ನಮ್ಮ ದೇಶದ ಸಂಪತ್ತಾಗಿದೆ ಎಂದರು. ಸುಣಕಲ್ಲಬಿದರಿಯ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ಹೊನ್ನಪ್ಪ ಹೊನ್ನಪ್ಪನವರ ಉಪನ್ಯಾಸ ನೀಡಿದರು.ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ಶ್ರೀ ಜಗದ್ಗುರು ವಾಗೀಶ ಪಂಡಿತಾರಾಧ್ಯ ಪಾಠ ಶಾಲೆಯ ಎಲ್ಲ ವಟುಗಳು ಹಾಗೂ ದಾನೇಶ್ವರಿ ಜಾಗೃತ ಅಕ್ಕನ ಬಳಗದ ಪದಾಧಿಕಾರಿಗಳು ಸೂರ್ಯ ನಮಸ್ಕಾರ ಮುಂತಾದ ಯೋಗಾಸನಗಳನ್ನು ಮಾಡಿದರು.ಇದೇ ಸಂದರ್ಭದಲ್ಲಿ ಶ್ರೀ ಉಜ್ಜಯಿನಿ ಜಗದ್ಗುರುಗಳ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆಯ ಸೇವಾ ಸಮಿತಿಯ ಅಧ್ಯಕ್ಷರಾಗಿ ಫಕ್ಕೀರೇಶ ಭಸ್ಮಾಂಗಿಮಠ ಅವರನ್ನು ಆಯ್ಕೆ ಮಾಡಲಾಯಿತು. ಶ್ರೀಮಠದ ಉಪಾಧ್ಯಕ್ಷ ಬಸವರಾಜಪ್ಪ ಪಟ್ಟಣಶೆಟ್ಟಿ, ಬಿದ್ದಾಡೆಪ್ಪ ಚಕ್ರಸಾಲಿ ಅಮೃತಗೌಡ ಹಿರೇಮಠ, ಜಗದೀಶ ಮಳಿಮಠ, ವಿ.ಎಂ. ಕರ್ಜಗಿ, ಜ್ಯೋತಿ ಬಣ್ಣದ, ಸೋಮನಾಥ ಹಿರೇಮಠ, ಮೃತ್ಯುಂಜಯ ಪಾಟೀಲ, ರಾಚಯ್ಯ ಶಾಸ್ತ್ರಿಗಳು, ಗೌರಿಶಂಕರಸ್ವಾಮಿ ನೆಗಳೂರುಮಠ, ಎಂ.ಕೆ. ಹಾಲಸಿದ್ದಯ್ಯ ಶಾಸ್ತ್ರೀಗಳು, ಗಾಯತ್ರಿ ಕುರುವತ್ತಿ ಭಾಗ್ಯಶ್ರಿ ಗುಂಡಗಟ್ಟಿ ಹಾಗೂ ತಾಲೂಕು ಶ್ರೀ ವೀರಶೈವ ಜಂಗಮ ಪುರೋಹಿತ ಮತ್ತು ಅರ್ಚಕರ ಸಂಘ, ಶ್ರೀ ದಾನೇಶ್ವರಿ ಜಾಗೃತಿ ಅಕ್ಕನ ಬಳಗ ಹಾಗೂ ಕದಳಿ ವೇದಿಕೆಯ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.